ದಲ್ಲೇವಾಲ್ ವೈದ್ಯಕೀಯ ನೆರವು ಸ್ವೀಕರಿಸಿದ್ದಾರೆ, ಅವರನ್ನು ತಾತ್ಕಾಲಿಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ: ಸುಪ್ರೀಕೋರ್ಟ್ಗೆ ಪಂಜಾಬ್ ಸರಕಾರ ಮಾಹಿತಿ

ಜಗಜೀತ್ ಸಿಂಗ್ ಡಲ್ಲೇವಾಲ್ | PC : PTI
ಹೊಸದಿಲ್ಲಿ: ಕೇಂದ್ರ ಸರಕಾರದ ಉನ್ನತ ಮಟ್ಟದ ನಿಯೋಗ ಭೇಟಿಯಾದ ಬಳಿಕ ರೈತ ನಾಯಕ ಜಗಜೀತ್ ಸಿಂಗ್ ದಲ್ಲೇವಾಲ್ ವೈದ್ಯಕೀಯ ನೆರವನ್ನು ಸ್ವೀಕರಿಸಿದ್ದಾರೆ. ಅವರನ್ನು ಖನೌರಿಯ ಪ್ರತಿಭಟನಾ ಸ್ಥಳದಿಂದ 50 ಮೀಟರ್ ದೂರದಲ್ಲಿರುವ ತಾತ್ಕಾಲಿಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂಬ ಪಂಜಾಬ್ ಸರಕಾರದ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ಬುಧವಾರ ದಾಖಲಿಸಿಕೊಂಡಿದೆ.
ಈ ಬೆಳವಣಿಗೆಯನ್ನು ‘‘ಸಕಾರಾತ್ಮಕ’’ ಎಂದು ಪ್ರತಿಪಾದಿಸಿದ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ, 2025 ಫೆಬ್ರವರಿ 14ರಂದು ಚಂಡಿಗಢದಲ್ಲಿ ಕೇಂದ್ರ ಹಾಗೂ ಇತರ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಭೇಟಿಗೆ ರೈತರು ಒಪ್ಪಿಕೊಂಡಿದ್ದಾರೆ ಎಂಬ ಪಂಜಾಬ್ನ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ಹೇಳಿಕೆಯನ್ನು ಕೂಡ ದಾಖಲಿಸಿಕೊಂಡಿತು.
ಡಲ್ಲೇವಾಲ್ ಅವರೊಂದಿಗೆ ಉಪವಾಸ ಮುಷ್ಕರ ನಡೆಸುತ್ತಿರುವ 110ಕ್ಕೂ ಅಧಿಕ ಇತರ ರೈತ ನಾಯಕರು ಕೂಡ ಉಪವಾಸ ಮುಷ್ಕರವನ್ನು ಅಂತ್ಯಗೊಳಿಸಿದ್ದಾರೆ ಎಂದು ಸಿಂಗ್ ಪೀಠಕ್ಕೆ ತಿಳಿಸಿದ್ದಾರೆ.
ಮಾತುತೆಗೆ ನಿಗದಿಪಡಿಸಲಾದ ದಿನಕ್ಕಿಂತ ಎರಡು ದಿನಗಳ ಮುನ್ನ ಚಂಡಿಗಢ ತಲುಪವಂತೆ ಪೀಠ ಡಲ್ಲೇವಾಲ್ ಅವರಿಗೆ ಸಲಹೆ ನೀಡಿದೆ. ಅಲ್ಲದೆ, ಚಂಡಿಗಢದಲ್ಲಿರುವ ತಜ್ಞ ವೈದ್ಯರೊಂದಿಗೆ ಅವರ ಆರೋಗ್ಯದ ಕುರಿತು ಸಮಾಲೋಚಿಸುವಂತೆ ಸಲಹೆ ನೀಡಿದೆ. ಇದರಿಂದ ಸಭೆಯಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳಲು ಸಾಧ್ಯ ಎಂದು ಅದು ಹೇಳಿದೆ.
ನ್ಯಾಯಾಲಯ ಪಂಜಾಬ್ನ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾ ನಿರ್ದೇಶಕರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವಂತೆ ನೀಡಿದ ಆದೇಶವನ್ನು ಅಮಾನತಿನಲ್ಲಿರಿಸಿತು. ಅಲ್ಲದೆ ಅವರಿಗೆ ವೈಯುಕ್ತಿಕವಾಗಿ ಹಾಜರಾಗುವುದರಿಂದ ವಿನಾಯತಿ ನೀಡಿ, ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಲು ಅನುಮತಿ ನೀಡಿತು.
ಅನಂತರ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ ಅಂತ್ಯಕ್ಕೆ ಮುಂದೂಡಿತು.







