ಮತಪತ್ರ ಬಳಕೆ ಮಾಡಿದರೂ ಕಾಂಗ್ರೆಸ್ ಗೆ ಸೋಲು: ಮೋದಿ ವ್ಯಂಗ್ಯ
ನಾಲ್ಕು ರಾಜ್ಯಗಳ 28 ವಿಧಾನ ಪರಿಷತ್ ಸ್ಥಾನಗಳ ಚುನಾವಣೆ ಉಲ್ಲೇಖಿಸಿದ ಪ್ರಧಾನಿ

ನರೇಂದ್ರ ಮೋದಿ | Photo Credit : PTI
ಹೊಸದಿಲ್ಲಿ: ಮತಪತ್ರಗಳ ಮೂಲಕ ಚುನಾವಣೆ ನಡೆಸಿದರೂ ಕಾಂಗ್ರೆಸ್ ಗೆ ಗೆಲುವು ದಕ್ಕಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ ಮತ್ತು ಕರ್ನಾಟಕದಲ್ಲಿ ನಡೆದ ವಿಧಾನ ಪರಿಷತ್ ನ 28 ಸ್ಥಾನಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಒಂದೂ ಸ್ಥಾನ ಗೆಲ್ಲದ ಹಿನ್ನೆಲೆಯಲ್ಲಿ ಅವರು ಈ ಟೀಕೆ ಮಾಡಿದ್ದಾರೆ.
‘ನಾಲ್ಕು ದೊಡ್ಡ ರಾಜ್ಯಗಳಲ್ಲಿ 28 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಿತು. ಮತಪತ್ರಗಳನ್ನು ಬಳಸಿ ಮತದಾನ ನಡೆಸಲಾಯಿತು. ಕಾಂಗ್ರೆಸ್ ಎಷ್ಟು ಸ್ಥಾನಗಳನ್ನು ಗೆದ್ದಿದೆ ಎಂದು ಊಹಿಸಿ?’ ಎಂದು ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ, ಎಮೋಜಿಯನ್ನೂ ಹಂಚಿಕೊಂಡಿದ್ದಾರೆ.
ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ 12 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಈ ಪೈಕಿ ನಾಲ್ಕು ಸ್ಥಾನಗಳನ್ನು ಹಿಂದಿನ ಚುನಾವಣೆಯಲ್ಲಿ ಗೆದ್ದಿತ್ತು. ಕರ್ನಾಟಕದಲ್ಲೂ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ.
EVMಗಳನ್ನು ಬಳಸಿ ಚುನಾವಣೆ ನಡೆಸುವಾಗ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್, ಮತಪತ್ರ ಪದ್ಧತಿಗೆ ಮರಳಬೇಕೆಂದು ಒತ್ತಾಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮತಪತ್ರಗಳ ಮೂಲಕ ಚುನಾವಣೆ ನಡೆದರೂ ಕಾಂಗ್ರೆಸ್ ಸೋತಿರುವುದನ್ನು ಪ್ರಸ್ತಾಪಿಸಿ ಮೋದಿ ತಿರುಗೇಟು ನೀಡಿದ್ದಾರೆ.
►‘ವಾಸ್ತವ ಅರಿಯಲಿ’ ಎಂದ ಸ್ಮೃತಿ ಇರಾನಿ
ಮೋದಿ ಅವರ ಟೀಕೆಯನ್ನು ಕಾಂಗ್ರೆಸ್ ‘ಮಾತುಗಾರಿಕೆ’ ಎಂದು ತಳ್ಳಿಹಾಕಿದೆ. ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಮತಪತ್ರಗಳ ಮೂಲಕವೇ ನಡೆಸಬೇಕೆಂಬ ಬೇಡಿಕೆಯನ್ನು ಪುನರುಚ್ಚರಿಸಿದೆ.
ಬಿಜೆಪಿ ನಾಯಕಿ ಸ್ಮೃತಿ ಇರಾನಿ, ಕಾಂಗ್ರೆಸ್ ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳಬೇಕು ಎಂದು ಹೇಳಿದ್ದಾರೆ. ‘EVMಗಳನ್ನು ದೂಷಿಸುವ ಮತ್ತು ಮತ ಕಳ್ಳತನದ ಆರೋಪ ಮಾಡುವವರಿಗೆ ಮತಪತ್ರಗಳ ಮೂಲಕ ನಡೆದ ಚುನಾವಣೆಯಲ್ಲೂ ಜನರು ಉತ್ತರ ನೀಡಿದ್ದಾರೆ. ನಾಲ್ಕು ರಾಜ್ಯಗಳ 28 ವಿಧಾನ ಪರಿಷತ್ ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ಖಾತೆ ತೆರೆಯಲು ಸಾಧ್ಯವಾಗಿಲ್ಲ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಪ್ರತಿ ಸೋಲಿನ ಬಳಿಕವೂ ಜನರ ತೀರ್ಪನ್ನು ಅವಮಾನಿಸುವ ರಾಜಕುಮಾರ ಮತ್ತು ಅವರ ಸಂಗಡಿಗರು ನೆಪ ಹೇಳುವುದನ್ನು ನಿಲ್ಲಿಸಿ, ವಾಸ್ತವ ಸ್ಥಿತಿಯನ್ನು ಅರಿಯಲು ತಳಮಟ್ಟಕ್ಕೆ ಇಳಿದು ಬರಲಿ’ ಎಂದು ಇರಾನಿ ಟೀಕಿಸಿದ್ದಾರೆ.
