Odisha ಕರಾವಳಿಯಲ್ಲಿ ಮುಳುಗಿದ ಸರಕು ಸಾಗಣೆ ಹಡಗಿನ 22 ಸಿಬ್ಬಂದಿ ನಾಪತ್ತೆ; ಕೋಸ್ಟ್ ಗಾರ್ಡ್ ನಿಂದ ತೀವ್ರ ಶೋಧ

ಸಾಂದರ್ಭಿಕ ಚಿತ್ರ | Photo Credit : indianexpress
ಹೊಸದಿಲ್ಲಿ: ಪನಾಮ ಧ್ವಜ ಹೊತ್ತ ಸರಕು ಹಡಗು ಬಂಗಾಳಕೊಲ್ಲಿಯಲ್ಲಿ ಮುಳುಗಿದ ಒಂದು ದಿನದ ಬಳಿಕ, ನಾಪತ್ತೆಯಾಗಿರುವ 22 ಸಿಬ್ಬಂದಿಗಾಗಿ ಭಾರತೀಯ ಕರಾವಳಿ ಕಾವಲು ಪಡೆ (Coast Guard), ಪೂರ್ವ ನೌಕಾ ಕಮಾಂಡ್ ಹಾಗೂ ಇತರ ಸಂಸ್ಥೆಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.
‘MV OCEAN WINNER’ ಹಡಗು ಶನಿವಾರ ತಡರಾತ್ರಿ ಒಡಿಶಾದ ಪ್ಯಾರದೀಪ್ ಕರಾವಳಿಯಿಂದ ಸುಮಾರು 230 ನಾಟಿಕಲ್ ಮೈಲು ದೂರದಲ್ಲಿ ಮುಳುಗಿದೆ. ಹಡಗಿನಲ್ಲಿದ್ದ 24 ಸಿಬ್ಬಂದಿಯಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ. ಉಳಿದ 22 ಮಂದಿಗಾಗಿ ಕನಿಷ್ಠ ಮೂರು ಹಡಗುಗಳು ಸಮುದ್ರದ ಮೇಲ್ಮೈಯಲ್ಲಿ ಶೋಧ ನಡೆಸುತ್ತಿವೆ ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.
ಕೋಸ್ಟ್ ಗಾರ್ಡ್ಗೆ ನೆರವಾಗಲು ಪೂರ್ವ ನೌಕಾ ಕಮಾಂಡ್ P8I ವಿಮಾನವನ್ನು ಕಣ್ಗಾವಲು ಕಾರ್ಯಾಚರಣೆಗೆ ನಿಯೋಜಿಸಿದೆ. ಆದರೆ ಬಂಗಾಳಕೊಲ್ಲಿಯಲ್ಲಿ ಸಮುದ್ರದ ಅಲೆಗಳು ಪ್ರಕ್ಷುಬ್ಧವಾಗಿರುವುದರಿಂದ ಶೋಧ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಸ್ಟ್ ಗಾರ್ಡ್ ವಕ್ತಾರ ಕಮಾಂಡೆಂಟ್ ಅಮಿತ್ ಉನಿಯಾಲ್ ಮಾತನಾಡಿ, ಲೈಫ್ ರಾಫ್ಟ್ ಗಳ ನೆರವಿನಿಂದ ರಕ್ಷಿಸಲಾದ ಇಬ್ಬರು ಸಿಬ್ಬಂದಿಯನ್ನು ಕೋಸ್ಟ್ ಗಾರ್ಡ್ ಹಡಗಿಗೆ ಕರೆತರಲಾಗಿದೆ. ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಅವರನ್ನು ಸಮುದ್ರ ದಡಕ್ಕೆ ಕರೆತರಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಕ್ಷಿಸಲಾದ ಇಬ್ಬರ ಗುರುತು, ಹುದ್ದೆ ಹಾಗೂ ಆರೋಗ್ಯ ಸ್ಥಿತಿಯ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಅವರು ಸಮುದ್ರದ ಮಧ್ಯದಲ್ಲಿರುವುದರಿಂದ ಸದ್ಯ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಉಳಿದ ಸಿಬ್ಬಂದಿಯನ್ನು ಪತ್ತೆಹಚ್ಚಲು ಎಲ್ಲ ಪ್ರಯತ್ನಗಳನ್ನೂ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರು ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಎಲ್ಲ ಸಂಸ್ಥೆಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ನಿಕಟವಾಗಿ ಹಾಗೂ ಸಕ್ರಿಯವಾಗಿ ಸಮನ್ವಯ ಸಾಧಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
‘ಒಡಿಶಾ ಕರಾವಳಿಯಲ್ಲಿ MV OCEAN WINNER ಒಳಗೊಂಡ ದುರದೃಷ್ಟಕರ ಘಟನೆಯಿಂದ ತೀವ್ರ ಕಳವಳಗೊಂಡಿದ್ದೇನೆ. ಪನಾಮ ಧ್ವಜದ ಹಡಗು ಪ್ಯಾರದೀಪ್ ಬಂದರಿನಿಂದ ಚೀನಾಕ್ಕೆ ಕಬ್ಬಿಣದ ಅದಿರನ್ನು ಸಾಗಿಸುತ್ತಿತ್ತು. ಎಲ್ಲ ಸಂಸ್ಥೆಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಿಕಟವಾಗಿ ಹಾಗೂ ಸಕ್ರಿಯವಾಗಿ ಸಮನ್ವಯಗೊಳಿಸುತ್ತಿವೆ. ಇಬ್ಬರು ಬದುಕುಳಿದವರನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು, ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಹುದ್ದೆ ಮತ್ತು ಗುರುತನ್ನು ಪರಿಶೀಲಿಸಲಾಗುತ್ತಿದೆ. ಉಳಿದ ಸಿಬ್ಬಂದಿಯ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ’ ಎಂದು ಸೋನೋವಾಲ್ Xನಲ್ಲಿ ತಿಳಿಸಿದ್ದಾರೆ.
ರಕ್ಷಣಾ ಸಚಿವಾಲಯದ ವಕ್ತಾರರ ಪ್ರಕಾರ, ಭಾರತೀಯ ನೌಕಾಪಡೆಯ P8I ವಿಮಾನ ನಡೆಸಿದ ನಿರಂತರ ಕಣ್ಗಾವಲು ಹಾಗೂ ಕೇಂದ್ರೀಕೃತ ವೈಮಾನಿಕ ಶೋಧದಿಂದ ವರದಿಯಾದ ಸ್ಥಳದ ಸಮೀಪ ಎರಡು ತೇಲುತ್ತಿದ್ದ ಲೈಫ್ ರಾಫ್ಟ್ ಗಳು ಮತ್ತು ತೈಲ ಸೋರಿಕೆ ಪತ್ತೆಯಾಗಿವೆ. ಇಬ್ಬರು ಬದುಕುಳಿದವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಉಳಿದವರಿಗಾಗಿ ಶೋಧ ಮುಂದುವರಿದಿದೆ ಎಂದು ವಕ್ತಾರರು ತಿಳಿಸಿದ್ದಾರೆ.
72 ಸಾವಿರ ಟನ್ ಗೂ ಅಧಿಕ ಕಬ್ಬಿಣದ ಅದಿರು
ಒಡಿಶಾದಿಂದ ಚೀನಾಕ್ಕೆ 72,000 ಟನ್ ಗೂ ಅಧಿಕ ಕಬ್ಬಿಣದ ಅದಿರನ್ನು ಸಾಗಿಸುತ್ತಿದ್ದ ಹಡಗು, ಸಿಂಗಾಪುರದಲ್ಲಿ ನಿಲುಗಡೆ ಮಾಡಿಕೊಳ್ಳುವ ಯೋಜನೆಯೊಂದಿಗೆ ಶುಕ್ರವಾರ ಮುಂಜಾನೆ ಪ್ಯಾರದೀಪ್ ಬಂದರಿನಿಂದ ಹೊರಟಿತ್ತು. ಹಡಗಿನಲ್ಲಿ ಒಟ್ಟು 24 ಸಿಬ್ಬಂದಿ ಇದ್ದರು. ಅವರಲ್ಲಿ ಇಬ್ಬರನ್ನು ಶನಿವಾರ ಸಮೀಪದಲ್ಲಿದ್ದ ವಾಣಿಜ್ಯ ಹಡಗೊಂದು ರಕ್ಷಿಸಿತ್ತು.
