ಡೆಹ್ರಾಡೂನ್: ಕಾರು ಹರಿದು ನಾಲ್ವರು ಮೃತ್ಯು ; 22 ವರ್ಷದ ಯುವಕನ ಬಂಧನ

PC : PTI
ಡೆಹ್ರಾಡೂನ್: ಇಲ್ಲಿನ ರಾಜಪುರ ಪ್ರದೇಶದಲ್ಲಿ ಬುಧವಾರ ಸಂಜೆ ಬೆಂಝ್ ಕಾರು ಹರಿದು ನಾಲ್ವರು ಕಾರ್ಮಿಕರು ಸಾವನ್ನಪ್ಪಲು ಹಾಗೂ ಇಬ್ಬರು ಗಾಯಗೊಳ್ಳಲು ಕಾರಣವಾದ ಆರೋಪದಲ್ಲಿ 22 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಪ್ರದೇಶ ಮೊರದಾಬಾದ್ನ ನಿವಾಸಿ ವಂಶ ಕತ್ಯಾಲ್ನನ್ನು ಡೆಹ್ರಾಡೂನ್ನ ಇಂಟರ್ ಸ್ಟೇಟ್ ಬಸ್ ಟರ್ಮಿನಲ್ (ಐಎಸ್ಬಿಟಿ)ನಿಂದ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮರ್ಸೀಡಸ್ ಕಾರು ಡೆಹ್ರಾಡೂನ್ನ ಸಹಸ್ತ್ರಧಾರಾ ಪ್ರದೇಶದ ಖಾಲಿ ನಿವೇಶನದಲ್ಲಿ ಪತ್ತೆಯಾಗಿತ್ತು. ಕಾರಿನ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿದಾಗ, ಅಲ್ಲಿನ ನಿವಾಸಿ ಮೋಹಿತ್ ಮಲಿಕ್, ಕತ್ಯಾಲ್ ಹಾಗೂ ಆತನ ಪರಿಚಯದ ವ್ಯಕ್ತಿ ಬೆಂಝ್ ಕಾರನ್ನು ಇಲ್ಲಿ ನಿಲ್ಲಿಸಿ ಹೋಗಿದ್ದಾರೆ ಎಂದು ಮಾಹಿತಿ ನೀಡಿದನೆಂದು ಅವರು ಹೇಳಿದ್ದಾರೆ.
ತಾಂತ್ರಿಕ ದೋಷದ ಕಾರಣದಿಂದ ಕಾರನ್ನು ನಿಲ್ಲಿಸಲಾಗಿದೆ ಎಂದು ಕಟ್ಯಾಲ್ ತನಗೆ ತಿಳಿಸಿದ್ದ. ಅನಂತರ ತನ್ನ ಸೋದರಳಿಯನನ್ನು ಜಾಖನ್ಗೆ ಬಿಡಲು ಸ್ಕೂಟಿ ಎರವಲು ಕೇಳಿದೆ. ತನ್ನ ಸ್ಕೂಟಿಯಲ್ಲಿ ಆತನನ್ನು ಕರೆದುಕೊಂಡು ಹೋದ. ಅನಂತರ ಸ್ಕೂಟಿಯನ್ನು ಹಿಂದೆ ತಂದು ಕೊಟ್ಟ ಎಂದು ಮಲಿಕ್ ತಿಳಿಸಿರುವುದಾಗಿ ಡೆಹ್ರಾಡೂನ್ನ ಹಿರಿಯ ಪೊಲೀಸ್ ಅಧೀಕ್ಷಕ ಅಜಯ್ ಸಿಂಗ್ ಹೇಳಿದ್ದಾರೆ.
ಬೆಂಝ್ ಕಾರು ಚಲಾಯಿಸುತ್ತಿದ್ದ ಕತ್ಯಾಲ್ ರಾಜಪುರದ ಸಾಯಿ ಮಂದಿರದ ಸಮೀಪ ನಾಲ್ವರು ಕಾರ್ಮಿಕರಿಗೆ ಢಿಕ್ಕಿ ಹೊಡೆದಿದ್ದಾನೆ. ಅನಂತರ ಸ್ಕೂಟಿಗೆ ಕೂಡ ಢಿಕ್ಕಿ ಹೊಡೆದಿದ್ದಾನೆ. ಎಲ್ಲಾ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಕೂಟಿಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಅಯೋಧ್ಯೆಯ ಮನ್ಶರಾಮ್ (30), ರಂಜಿತ್ (35), ಜಗಜೀತ್ಪುರ ಬಾರಾಬಂಕಿಯ ಬಾಲ್ಕರನ್ (40), ಫೈಝಾಬಾದ್ ಜಿಲ್ಲೆಯ ಗೋರಿಯಾ ರುಡೌಲಿಯ ನಿವಾಸಿ ದುರ್ಗೇಶ್ ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮನ್ಶರಾಮ್ ಚಿಕ್ಕಪ್ಪ ಸಂಜಯ್ ಕುಮಾರ್ ನೀಡಿದ ದೂರಿನ ಆಧಾರದಲ್ಲಿ ರಾಜಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.