►ಮತಪತ್ರ ಪದ್ಧತಿಗೆ ಖರ್ಗೆ ಒತ್ತಾಯ
ಚುನಾವಣಾ ಆಯೋಗದ ಆಂತರಿಕ ಕಾರ್ಯವೈಖರಿ ಕುರಿತು ‘ಇಂಡಿಯನ್ ಎಕ್ಸ್ಪ್ರೆಸ್’ ಪ್ರಕಟಿಸಿದ ವರದಿಯ ಬೆನ್ನಲ್ಲೇ ಕಾಂಗ್ರೆಸ್ ಮತ್ತೆ ಮತಪತ್ರ ಪದ್ಧತಿಗೆ ಮರಳುವಂತೆ ಆಗ್ರಹಿಸಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದ ನಿರ್ಧಾರಗಳು ಮತ್ತು ಆದೇಶಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರು 10 ತಿಂಗಳ ಅವಧಿಯಲ್ಲಿ 14 ಬಾರಿ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ವರದಿ ಮಾಡಿತ್ತು.
ಸೆಪ್ಟೆಂಬರ್ ನಲ್ಲಿ ನಡೆದ ‘ಇಂಡಿಯಾ’ (INDIA) ಮೈತ್ರಿಕೂಟದ ಸಭೆಯ ಬಳಿಕ ಮಾತನಾಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೇಶಾದ್ಯಂತ ನಾಗರಿಕರು ಮತ್ತು ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಗಂಭೀರ ಕಳವಳ ವ್ಯಕ್ತಪಡಿಸುತ್ತಿವೆ ಎಂದಿದ್ದರು.
‘ನಾವು ಹಲವು ವರ್ಷಗಳಿಂದ EVMಗಳ ಕುರಿತು ಸ್ಪಷ್ಟನೆ ಕೇಳುತ್ತಿದ್ದೇವೆ. ಮತದಾರರ ಪಟ್ಟಿಯಲ್ಲಿನ ತಿರುಚುವಿಕೆ ಮತ್ತು ಚುನಾವಣಾ ಪಟ್ಟಿಗಳಲ್ಲಿನ ಅಸ್ಪಷ್ಟ ಬದಲಾವಣೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದೇವೆ. ಮಹಾದೇವಪುರ, ಅಳಂದ, ಹರಿಯಾಣ ಮತ್ತು ಮಹಾರಾಷ್ಟ್ರಗಳಲ್ಲಿ ಇಂತಹ ಘಟನೆಗಳು ನಡೆದಿರುವುದನ್ನು ರಾಹುಲ್ ಗಾಂಧಿ ಸಾಕ್ಷ್ಯಗಳ ಸಹಿತ ತೋರಿಸಿದ್ದಾರೆ. ಇಂಡಿಯಾ ಮೈತ್ರಿಕೂಟದ ಪಕ್ಷಗಳೂ ಈ ಕುರಿತು ಪ್ರಶ್ನೆಗಳನ್ನು ಎತ್ತಿ ಆಕ್ಷೇಪ ವ್ಯಕ್ತಪಡಿಸಿವೆ. ಆದರೆ, ಅವೆಲ್ಲವೂ ವ್ಯರ್ಥವಾಗಿವೆ. ಚುನಾವಣಾ ಆಯೋಗ ನಿರ್ಲಕ್ಷ್ಯ ವಹಿಸಿದೆ’ ಎಂದು ಖರ್ಗೆ ಆರೋಪಿಸಿದ್ದರು.
‘EVMಗಳ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿರಬೇಕು. ಬಿಜೆಪಿ ತನ್ನ ಅಗತ್ಯಕ್ಕೆ ತಕ್ಕಂತೆ ಈ ಯಂತ್ರಗಳನ್ನು ಬಳಸಿಕೊಳ್ಳುತ್ತದೆ. ರಾಹುಲ್ ಗಾಂಧಿ ಹೇಳುವಂತೆ, ಚುನಾವಣೆಯಲ್ಲಿ ಗೆಲ್ಲಲು, ಅತಂತ್ರ ಫಲಿತಾಂಶ ಪಡೆಯಲು ಅಥವಾ ಸೋಲಲು ಬಿಜೆಪಿ EVMಗಳನ್ನು ಬಳಸುತ್ತದೆ. ಆದ್ದರಿಂದ, ಇನ್ನು ಮುಂದೆ ಈ ಯಂತ್ರಗಳನ್ನು ಬಳಸಲು ನಾವು ಅವಕಾಶ ನೀಡಬಾರದು. ಭಾರತದ ಚುನಾವಣಾ ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಮತ್ತೆ ಮತಪತ್ರ ಪದ್ಧತಿಗೆ ಮರಳಬೇಕು’ ಎಂದು ಅವರು ಒತ್ತಾಯಿಸಿದ್ದರು.
1998ರಿಂದ ಚುನಾವಣಾ ಆಯೋಗವು ಮತಪೆಟ್ಟಿಗೆಗಳ ಬದಲಿಗೆ EVMಗಳ ಬಳಕೆಯನ್ನು ಹೆಚ್ಚಿಸುತ್ತಾ ಬಂದಿತು. 2003ರ ವೇಳೆಗೆ ಎಲ್ಲ ರಾಜ್ಯಗಳ ಚುನಾವಣೆಗಳು ಮತ್ತು ಉಪಚುನಾವಣೆಗಳನ್ನು EVMಗಳ ಮೂಲಕವೇ ನಡೆಸಲಾಯಿತು.






