ಸಂವಿಧಾನ, ಪ್ರಜಾಪ್ರಭುತ್ವದ ಉಳಿವಿಗಾಗಿ ಸರ್ವಾಧಿಕಾರಿ, ಕೋಮುವಾದಿ ಮತ್ತು ಭ್ರಷ್ಟ ದುರಾಡಳಿತ ಶಕ್ತಿಗಳನ್ನು ಸೋಲಿಸಿ: ಮತದಾರರಿಗೆ ಸಂವಿಧಾನ ರಕ್ಷಣಾ ವೇದಿಕೆ ಮನವಿ

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ಸಂವಿಧಾನ ಉಳಿಯದೆ, ಭಾರತ ಒಂದು ದೇಶವಾಗಿ ಉಳಿಯಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವವನ್ನು ಉಳಿಸಿ, ಸಂವಿಧಾನವನ್ನು ರಕ್ಷಿಸಲು ಈ ಬಾರಿ ಕೇಂದ್ರದಲ್ಲಿ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಸರ್ಕಾರ ರಚನೆಯಾಗಬೇಕಿದೆ. ಸರ್ವಾಧಿಕಾರಿ, ಕೋಮುವಾದಿ ಮತ್ತು ಭ್ರಷ್ಟ ದುರಾಡಳಿತ ಶಕ್ತಿಗಳು ಸೋಲಬೇಕಿದೆ. ಹೀಗಾಗಿ, ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ದೇಶದ-ನಾಡಿನ ಜನರು ಎಚ್ಚರಿಕೆಯಿಂದ ಮತ್ತು ಸಂವಿಧಾನ ಉಳಿಸುವ ಆದ್ಯ ಕರ್ತವ್ಯದ ಭಾಗವಾಗಿ ಮತ ಚಲಾಯಿಸಬೇಕು ಎಂದು ಸಂವಿಧಾನ ರಕ್ಷಣಾ ವೇದಿಕೆ ಮನವಿ ಮಾಡಿದೆ.
ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಸಂವಿಧಾನ ರಕ್ಷಣಾ ವೇದಿಕೆ, ಭಾರತದ ಜನತೆಯ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿ ಬದುಕು ಹೇಗಿರಬೇಕು, ಯಾವ ಮೌಲ್ಯಗಳನ್ನು ಆಧರಿಸಿರಬೇಕು ಮತ್ತು ಯಾವ ದಿಕ್ಕಿನತ್ತ ಸಾಗಬೇಕೆಂದು ತಿಳಿಸಿ ಮುನ್ನೆಡೆಸುವ ಏಕೈಕ ಸಾಧನ ನಮ್ಮ ಸಂವಿಧಾನ. ಸಾಂವಿಧಾನಿಕ ಧರ್ಮ, ಸಾಂವಿಧಾನಿಕ ನೈತಿಕತೆ ಮತ್ತು ಸಾಂವಿಧಾನಿಕ ಮೌಲ್ಯಗಳೇ ನಮ್ಮ ದಾರಿದೀಪ. ಸಮಾನತೆ ಮತ್ತು ಸಾಮಾಜಿಕ -ಆರ್ಥಿಕ-ರಾಜಕೀಯ ನ್ಯಾಯಕ್ಕಾಗಿ ನಾವೇ ಸಮಾಲೋಚಿಸಿ-ಚರ್ಚಿಸಿ -ಒಮ್ಮತದ ಮೂಲಕ ರೂಪಿಸಿಕೊಂಡ ನಮ್ಮ ಸಂವಿಧಾನ , ಸ್ವಾತಂತ್ರ್ಯ ಚಳುವಳಿಯ ಬಹುದೊಡ್ಡ ಉತ್ಪನ್ನ. ಸ್ವಾತಂತ್ರ್ಯ ಚಳವಳಿಯ ತ್ಯಾಗ ಬಲಿದಾನಗಳ ಮೂರ್ತ ಸ್ವರೂಪ ಸಂವಿಧಾನ. ಆದ್ದರಿಂದಲೇ, ಇದು ಭಾರತದ ಜನತೆಯ ಸಾರ್ವಜನಿಕ ಬದುಕಿನ ಧರ್ಮಗ್ರಂಥ ಎಂದು ಹೇಳಿದೆ.