ಹಡಗು ಮುಳುಗಲು ನಿಖರ ಕಾರಣ ಏನು ಎಂಬುದು ಇನ್ನೂ ಖಚಿತವಾಗಿಲ್ಲ. 24 ಸಿಬ್ಬಂದಿಯಲ್ಲಿ 20 ಮಂದಿ ಚೀನಾದವರು, ಮೂವರು ಮ್ಯಾನ್ಮಾರ್ ನವರು ಹಾಗೂ ಒಬ್ಬರು ಬಾಂಗ್ಲಾದೇಶದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಡಗಿನೊಂದಿಗೆ ಸಂಪರ್ಕ ಕಡಿತಗೊಂಡ ಬಳಿಕ ಶ್ರೀ ವಿಜಯಪುರಂ (ಹಿಂದಿನ ಪೋರ್ಟ್ ಬ್ಲೇರ್)ನಲ್ಲಿರುವ ಸಾಗರ ರಕ್ಷಣಾ ಸಮನ್ವಯ ಕೇಂದ್ರ (MRCC) ತುರ್ತು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು.
1998ರಲ್ಲಿ ನಿರ್ಮಾಣಗೊಂಡ ‘MV OCEAN WINNER’ ಹಡಗು ಸುಮಾರು 73,000 ಟನ್ ಗಳ ಸರಕು ಸಾಗಣೆ ಸಾಮರ್ಥ್ಯ ಹೊಂದಿತ್ತು ಎಂದು ಲಭ್ಯವಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.
2009ರಲ್ಲೂ ಹಡಗು ಮುಳುಗಿತ್ತು
2009ರ ಸೆಪ್ಟೆಂಬರ್ ನಲ್ಲಿ 24,000 ಟನ್ ಕಬ್ಬಿಣದ ಅದಿರು ಸಾಗಿಸುತ್ತಿದ್ದ ಮಂಗೋಲಿಯಾ ಧ್ವಜದ ‘MV Black Rose’ ಹಡಗು ಪ್ಯಾರದೀಪ್ ಬಂದರಿನಲ್ಲಿ ಲಂಗರು ಹಾಕಿದ ಕೆಲವೇ ಗಂಟೆಗಳ ಬಳಿಕ ಕರಾವಳಿಯಿಂದ ಸುಮಾರು 3 ಕಿ.ಮೀ. ದೂರದಲ್ಲಿ ಮುಳುಗಿತ್ತು.
ತಾಂತ್ರಿಕ ದೋಷದಿಂದ ಹಡಗು ಒಂದು ಬದಿಗೆ ವಾಲಿ ಮುಳುಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು. ಹಡಗಿನ ಮುಖ್ಯ ಇಂಜಿನಿಯರ್ ಹೊರತುಪಡಿಸಿ ಉಳಿದ ಎಲ್ಲ ಸಿಬ್ಬಂದಿಯನ್ನು ರಕ್ಷಿಸಲಾಗಿತ್ತು. ಉಕ್ರೇನ್ ಪ್ರಜೆಯಾಗಿದ್ದ ಮುಖ್ಯ ಇಂಜಿನಿಯರ್ನ ಮೃತದೇಹ ಒಂದು ವಾರದ ಬಳಿಕ ಪತ್ತೆಯಾಗಿತ್ತು.
ಪ್ಯಾರದೀಪ್ ದೇಶದ ಪ್ರಮುಖ ಬಂದರುಗಳಲ್ಲಿ ಒಂದಾಗಿದ್ದು, ಒಡಿಶಾದಿಂದ ದೂರದ ಪ್ರದೇಶಗಳಿಗೆ ಸಾಗಿಸುವ ದೊಡ್ಡ ಪ್ರಮಾಣದ ಸರಕು, ಅದರಲ್ಲೂ ಮುಖ್ಯವಾಗಿ ಖನಿಜ ಉತ್ಪನ್ನಗಳ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸೌಜನ್ಯ: indianexpress.com






