ಪ್ರಬಲ ಜಾತಿಗಳಿಗೆ ಮುಖಮಾಡಿ ಮನೆಗಳನ್ನು ನಿರ್ಮಿಸಲು ದಲಿತರಿಗೆ ಅವಕಾಶ ನಿರಾಕರಣೆ!
ತಮಿಳುನಾಡಿನ ತೂತುಕುಡಿಯ ಗ್ರಾಮದಲ್ಲಿನ ಜಾತೀಯತೆಯ ಪಿಡುಗು ಬೆಳಕಿಗೆ
Photo : newindianexpress.com
ತೂತುಕುಡಿ: ಕಳೆದ 40 ವರ್ಷಗಳಿಂದ ಪರಿಶಿಷ್ಟ ಜಾತಿಗಳವರು ತಮ್ಮ ಮನೆಗಳನ್ನು ಪ್ರಬಲ ಜಾತಿಗಳ ಮನೆಗಳಿಗೆ ಮುಖಮಾಡಿ ನಿರ್ಮಿಸುವುದನ್ನು ನಿಷೇಧಿಸುವ ಅಲಿಖಿತ ಜಾತಿ ವ್ಯವಸ್ಥೆಯೊಂದು ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿರುವ ಕುಲಶೇಖರಪುರಂ ಗ್ರಾಮಪಂಚಾಯತ್ನ ಪೆರುಮಾಳಪಟ್ಟಿ ಎಂಬಲ್ಲಿ ರೂಢಿಯಲ್ಲಿದೆ ಎಂಬುದು ಇದೀಗ ಬೆಳಕಿಗೆ ಬಂದಿದೆ.
ತೂತುಕುಡಿ ಜಿಲ್ಲೆಯ ಕೋವಿಲ್ಪಟ್ಟಿ ಪಟ್ಟಣದಿಂದ ಆರು ಕಿ.ಮೀ. ದೂರದಲ್ಲಿರುವ ಈ ಗ್ರಾಮವಿದೆ. 1986ರಲ್ಲಿ ಅರುಂದತಿಯಾರ್ ಎಂಬ ಪರಿಶಿಷ್ಟ ಜಾತಿಗಳ ೩೫ ಕುಟುಂಬಗಳಿಗೆ ರಾಜ್ಯ ಸರಕಾರವು ಈ ಗ್ರಾಮದಲ್ಲಿ ಮನೆಗಳನ್ನು ನಿರ್ಮಿಸಲು ಜಮೀನುಗಳನ್ನು ಹಂಚಿತ್ತು. ಪೆರುಮಾಳ್ಪಟ್ಟಿಯಲ್ಲಿ ಗ್ರಾಮದ ಪಕ್ಕದಲ್ಲಿರುವ ಗುಡ್ಡವೊಂದರ ಅಂಚಿನಲ್ಲಿರುವ ಅರುಂದತಿಯಾರ್ ಕಾಲನಿಯಲ್ಲಿ ಮೂರು ಸಾಲಿನಲ್ಲಿ ಹಂಚಿನ ಮನೆಗಳಿವೆ. ಅರುಂಧತಿಯಾರ್ ಕಾಲನಿಯ ಪೂರ್ವಬಾಗದಲ್ಲಿ ಹಿಂದುಳಿದ ಜಾತಿಗೆ ಸೇರಿದ ನಾಯ್ಕರ್ ಸಮುದಾಯದವರ ಮನೆಗಳಿವೆ.
ಅರುಂದತಿಯಾರ್ ಕಾಲನಿಯ ಕೊನೆಯ ಸಾಲಿನಲ್ಲಿರುವ ಮನೆಗಳವರಿಗೆ, ಅವರ ಸಮೀಪದಲ್ಲೇ ಇರುವ ಪ್ರಬಲ ಜಾತಿಗಳವರ ಮನೆಗಳಿಗೆ ಮುಖ ಮಾಡಿ ಮನೆಗಳನ್ನು ನಿರ್ಮಿಸಲು ಅವಕಾಶ ನೀಡುತ್ತಿಲ್ಲವೆಂದು ಸ್ಥಳೀಯ ಯುವಕನೊಬ್ಬ ಟಿಎನ್ಐಇ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾನೆ.
‘‘ಈ ಕಾಲನಿಯು ನಿರ್ಮಾಣವಾದಾಗಿನಿಂದ ಜಾತಿವಾದ ಅಸ್ತಿತ್ವದಲ್ಲಿದೆ. ನಾವು ಅದನ್ನು ವಿರೋಧಿಸುವುದಿಲ್ಲ. ಯಾಕೆಂದರೆ ನಮ್ಮ ಜೀವನೋಪಾಯಕ್ಕಾಗಿ ನಾವು ಆ ಜಾತಿಯವರನ್ನು ಅವಲಂಭಿಸಿದ್ದೇವೆ’’ ಎಂದು ಆ ಗ್ರಾಮದ ಅರುಂಧತಿಯಾರ್ ಸಮುದಾಯದ ವೃದ್ಧೆಯೊಬ್ಬರು ಅಸಹಾಯಕರಾಗಿ ಹೇಳುತ್ತಾರೆ.
ಅರುಂದತಿಯಾರ್ ಜಾತಿಗಳವರು ಜಾತಿ ನಿಂದನೆಯನ್ನು ಅನುಭವಿಸುತ್ತಲೇ ಇದ್ದಾರೆ. ಈ ಪಿಡುಗಿನ ವಿರುದ್ಧ ಯಾವುದೇ ವಿರೋಧವನ್ನು ವ್ಯಕ್ತಪಡಿಸಿದ್ದಲ್ಲಿ ಅವರು ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ಕೋವಿಲ್ಪಟ್ಟಿಯ ನ್ಯಾಯವಾದಿ ಭೀಮರಾವ್ ಕಳವಳ ವ್ಯಕ್ತಪಡಿಸುತ್ತಾರೆ.