ಗುಜರಾತ್ ನ ಆಲ್ವಾಡಾ ಗ್ರಾಮದಲ್ಲಿ ದಲಿತ ಕ್ಷೌರ ನಿಷೇಧ ಅಂತ್ಯ; ಪರಿಶಿಷ್ಟ ಜಾತಿಯ ಜನರಿಗೆ ಮುಕ್ತ ಪ್ರವೇಶಾವಕಾಶ

PC: x.com/timesofindia
ಅಲ್ವಾಡ (ಬನಸ್ಕಾಂತ): ದಶಕಗಳ ಜಾತಿ ತಾರತಮ್ಯದ ಅಂತ್ಯದ ಸಂಕೇತವಾಗಿ ಕ್ಷೌರದ ಅಂಗಡಿಗೆ ದಲಿತರಿಗೆ ಮುಕ್ತ ಪ್ರವೇಶ ನೀಡುವ ಮೂಲಕ ಆಲ್ವಾಡ ಗ್ರಾಮ ಹೊಸ ಇತಿಹಾಸ ಬರೆದಿದೆ. ಆಗಸ್ಟ್ 7ರಂದು ಗ್ರಾಮದ ಕೃಷಿಕೂಲಿ ಕಾರ್ಮಿಕ ಕೀರ್ತಿ ಚೌಹಾಣ್ ಗ್ರಾಮದ ಕ್ಷೌರದ ಅಂಗಡಿಯಲ್ಲಿ ಕೂದಲು ಕತ್ತರಿಸಿಕೊಂಡು ಮೊಟ್ಟಮೊದಲ ದಲಿತ ಯುವಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಗ್ರಾಮದ ದಲಿತರಿಗೆ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ ಅವಕಾಶ ಒಂದು ವಾರ ಮೊದಲೇ ಲಭ್ಯವಾದಂತಾಗಿದ್ದು, ಗ್ರಾಮದ ಐದು ಕ್ಷೌರದ ಅಂಗಡಿಗಳು ಪರಿಶಿಷ್ಟ ಜಾತಿಯ ಜನರಿಗೆ ಮುಕ್ತ ಪ್ರವೇಶಾವಕಾಶ ನೀಡಿವೆ.
ಸುಮಾರು 6500 ಜನರಿರುವ ಈ ಗ್ರಾಮದಲ್ಲಿ 250 ಮಂದಿ ದಲಿತರಿಗೆ ಹಲವು ತಲೆಮಾರುಗಳಿಂದ ಈ ಗ್ರಾಮದ ಕ್ಷೌರದ ಅಂಗಡಿಗಳಲ್ಲಿ ತಲೆಗೂದಲು ಕತ್ತರಿಸಿಕೊಳ್ಳುವ ಅವಕಾಶ ಇರಲಿಲ್ಲ. ತಮ್ಮ ಜಾತಿ ಗುರುತನ್ನು ಮರೆಮಾಚಿ ಇತರ ಗ್ರಾಮಗಳಿಗೆ ತೆರಳಿ ತಲೆಗೂದಲು ತೆಗೆಸಿಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಆದರೆ ಹಲವು ತಿಂಗಳುಗಳ ಚರ್ಚೆ ಬಳಿಕ ಗ್ರಾಮದ ಎಲ್ಲ ಸಮುದಾಯಗಳ ಮುಖಂಡರು ಈ ಅಲಿಖಿತ ನಿಷೇಧ ಕೊನೆಗೊಳಿಸಲು ಒಪ್ಪಿಕೊಳ್ಳುವ ಮೂಲಕ ಬದಲಾವಣೆ ಸಾಧ್ಯವಾಗಿದೆ.
"ಗ್ರಾಮದಲ್ಲಿ ಕೂದಲು ತೆಗೆಸಿಕೊಂಡ ಮೊದಲ ದಲಿತ ನಾನು. ನನಗೆ ನೆನಪಿರುವಂತೆ ನಾನು ಕೂದಲು ಕತ್ತರಿಸಿಕೊಳ್ಳಲು ಇತರ ಪಟ್ಟಣಗಳಿಗೆ ಹೋಗಬೇಕಾಗಿತ್ತು. 24 ವರ್ಷದ ನನ್ನ ಜೀವನದಲ್ಲಿ ಅಂತಿಮವಾಗಿ ನಾನು ನಿರಾಳವಾಗಿದ್ದು, ಗ್ರಾಮದಲ್ಲಿ ಸ್ವೀಕೃತಗೊಂಡಿದ್ದೇನೆ" ಎಂದು ಕೀರ್ತಿ ಚೌಹಾಣ್ ಭಾವನೆಗಳನ್ನು ಹಂಚಿಕೊಂಡರು.
ದಲಿತ ಸಮುದಾಯದ ನಿರಂತರ ಪ್ರಯತ್ನ ಮತ್ತು ಸ್ಥಳೀಯ ಚಳವಳಿಗಾರ ಚೇತನ್ ದಭಿಯವರ ಬೆಂಬಲದಿಂದ ಇದು ಸಾಧ್ಯವಾಗಿದೆ. ಈ ಅಸಂವಿಧಾನಿಕ ಕ್ರಮದ ಬಗ್ಗೆ ಮೇಲ್ವರ್ಗದವರ ಮತ್ತು ಕ್ಷೌರಿಕರ ಮನೋಭಾವವನ್ನು ಬದಲಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸಿದ್ದರು. ಮನವೊಲಿಕೆ ವಿಫಲವಾದಾಗ ಪೊಲೀಸರು ಮತ್ತು ಜಿಲ್ಲಾಡಳಿತ ಮಧ್ಯಪ್ರವೇಶಿಸಬೇಕಾಯಿತು.
"ಈ ಹಿಂದೆ ಇದ್ದ ಕ್ರಮದ ಬಗ್ಗೆ ಗ್ರಾಮದ ಸರಪಂಚನಾಗಿ ನನಗೆ ತಪ್ಪಿತಸ್ಥ ಎಂಬ ಮನೋಭಾವನೆ ಇತ್ತು. ನನ್ನ ಅವಧಿಯಲ್ಲಿ ಇದು ಕೊನೆಗೊಂಡಿದೆ ಎಂಬ ಹೆಮ್ಮೆ ನನಗಿದೆ" ಎಂದು ಗ್ರಾಮದ ಅಧ್ಯಕ್ಷ ಸುರೇಶ್ ಚೌಧರಿ ಹೇಳಿದರು.
ಮಮ್ತತ್ ದಾರ್ ಜನಕ್ ಮೆಹ್ತಾ ನೇತೃತ್ವದ ಜಿಲ್ಲಾಡಳಿತ ತಂಡ ಈ ಸಮಸ್ಯೆ ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.