ಸ್ವಾತಂತ್ರ್ಯಾ ನಂತರ ಭಾರತದ ಜನತೆ ತಮ್ಮ ಪ್ರಾತಿನಿಧಿಕ ಸಂವಿಧಾನ ರಚನಾ ಸಭೆಯಲ್ಲಿ ಸಂವಿಧಾನವನ್ನು ರೂಪಿಸಿ ಅಳವಡಿಸಿಕೊಂಡು ಆಧಿಕೃತವಾಗಿ ಜಾರಿಗೊಳಿಸಿಕೊಂಡ ನಂತರ, ಭಾರತವನ್ನು ಹೇಗೆ ಕಟ್ಟಿಕೊಳ್ಳಬೇಕೆಂಬ ಬಗ್ಗೆ ಸಂವಿಧಾನದ ಪ್ರಸ್ತಾವನೆಯಲ್ಲಿ ಸ್ಪಷ್ಟವಾಗಿ ಬರೆದುಕೊಂಡಿದ್ದಾರೆ. ಅದರಂತೆ, ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿಸುವ ಮಹದಾಸೆಯನ್ನು ಅದು ಹೊಂದಿದೆ ಎಂದು ವಿವರಿಸಿದೆ.
ಮೊದಲ 65 ವರ್ಷಗಳಲ್ಲಿ ನಾವು ಸಂವಿಧಾನವನ್ನು ಪೂರ್ಣವಾಗಿ ಜಾರಿಗೊಳಿಸಲು ಸಾಧ್ಯವಾಗದಿದ್ದರೂ, ಸಾಂವಿಧಾನಿಕ ಮೌಲ್ಯಗಳಿಗೆ ಭಂಗವಾಗದ ರೀತಿಯಲ್ಲಿ ರಕ್ಷಿಸಿ ಕಾಪಾಡಿಕೊಂಡು ಮುನ್ನೆಡಯಲು ಸಾಧ್ಯವಾಗಿತ್ತೆಂಬುದು ಮಹತ್ವದ ಸಂಗತಿ. ಆದರೆ, ಕಳೆದ 10 ವರ್ಷಗಳಿಂದ ಸಂವಿಧಾನ ಹಾಗೂ ಸಾಂವಿಧಾನಿಕ ಮೌಲ್ಯಗಳ ಮೇಲೆ ನಿರಂತರ ದಾಳಿಯಾಗುತ್ತಿದ್ದು , ಸಂವಿಧಾನ ವಿರೋಧಿ ಶಕ್ತಿಗಳು ಸಂವಿಧಾನವನ್ನು ಬುಡಮೇಲು ಮಾಡುವ ದುಷ್ಕೃತ್ಯವನ್ನು ಕೆಲವು ಶಕ್ತಿಗಳು ನಿರಂತರವಾಗಿ ಮತ್ತು ವ್ಯವಸ್ಥಿತವಾಗಿ ಮಾಡುತ್ತಿವೆ. ಕೆಲವರ ಪುಂಡಾಟಿಕೆಯಂತು ಮಿತಿಮೀರಿದ್ದು, ಸಂವಿಧಾನವನ್ನೇ ಬದಲಾಯಿಸುವ ಉದ್ಧಟತನದ ಮಾತುಗಳ್ಳನಾಡುತ್ತಿದ್ದಾರೆ. ಒಟ್ಟಾರೆ, ಭಾರತದ ಸ್ವಾಂತಂತ್ರ್ಯ ಚಳವಳಿಯ ತ್ಯಾಗ ಬಲಿದಾನದ ಮೂಲಕ ಹೊಸ ಭಾರತವನ್ನು ಕಟ್ಟಿಕೊಳ್ಳಲು ಸಂವಿಧಾನಶಿಲ್ಪಿ ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚನೆಯಾದ ಜಗತ್ತಿನ ಶ್ರೇಷ್ಠ ಸಂವಿಧಾನ ಇಂದು ಬಹು ದೊಡ್ಡ ಅಪಾಯದಲ್ಲಿದೆ ಎಂದು ಸಂವಿಧಾನ ರಕ್ಷಣಾ ವೇದಿಕೆ ಎಚ್ಚರಿಸಿದೆ.
