ಇರಾನ್ - ಇಸ್ರೇಲ್ ಸಂಘರ್ಷ | ‘ಅಪ್ಪ ನನ್ನನ್ನು ರಕ್ಷಿಸಿ’ ಎಂದು ಸಂದೇಶ ಕಳಿಸಿದ್ದ ಯುವತಿ ತವರಿಗೆ ವಾಪಸ್

PC : NDTV
ಹೊಸದಿಲ್ಲಿ: ಯುದ್ಧಪೀಡಿತ ಇರಾನ್ ನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿನಿಯೊಬ್ಬರು ಜೂನ್ 13ರಂದು “ಅಪ್ಪ ನನ್ನನ್ನು ರಕ್ಷಿಸಿ” ಎಂದು ತನ್ನ ತಂದೆಗೆ ಸಂದೇಶ ಕಳುಹಿಸಿದ್ದರು. ಇಂದು ಭಾರತದ ‘ಆಪರೇಷನ್ ಸಿಂಧು’ ಕಾರ್ಯಾಚರಣೆಯ ಭಾಗವಾಗಿ ದಿಲ್ಲಿಗೆ ಮರಳಿದ ತೆರವು ವಿಮಾನವು ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದಾಗ, ಆಕೆ ತನ್ನ ತಂದೆಯನ್ನು ಭಾವುಕವಾಗಿ ಭೇಟಿಯಾದ ಹೃದಯಸ್ಪರ್ಶಿ ಘಟನೆ ವರದಿಯಾಗಿದೆ.
ನೊಯ್ಡಾದ ನಿವಾಸಿಯಾದ ಝೋಯಾ ರಿಝ್ವಿ ಇರಾನ್ ನಲ್ಲಿ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿದ್ದರು. ಜೂನ್ 13ರಂದು ತಾನು ವಾಸಿಸುತ್ತಿರುವ ಸ್ಥಳದ ಬಳಿಯ ಇರಾನ್ ಸೇನಾ ನೆಲೆಯ ಮೇಲೆ ಇಸ್ರೇಲ್ ದಾಳಿ ನಡೆಸಿದ ನಂತರ, ಆಕೆ ತನ್ನನ್ನು ರಕ್ಷಿಸುವಂತೆ ತನ್ನ ತಂದೆಗೆ ಭಯಭೀತಳಾಗಿ ಸಂದೇಶ ರವಾನಿಸಿದ್ದರು. “ಅವರು ಒಂದು ಸೇನಾ ನೆಲೆಯ ಮೇಲೆ ದಾಳಿ ನಡೆಸಿದ್ದಾರೆ. ನಾನು ಎಂದಾದರೂ ನಿಮಗೆ ತಪ್ಪು ಮಾತನಾಡಿದ್ದರೆ, ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ. ಅಪ್ಪ ನನ್ನನ್ನು ರಕ್ಷಿಸಿ” ಎಂದು ಆಕೆ ಆ ಸಂದೇಶದಲ್ಲಿ ತನ್ನ ತಂದೆಗೆ ಮನವಿ ಮಾಡಿದ್ದರು. “ನಾನೀಗ ಮಲಗಲು ತೆರಳುತ್ತಿದ್ದೇನೆ. ನಾನು ಜೀವಂತವಾಗಿದ್ದೇನೆಯೊ ಇಲ್ಲವೊ ಎಂಬುದು ನಾಳೆ ನಿಮಗೆ ತಿಳಿಯಲಿದೆ” ಎಂದೂ ಆಕೆ ಭಾವುಕವಾಗಿ ಆ ಸಂದೇಶದಲ್ಲಿ ಹೇಳಿದ್ದರು.
ಶನಿವಾರ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ತೀರಾ ಭಾವುಕವಾಗಿದ್ದಂತೆ ಕಂಡು ಬಂದ ತನ್ನ ತಂದೆಯ ಪಕ್ಕ ನಿಂತಿದ್ದ ಝೋಯಾ ರಿಝ್ವಿ, “ನನಗೆ ನಿಜವಾಗಿಯೂ ಭಯವಾಗಿತ್ತು” ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳನ್ನು ತೆರವುಗೊಳಿಸಿದ್ದಕ್ಕೆ ಭಾರತ ಮತ್ತು ಇರಾನ್ ಸರಕಾರಗಳಿಗೆ ಆಕೆ ಧನ್ಯವಾದಗಳನ್ನೂ ಸಲ್ಲಿಸಿದ್ದಾರೆ.
ಜೂನ್ 13ರಂದು ಇರಾನ್ ನ ಪರಮಾಣು ಸ್ಥಾವರಗಳು ಹಾಗೂ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ ಇಸ್ರೇಲ್, ಇರಾನ್ ನ ಉನ್ನತ ಸೇನಾಧಿಕಾರಿಗಳನ್ನು ಹತ್ಯೆಗೈದ ನಂತರ, ಇರಾನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷ ಸ್ಫೋಟಗೊಂಡಿದೆ.







