“ಟೈಮ್ಸ್ ನೌ ಸುದ್ದಿ ವಾಹಿನಿಯಿಂದ ಮಾನಹಾನಿಕಾರ ತಪ್ಪು ಮಾಹಿತಿಯ ಅಭಿಯಾನ”
ಚಿತ್ರ ನಿರ್ಮಾಣಕಾರ ಸುಧನ್ವ ದೇಶಪಾಂಡೆಯಿಂದ ಹೇಳಿಕೆ ಬಿಡುಗಡೆ

ಸುಧನ್ವ ದೇಶಪಾಂಡೆ Photo : bollybio.com
ಹೊಸದಿಲ್ಲಿ: ತಮ್ಮ ಹಾಗೂ ಪ್ರೊ. ಶರ್ಮಿಷ್ಠ ಸಹಾ ವಿರುದ್ಧ ಟೈಮ್ಸ್ ನೌ ಸುದ್ದಿ ವಾಹಿನಿ ತಪ್ಪು ಮಾಹಿತಿಯ ಅಭಿಯಾನದ ನಡೆಸುತ್ತಿದೆ ಎಂದು ನ. 9ರಂದು ಚಿತ್ರ ನಿರ್ಮಾಣಕಾರ, ನಟ ಹಾಗೂ ಲೇಖಕ ಸುಧನ್ವ ದೇಶಪಾಂಡೆ ಹೇಳಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಈ ಹೇಳಿಕೆಯಲ್ಲಿ ಪ್ರೊ. ಸಹಾ ಹಾಗೂ ತನ್ನನ್ನು ಹಮಾಸ್ ಬೆಂಬಲಿಗರು ಎಂದು ಉಲ್ಲೇಖಿಸಿ ಟೈಮ್ಸ್ ನೌ ಸುದ್ದಿ ವಾಹಿನಿಯು ಪ್ರಸಾರ ಮಾಡಿದ್ದ ಕಾರ್ಯಕ್ರಮವೊಂದನ್ನು ಉಲ್ಲೇಖಿಸಿದ್ದಾರೆ.
ನ. 6ರಂದು ಬಾಂಬೆ ಭಾರತೀಯ ತಾಂತ್ರಿಕ ಸಂಸ್ಥೆ(ಐಐಟಿ-ಬಿ)ಯಲ್ಲಿ ಉಪನ್ಯಾಸ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಇಸ್ರೇಲ್ ನ ಯಹೂದಿ ಚಿತ್ರ ನಿರ್ಮಾಣಕಾರ, ನಟ ಹಾಗೂ ರಂಗ ನಿರ್ದೇಶಕ ಜುಲಿಯಾನೊ ಮೇರ್ ಖಾಮಿಸ್ ನಿರ್ಮಿಸಿದ್ದ ‘ಅರ್ನಾಸ್ ಚಿಲ್ಡ್ರನ್’ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗಿತ್ತು. ಈ ಸಾಕ್ಷ್ಯಚಿತ್ರದ ಬಗ್ಗೆ ಪರಿಚಯ ಮಾಡಿಕೊಡಲು ಪ್ರೊ. ಸಹಾ ಅವರು ದೇಶಪಾಂಡೆ ಅವರನ್ನು ಆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಆ ಉಪನ್ಯಾಸ ಹಮಾಸ್ ಪರ ಹಾಗೂ ಹಿಂಸಾಚಾರದ ಪರ ಎಂದು ಕೆಲವು ವಿದ್ಯಾರ್ಥಿಗಳು ಆರೋಪಿಸಿದ್ದರು. ಇದಲ್ಲದೆ, ದೇಶಪಾಂಡೆ ಅವರು ತೀವ್ರವಾದಿಗಳನ್ನು ಬೆಂಬಲಿಸಿದ್ದಾರೆ ಎಂದು ದೂರಿದ್ದರು.
ಇದೀಗ ಪ್ರೊ. ಸಹಾ ವಿರುದ್ಧ ದೂರೊಂದು ದಾಖಲಾಗಿದ್ದು, ದೇಶಪಾಂಡೆ ಅವರಿಗೆ ಆಹ್ವಾನ ನೀಡಿರುವುದರ ಕುರಿತು ಪ್ರಶ್ನಿಸಲಾಗಿದೆ.
ಟೈಮ್ಸ್ ನೌ ಕಾರ್ಯಕ್ರಮ ಏನನ್ನು ಒಳಗೊಂಡಿತ್ತು?