ಕಳೆದ 10 ವರ್ಷಗಳಲ್ಲಿ ಸಂವಿಧಾನವನ್ನು ಗೌಣಗೊಳಿಸುವ ಹಾಗೂ ಅಸ್ಥಿರಗೊಳಿಸುವ ಅನೇಕ ಕಾರ್ಯಗಳನ್ನು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ತನ್ನ ನೀತಿ, ಕಾನೂನು ಮತ್ತು ಕಾರ್ಯಕ್ರಮಗಳ ಜಾರಿಯಲ್ಲಿ ಅನುಸರಿಸಿದೆ. 10 ವರ್ಷಗಳಲ್ಲಿನ ಕನಿಷ್ಠ 10 ಸಂವಿಧಾನ ವಿರೋಧಿ ಉದಾಹರಣೆಗಳನ್ನು ಸಂವಿಧಾನ ರಕ್ಷಣಾ ವೇದಿಕೆ ಪಟ್ಟಿ ಮಾಡಿದೆ.
1. ಸಂವಿಧಾನದಲ್ಲಿನ ಶಿಕ್ಷಣದ ಮೂಲಭೂತ ಹಕ್ಕಿನ ಭಾಗವಾಗಿ ದೇಶದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಒದಗಿಸಲು ರೂಪಿಸಿ ಜಾರಿಗೊಳಿಸಿದ್ದ ಶಿಕ್ಷಣ ಹಕ್ಕು ಕಾಯ್ದೆಯ ಸಂಪೂರ್ಣ ನಿರ್ಲಕ್ಷ್ಯ.
2. ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಿನಲ್ಲಿ ಶಿಕ್ಷಣದ ಸಂಪೂರ್ಣ ಕೇಸರೀಕರಣ, ಕೋಮುವಾದೀಕರಣ, ಕೇಂದ್ರೀಕರಣ, ಖಾಸಗೀಕರಣ, ವಾಣಿಜ್ಯೀಕರಣ ಮತ್ತು ಕಾರ್ಪೊರೇಟರೀಕರಣ.
3. ಎಲ್ಲಾ ರಂಗಗಳಲ್ಲಿ ಅಸಂವಿಧಾನಿಕ ನೀತಿ/ಕಾನೂನುಗಳು ಮತ್ತು ಕಾರ್ಯಕ್ರಮಗಳ ಮೂಲಕ ಸಂವಿಧಾನದ ನಿರಂತರ ಉಲ್ಲಂಘನೆ.
4. ಜನರ ಗೌರವಯುತ ಬದುಕನ್ನು ಕಸಿದ ತೀವ್ರ ಬೆಲೆ ಏರಿಕೆ ಮತ್ತು ಆರ್ಥಿಕ ಸಂಕಷ್ಟ.
5. ಯುವಜನರ ಜೀವನವನ್ನು ದುರ್ಬರಗೊಳಿಸಿದ ನಿರುದ್ಯೋಗದ ಸಮಸ್ಯೆ.
6. ಸಂವಿಧಾನದ ರಾಜ್ಯ ನೀತಿಯ ನಿರ್ದೇಶಕ ತತ್ವಗಳ ಅಡಿಯಲ್ಲಿ ಸಮುದಾಯ ಮತ್ತು ಸಾರ್ವಜನಿಕ ಒಳಿತಿಗಾಗಿ ರಕ್ಷಿಸಬೇಕಾದ ಎಲ್ಲ ಸಾರ್ವಜನಿಕ ಆಸ್ತಿ ಮತ್ತು ಸಂಪನ್ಮೂಲಗಳ ಸಂಪೂರ್ಣ ಮಾರಾಟ.
