ಮೋದಿ ಉಪನಾಮದ ಟೀಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆ: ರಾಹುಲ್ ಗಾಂಧಿಯ ಶಿಕ್ಷೆಗೆ ಸುಪ್ರೀಂ ತಡೆ

ಹೊಸದಿಲ್ಲಿ: 'ಮೋದಿ ಉಪನಾಮ' ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೀಡಲಾಗಿರುವ ಶಿಕ್ಷೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ರಾಹುಲ್ ಗಾಂಧಿ ಲೋಕಸಭೆ ಸದಸ್ವತ್ವದಿಂದ ಅನರ್ಹವಾಗಲು ಕಾರಣವಾಗಿರುವ ಗರಿಷ್ಠ ಎರಡು ವರ್ಷಗಳ ಶಿಕ್ಷೆಯನ್ನು ಸಮರ್ಥಿಸಲು ವಿಚಾರಣಾ ನ್ಯಾಯಾಲಯವು ಕಾರಣವನ್ನು ನೀಡಲಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
'ವಿಚಾರಣಾ ನ್ಯಾಯಾಲಯದ ಆದೇಶದ ಪರಿಣಾಮಗಳು ವ್ಯಾಪಕವಾಗಿವೆ. ರಾಹುಲ್ ಗಾಂಧಿ ಅವರು ಸಾರ್ವಜನಿಕ ಜೀವನದಲ್ಲಿ ಮುಂದುವರಿಯುವ ಹಕ್ಕು ಮಾತ್ರವಲ್ಲದೆ ಅವರನ್ನು ಆಯ್ಕೆ ಮಾಡಿದ ಮತದಾರರ ಮೇಲೂ ಪರಿಣಾಮ ಬೀರಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆದರೆ, ರಾಹುಲ್ ನೀಡಿರುವ ಹೇಳಿಕೆ ಉತ್ತಮ ಅಭಿರುಚಿಯಿಂದ ಕೂಡಿಲ್ಲ ಹಾಗೂ ಸಾರ್ವಜನಿಕ ಹುದ್ದೆಯಲ್ಲಿರುವವರು ಸಂಯಮ ಮತ್ತು ಎಚ್ಚರಿಕೆಯನ್ನು ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಜಾಪ್ರಭುತ್ವದಲ್ಲಿ ನಮಗೆ ಭಿನ್ನಾಭಿಪ್ರಾಯವಿದೆ, ಪ್ರಜಾಪ್ರಭುತ್ವದಲ್ಲಿ ನಮಗೆ ಅಸಮ್ಮತಿ ಇದೆ. ರಾಹುಲ್ ಗಾಂಧಿ ಕಠಿಣ ಅಪರಾಧಿ ಅಲ್ಲ. ಬಿಜೆಪಿ ಕಾರ್ಯಕರ್ತರು ಸಾಕಷ್ಟು ಪ್ರಕರಣಗಳನ್ನು ದಾಖಲಿಸಿದ್ದಾರೆ, ಆದರೆ ಯಾವುದೇ ಶಿಕ್ಷೆಯಾಗಲಿಲ್ಲ. ರಾಹುಲ್ ಈಗಾಗಲೇ ಎರಡು ಸಂಸತ್ತಿನ ಅಧಿವೇಶನಗಳನ್ನು ತಪ್ಪಿಸಿಕೊಂಡಿದ್ದಾರೆ " ಎಂದು ರಾಹುಲ್ ಗಾಂಧಿ ಪರ ಹಿರಿಯ ವಕೀಲರಾದ ಅಭಿಷೇಕ್ ಸಿಂಘ್ವಿ ಹೇಳಿದರು.
ತಮ್ಮ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದ ಗುಜರಾತ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಪಿ.ಎಸ್. ನರಸಿಂಹ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕನ ಶಿಕ್ಷೆಯನ್ನು ಎತ್ತಿಹಿಡಿದ ಗುಜರಾತ್ ಹೈಕೋರ್ಟ್ ತೀರ್ಪಿನ ವಿರುದ್ಧ ರಾಹುಲ್ ಗಾಂಧಿ ಸಲ್ಲಿಸಿದ ಮನವಿಯನ್ನು ಆಲಿಸುತ್ತಿದೆ. ಮಾನನಷ್ಟ ಪ್ರಕರಣದಲ್ಲಿ ಗಾಂಧಿಯವರ ಶಿಕ್ಷೆಯಿಂದಾಗಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಯಿತು.