ನ. 8ರಂದು “IITians allege Prof. Saha for inviting filmmaker who glorified Plestinian terrorist” ಎಂಬ ಕಾರ್ಯಕ್ರಮವನ್ನು ಟೈಮ್ಸ್ ನೌ ಸುದ್ದಿ ವಾಹಿನಿಯು ಪ್ರಸಾರ ಮಾಡಿತ್ತು. ಈ ಕಾರ್ಯಕ್ರಮವು “ಮುಂಬೈ: ವೇದಿಕೆ ಗಿಟ್ಟಿಸಿದ ಹಮಾಸ್ ಬೆಂಬಲಿಗರು” ಎಂಬ ಪ್ರಕಟಣೆಯೊಂದಿಗೆ ಪ್ರಾರಂಭವಾಗಿತ್ತು. ಆ ಕಾರ್ಯಕ್ರಮದ ನಿರೂಪಕಿಯು “ಹಮಾಸ್ ಬೆಂಬಲಿಗರ ಹೃದಯದ ನೆತ್ತರು ಜಿನುಗುವುದು ಮುಂದುವರಿದಿದೆ. ಆದರೆ, ಸ್ವಾತಂತ್ರ್ಯದ ಸೋಗಿನಲ್ಲಿ ಶಸ್ತ್ರಾಸ್ತಗಳನ್ನು ಕೈಗೆತ್ತಿಕೊಂಡ ಹೋರಾಟಗಾರರಿಂದ ಹತ್ಯೆಗೀಡಾದ ಮುಗ್ಧರಿಗಾಗಿಯಲ್ಲ” ಎಂದು ಹೇಳುತ್ತಿರುವುದನ್ನು ಕೇಳಬಹುದಾಗಿದೆ.
ನಂತರ ಆ ನಿರೂಪಕಿಯು ಬಾಂಬೆಯ ಐಐಟಿ ಸಂಸ್ಥೆಯ ಪ್ರೊ. ಶರ್ಮಿಷ್ಠ ಸಹಾ ಆಯೋಜಿಸಿದ್ದ ವೆಬಿನಾರ್ ಗೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲು ಸುಧನ್ವ ದೇಶಪಾಂಡೆಯವರನ್ನು ಆಹ್ವಾನಿಸಲಾಗಿತ್ತು ಎಂದು ಹೇಳುತ್ತಾರೆ.
ವಿದ್ಯಾರ್ಥಿಗಳು ಅಂತರ್ಜಾಲದಲ್ಲಿ ಪೋಸ್ಟ್ ಮಾಡಿರುವ ವೀಡಿಯೊವೊಂದರಲ್ಲಿ ದೇಶಪಾಂಡೆ ಅವರು ವೆಸ್ಟ್ ಬ್ಯಾಂಕ್ ನಲ್ಲಿನ ಅಲ್ ಅಕ್ಸಾ ಮಾರ್ಟಿರ್ಸ್ ಬ್ರಿಗೇಡ್ಸ್ ನ ಉನ್ನತ ನಾಯಕರ ಪೈಕಿ ಒಬ್ಬರಾಗಿರುವ ಝಕಾರಿಯಾ ಝುಬೇದಿಯನ್ನು ವೈಭವೀಕರಿಸುವುದು ಕಾಣಬಹುದಾಗಿದೆ ಎಂದೂ ಆ ನಿರೂಪಕಿಯು ಪ್ರತಿಪಾದಿಸುತ್ತಾರೆ. ಮುಂದುವರಿದು, ಹಮಾಸ್ ನಡೆಸಿದ ದಾಳಿಯನ್ನು ಫೆಲೆಸ್ತೀನಿಯನ್ನರು ತಮ್ಮ ತಾಯ್ನೆಲದಿಂದ ಹೊರದೂಡಲ್ಪಟ್ಟ 45 ವರ್ಷಗಳ ನಂತರ ನಡೆದಿರುವ ಸ್ವಾತಂತ್ರ್ಯ ಹೋರಾಟವೆಂದು ಅವರು ಬಣ್ಣಿಸಿದ್ದಾರೆ ಎಂದೂ ಆಕೆ ಹೇಳುತ್ತಾರೆ. ದೇಶಪಾಂಡೆಯವರ ಆರೋಪಿತ ಹೇಳಿಕೆಗಳಲ್ಲಿ ಶಿಶುಗಳ ಶಿರಶ್ಛೇದ, ಮಹಿಳೆಯರ ಅಪಹರಣ ಹಾಗೂ ವಿವೇಚನಾರಹಿತ ರಕ್ತಪಾತವನ್ನು ಸ್ವಾತಂತ್ರ್ಯ ಹೋರಾಟವೆಂದು ಮಾಫಿ ಮಾಡಲಾಗಿದೆ ಎಂದೂ ಆಕೆ ಪ್ರತಿಪಾದಿಸುತ್ತಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ದೇಶಪಾಂಡೆ, ಝಕಾರಿಯಾ ಝುಬೇದಿ ಪಾತ್ರಧಾರಿಯಾಗಿರುವ 2004ರ ಸಾಕ್ಷ್ಯಚಿತ್ರ ‘ಅರ್ನಾಸ್ ಚಿಲ್ಡ್ರನ್’ ಕುರಿತು ಪರಿಚಯ ಮಾಡಿಕೊಡುವಂತೆ ಪ್ರೊ. ಸಹಾ ನನ್ನನ್ನು ಕೋರಿದ್ದರು. ನನ್ನ ಭಾಷಣವು ತರಗತಿಯ ನಿಗದಿತ ಭಾಗವಾಗಿತ್ತು. ನಾವಿಬ್ಬರೂ 2015ರಲ್ಲಿ ಭೇಟಿಯಾಗುವ ಹೊತ್ತಿಗೆ ಶಸ್ತ್ರಾಸ್ತ್ರಗಳನ್ನು ತೊರೆದಿದ್ದ ಝಕರಿಯಾ, ಸಾಂಸ್ಕೃತಿಕ ಪ್ರತಿರೋಧದ ಕುರಿತು ವಕಾಲತ್ತು ವಹಿಸಿದ್ದರು ಎಂದು ಸ್ಪಷ್ಟೀಕರಣ ನೀಡಿದ್ದಾರೆ. ತಾನು ಝಕರಿಯಾ ಅವರನ್ನು ದಾರ್ಶನಿಕ ಎಂದು ಉಲ್ಲೇಖಿಸಿದ್ದೇನೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿರುವ ದೇಶಪಾಂಡೆ, ನಾನು ಝಕರಿಯಾ ಝುಬೇದಿಯವರನ್ನು ಯಾಕೆ ದಾರ್ಶನಿಕ ಎಂದು ಕರೆದೆನೆಂದರೆ, ಅವರು ನನ್ನೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಚಾರಿತ್ರಿಕ ಫೆಲೆಸ್ತೀನ್ ನ ಸಂಪೂರ್ಣ ಪ್ರಾಂತ್ಯವು ಅರಬರು, ಯಹೂದಿಗಳು, ಕ್ರಿಶ್ಚಿಯನ್ನರು ಹಾಗೂ ಇತರರು ಸಮಾನ ಹಕ್ಕುಗಳನ್ನು ಹೊಂದಿರುವ ಒಂದೇ ದೇಶವಾಗಿರಬೇಕು ಎಂಬ ಭವಿಷ್ಯದ ಕನಸನ್ನು ನನ್ನ ಮುಂದೆ ತೆರೆದಿಟ್ಟಿದ್ದರು ಎಂದು ಹೇಳಿದ್ದಾರೆ.
ಟೈಮ್ಸ್ ನೌ ಸುದ್ದಿ ವಾಹಿನಿಯು ತಮ್ಮ ವಿರುದ್ಧ ಮಾನಹಾನಿಕಾರಕ ತಪ್ಪು ಮಾಹಿತಿಯನ್ನು ಪ್ರಸಾರ ಮಾಡಿದೆ ಎಂದು ಸುಧನ್ವ ದೇಶಪಾಂಡೆ ಆರೋಪಿಸಿದ್ದಾರೆ. ನಾನು ನನ್ನ ಭಾಷಣದಲ್ಲಿ ಹಮಾಸ್ ಅನ್ನು ಉಲ್ಲೇಖಿಸಲೂ ಇಲ್ಲ ಅಥವಾ ವೈಭವೀಕರಿಸಲೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಂದುವರಿದು, ಟೈಮ್ಸ್ ನೌ ಪ್ರತಿಪಾದಿಸುತ್ತಿರುವಂತೆ ಝಕರಿಯಾ ಎಂದಿಗೂ ಹಮಾಸ್ ಸದಸ್ಯರಾಗಿರಲಿಲ್ಲ ಎಂಬುದರತ್ತ ಅವರು ಬೊಟ್ಟು ಮಾಡಿದ್ದಾರೆ.
“ನಾನು ಹಮಾಸ್ ಬೆಂಬಲಿಗ ಅಲ್ಲ. ಟೈಮ್ಸ್ ನೌ ಸುದ್ದಿ ವಾಹಿನಿಯು ಜನಾಂಗೀಯ ಹತ್ಯೆ ಮತ್ತು ಜನಾಂಗೀಯ ಶುದ್ಧೀಕರಣವನ್ನು ಮಾಫಿ ಮಾಡುತ್ತಿದೆ” ಎಂದೂ ಅವರು ಆರೋಪಿಸಿದ್ದಾರೆ.