7. ಧರ್ಮಾಂಧತೆಯ ಕೋಮುವಾದವನ್ನು ಹರಡುವ ಮತ್ತು ಸುಳ್ಳಿನ ಮೂಲಕ ದ್ವೇಷವ ಬಿತ್ತನೆಯನ್ನೇ ಎಲ್ಲರ ವಿಕಾಸವೆಂದು ಬಿಂಬಿಸುವ ಮೂಲಕ ದೇಶದ ಜನರನ್ನು ದಾರಿ ತಪ್ಪಿಸುವ ಏಕೈಕ ಅಜೆಂಡಾ.
8. ಸಂವಿಧಾನದ ಮೂಲ ಆಶಯವಾದ ಬಹುತ್ವ, ಬಹುಸಂಸ್ಕೃತಿ, ಬಹುಭಾಷೆ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಹತ್ತಿಕ್ಕುವ ಧಾರ್ಮಿಕ ಮತಾಂಧತೆಯ ಪೊಳ್ಳು ರಾಷ್ಟ್ರೀಯವಾದ ಮೂಲಕ ಹಿಂದೂ ರಾಷ್ಟ್ರ ನಿರ್ಮಾಣದ ಸಂವಿಧಾನ ವಿರೋಧಿ ರಾಷ್ಟ್ರೀಯತೆ ಪ್ರತಿಪಾದನೆ.
9. ನಿರಂತರವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ ದೇಶದ-ನಾಡಿನ ಪ್ರಜ್ಞಾವಂತ ಬುದ್ಧಿಜೀವಿಗಳ ಮೇಲೆ ನಿರಂತರ ದಾಳಿ ಹಾಗೂ ಅವಮಾನ. ಮಕ್ಕಳ-ಮಹಿಳೆಯರ ಮೇಲಿನ ನಿರಂತರ ದೌರ್ಜನ್ಯ .
10. ಸಂವಿಧಾನಬದ್ಧ ಸಂಸದೀಯ ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡುವ, ಭಾರತದ ಇತಿಹಾಸದಲ್ಲಿ ಕಂಡರಿಯದ ಚುನಾವಣಾ ಬಾಂಡ್ ಭ್ರಷ್ಟಾಚಾರ.
ಮೇಲಿನ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನೋಡಿದಾಗ, ಪರಮಾಧಿಕಾರವು ಭ್ರಷ್ಟತೆಗೆ ಒಲವು ತೋರುತ್ತದೆ ಮತ್ತು ಸಂಪೂರ್ಣ ಸರ್ವಾಧಿಕಾರವು ಸಂಪೂರ್ಣವಾಗಿ ಭ್ರಷ್ಟಗೊಳ್ಳುತ್ತದೆ" ಎಂಬುದು ಈಗಿನ ಸಂದರ್ಭದಲ್ಲಿ ಸತ್ಯವಾಗಿದೆ. ಪ್ರಶ್ನಿಸಲು ಯಾವುದೇ ಬಗೆಯ ವಿರೋಧ ಪಕ್ಷವಿಲ್ಲ ಎಂಬ ನಂಬಿಕೆಯು, ಪ್ರಜಾಪ್ರಭುತ್ವದ ವ್ಯಾಖ್ಯಾನವನ್ನು ಮತ್ತು ಸಂವಿಧಾನವನ್ನೇ ಬದಲಾಯಿಸುವ ಮಾತನಾಡಲು ಕೆಲವು ರಾಜಕೀಯ ಪಕ್ಷಗಳಿಗೆ ಧೈರ್ಯ ತುಂಬಿದೆ ಎಂದು ಸಂವಿಧಾನ ರಕ್ಷಣಾ ವೇದಿಕೆ ಕಳವಳ ವ್ಯಕ್ತಪಡಿಸಿದೆ.
ನವೆಂಬರ್ 25, 1949ರಂದು ಡಾ.ಬಿ.ಆರ್. ಅಂಬೇಡ್ಕರ್ ತಮ್ಮ ಸಮಾರೋಪ ಭಾಷಣದಲ್ಲಿ ಪರಿಸ್ಥಿತಿಯನ್ನು ಮೊದಲೇ ಎಚ್ಚರಿಸಿದ್ದಾರೆ. ಅವರ ಪ್ರಕಾರ, "ವಿಷಯಗಳು ತಪ್ಪಾಗುವ ದೊಡ್ಡ ಅಪಾಯವಿದೆ. ಸಮಯವು ವೇಗವಾಗಿ ಬದಲಾಗುತ್ತಿದೆ. ನಮ್ಮವರನ್ನೂ ಒಳಗೊಂಡಂತೆ ಜನರು ಹೊಸ ಸಿದ್ಧಾಂತಗಳ ಕಡೆ ಚಲಿಸುತ್ತಿದ್ದಾರೆ. ಅವರು ಜನರಿಂದ ನಡೆಯುವ ಸರ್ಕಾರದಿಂದ ಬೇಸತ್ತಿದ್ದು, ಜನರಿಗಾಗಿ ಸರ್ಕಾರಗಳನ್ನು ನಡೆಸಲು ಸಿದ್ಧರಾಗಿದ್ದಾರೆ. ಜೊತೆಗೆ, ಅವರು ಸರಕಾರ ಜನರ ಮತ್ತು ಜನರಿಂದ ನಡೆಯಬಹುದಾದ ವಿಷಯದ ಬಗ್ಗೆಯೇ ಅಸಡ್ಡೆ ಹೊಂದಿದ್ದಾರೆ. ನಾವು ಸಂವಿಧಾನದ ಆಶಯದಂತೆ ಜನರಿಂದ, ಜನರಿಗಾಗಿ ಮತ್ತು ಜನರೇ ನಡೆಸುವ ತಾತ್ವಿಕ ಸರಕಾರವನ್ನು ಬಯಸುವುದಾದರೆ, ಸಂವಿಧಾನವನ್ನು ಸಂರಕ್ಷಿಸಬೇಕಾಗುತ್ತದೆ. ಜನರಿಂದ ಜನರಿಗಾಗಿ ಮತ್ತು ಜನರ ಸರಕಾರ ಎಂಬ ತತ್ವವನ್ನು ಪ್ರತಿಪಾದಿಸಲು, ನಮ್ಮ ದಾರಿಯುದ್ದಕ್ಕೂ ಇರುವ ದುಷ್ಟಶಕ್ತಿಗಳ ಗುರುತಿಸುವಿಕೆಯಲ್ಲಿ ವಿಳಂಬ ಮಾಡುವುದಾಗಲಿ ಅಥವಾ ಜನರ ಸರ್ಕಾರಕ್ಕಿಂತ ಜನರಿಗೆ ಸರ್ಕಾರವನ್ನು ನೀಡಲು ಜನರನ್ನು ಪ್ರಚೋದಿಸುವ ಶಕ್ತಿಗಳನ್ನು ತೊಡೆದುಹಾಕಲು ದುರ್ಬಲವಾಗಿರದಂತೆ ಸಂಕಲ್ಪ ಮಾಡೋಣ. ದೇಶ ಸೇವೆ ಮಾಡಲು ಇದು ಏಕೈಕ ಮಾರ್ಗವಾಗಿದೆ"
ಭಾರತದ ಸಂವಿಧಾನ ಅಂತಿಮ ಸಾರ್ವಭೌಮತ್ವವನ್ನು ಭಾರತದ ಜನರಿಗೆ ನೀಡಿದೆ. ಜನರು ಕೇವಲ ಮತದಾರರು ಮಾತ್ರವಲ್ಲ. ಮತದಾರರು ತಮ್ಮ ಚುನಾಯಿತ ಪ್ರತಿನಿಧಿಗಳ ಮೂಲಕ ಸರ್ಕಾರಕ್ಕೆ ಸಾರ್ವಭೌಮತ್ವವನ್ನು ನೀಡುತ್ತಾರೆ. ಕೆಲವರು ಭಾವಿಸುವಂತೆ, ಸರ್ಕಾರ ಜನರ ಬೇಡಿಕೆಗಳನ್ನು ಈಡೇರಿಸಿ ಜನರಿಗೆ ಯಾವುದು ಒಳ್ಳೆಯದು ಎಂಬುದನ್ನು ಒಬ್ಬ ವ್ಯಕ್ತಿ ಮಾತ್ರ ನಿರ್ಧರಿಸುತ್ತಾರೆ ಎಂಬ ನಂಬಿಕೆಯ ಮೇಲೆ ವ್ಯಕ್ತಿ ಆಧಾರಿತ ಸರ್ವಾಧಿಕಾರಿ ಆಡಳಿತದ ಕಡೆ ಸಾಗುತ್ತಿದ್ದಾರೆ. ಆದರೆ, ಇದಕ್ಕೆ ಭಿನ್ನವಾಗಿ, ಸಂವಿಧಾನದ ಪ್ರಕಾರ ಭಾರತದ ಜನರು ಅಂತಿಮ ಸಾರ್ವಭೌಮರು ಮತ್ತು ಪ್ರಜಾಪ್ರಭುತ್ವ ಈ ಅಂಶದ ಮೇಲೆ ನಿಂತಿದೆ. ಅಂದರೆ, ಪ್ರಜಾ ಪ್ರಭುತ್ವವೆಂಬುದು ಜನರ ಜನರಿಂದ ಮತ್ತು ಜನರಿಗಾಗಿ ನಡೆಯುವ ಸರ್ಕಾರ ಎಂಬುದನ್ನು ಮತ್ತೊಮ್ಮೆ ಅರ್ಥ ಮಾಡಿಸುವ ಕಾಲ ಕೂಡಿ ಬಂದಿದೆ ಎಂದು ಸಂವಿಧಾನ ರಕ್ಷಣಾ ವೇದಿಕೆ ಹೇಳಿದೆ.
ಈ ಮಧ್ಯೆ, ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿವೆ. ಕೆಲವು ಪಕ್ಷಗಳು ಅವರು ಹಿಂದಿನ ಅನುಭವದಿಂದ ದೊಡ್ಡ ಪಾಠ ಕಲಿತಂತಿದೆ. ಜನರ ಭವಿಷ್ಯದ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವ ಎಲ್ಲಾ ಅಂಶಗಳು ಅದರಲ್ಲಿ ಸೇರ್ಪಡೆಯಾಗಿವೆ. ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲರಿಗೂ ಸಮಾನವಾದ ಅವಕಾಶದ ಭರವಸೆ ನೀಡಿದ್ದಾರೆ. ಜೊತೆಗೆ ಸಾಮರಸ್ಯ, ಭ್ರಾತೃತ್ವ ಮತ್ತು ಶಾಂತಿಯುತ ಸಹಬಾಳ್ವೆಯ ಮನೋಭಾವವನ್ನು ಎತ್ತಿ ಹಿಡಿಯುವುದಾಗಿ ಭರವಸೆ ನೀಡಿದ್ದಾರೆ. ಸಾಮಾಜಿಕ ನ್ಯಾಯದ ಪ್ರಾಧಾನ್ಯತೆ ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರತಿಫಲಿಸುತ್ತದೆ ಎಂಬುದನ್ನು ಖಚಿತಪಡಿಸಿದ್ದಾರೆ.
ಆದ್ದರಿಂದ ಭಾರತದ ಸಂವಿಧಾನವನ್ನು ಉಳಿಸಲು ಮತ್ತು ತ್ಯಾಗ ಬಲಿದಾನಗಳ ಮೂಲಕ ಪಡೆದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಸಂವಿಧಾನವನ್ನು ಗೌರವಿಸಿ, ಎತ್ತಿ ಹಿಡಿದು ಮತ್ತು ಪೂರ್ಣ ಜಾರಿಗೊಳಿಸುವ ಭರವಸೆ ನೀಡಿರುವ ಪಕ್ಷಗಳಿಗೆ ಮತ ಚಲಾಯಿಸಿ ಎಂದು ಸಂವಿಧಾನ ರಕ್ಷಣಾ ವೇದಿಕೆಯು ಮತದಾರರಿಗೆ ಮನವಿ ಮಾಡಿದೆ.
ಪ್ರಜಾಪ್ರಭುತ್ವ ಉಳಿಸಿ - ಸಂವಿಧಾನವನ್ನು ರಕ್ಷಿಸಲು, ಈ ಬಾರಿ ಕೇಂದ್ರದಲ್ಲಿ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಸರ್ಕಾರ ರಚನೆಯಾಗಬೇಕು, ಸರ್ವಾಧಿಕಾರಿ, ಕೋಮುವಾದಿ ಮತ್ತು ಭ್ರಷ್ಟ ದುರಾಡಳಿತ ಶಕ್ತಿಗಳು ಸೋಲಬೇಕು ಎಂಬುದು ವೇದಿಕೆಯ ಆಶಯ. ಸಂವಿಧಾನ ಉಳಿಯದೆ, ಭಾರತ ಒಂದು ದೇಶವಾಗಿ ಉಳಿಯಲು ಸಾಧ್ಯವಿಲ್ಲ. ಹೀಗಾಗಿ, ದೇಶದ-ನಾಡಿನ ಜನರು ಎಚ್ಚರಿಕೆಯಿಂದ ಮತ್ತು ಸಂವಿಧಾನ ಉಳಿಸುವ ಆದ್ಯ ಕರ್ತವ್ಯದ ಭಾಗವಾಗಿ ಮತ ಚಲಾಯಿಸಬೇಕು ಎಂದು ಸಂವಿಧಾನ ರಕ್ಷಣಾ ವೇದಿಕೆಯ ಪರವಾಗಿ ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯದ ಸುಗಮಕಾರ ನಿರಂಜನಾರಾಧ್ಯ ವಿ.ಪಿ., ಹೊಸದಿಲ್ಲಿ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಒಕ್ಕೂಟದ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ, ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಉಮೇಶ್ ಜಿ. ಗಂಗವಾಡಿ, ಕರ್ನಾಟಕ ಗ್ರಾಮೀಣ ಖಾಸಗಿ ಅನುದಾನರಹಿತ ಶಾಲೆಗಳ ಒಕ್ಕೂಟ, ಬೆಂಗಳೂರು ಇದರ ಲೋಕೇಶ್ ತಾಳೀಕಟ್ಟೆ, ಕರ್ನಾಟಕ ರಾಜ್ಯ ಶಾಲಾ ಕಾಲೇಜುಗಳ ಪೋಷಕರ ಸಂಘಟನೆಗಳ ಸಮನ್ವಯ ವೇದಿಕೆ, ಬೆಂಗಳೂರು ಇದರ ಬಿ.ಎನ್.ಯೋಗಾನಂದ, ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ನಾಯಕ ನ್ಯಾಯವಾದಿ ಅನಂತ ನಾಯ್ಕ, ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (AISF),ಕರ್ನಾಟಕ ಇದರ ವೀಣಾ ನಾಯ್ಕ್, ಸಮ ಸಮಾಜಕ್ಕಾಗಿ ಗೆಳೆಯರ ಬಳಗ-ಕರ್ನಾಟಕ ಇದರ ಟಿ.ಪಿ.ಗಂಗಾಧರ, ಸಮಾಜ ಪರಿವರ್ತನ ಜನಾಂದೋಲನದ ಮರಿಸ್ವಾಮಿ, ಕರ್ನಾಟಕ ವಿಚಾರವಾದಿಗಳ ಸಂಘದ ಆರ್.ನಾಗೇಶ ಅರಳಕುಪ್ಪೆ, ಆದಿವಾಸಿ ಬುಡಕಟ್ಟು ಮಹಾಸಭಾ, ಕರ್ನಾಟಕ ಇದರ ಮಂಜುಶ್ರೀ, ಮಹಿಳಾ ಹೋರಾಟಗಾರ್ತಿ ಸೌಮ್ಯಾ ಕೆ.ಆರ್. ಹಾಗೂ ಶಿಕ್ಷಣದ ಮೂಲಭೂತ ಹಕ್ಕಿಗಾಗಿ ದಕ್ಷಿಣ ಭಾರತದ ಸಮನ್ವಯ ಇದರ ಗುರುಮೂರ್ತಿ ಕಾಶೀನಾಥ್ ಪ್ರಕಟನೆಯ ಮೂಲಕ ಜನತೆಯಲ್ಲಿ ಮನವಿ ಮಾಡಿದ್ದಾರೆ.







