ದಿಲ್ಲಿ | ದೀಪಾವಳಿ ಬಳಿಕ ಉಸಿರಾಟ ಸಮಸ್ಯೆಗಳಿರುವ ರೋಗಿಗಳ ಸಂಖ್ಯೆಯಲ್ಲಿ ಶೇ.30ರಷ್ಟು ಏರಿಕೆ

Photo Credit : PTI
ಹೊಸದಿಲ್ಲಿ,ಅ.25: ದೀಪಾವಳಿಯ ನಂತರದ ದಿನಗಳಲ್ಲಿ ದಿಲ್ಲಿ-ಎನ್ಸಿಆರ್ನಲ್ಲಿ ವಾಯು ಗುಣಮಟ್ಟ ಮತ್ತೆ ತೀವ್ರವಾಗಿ ಕುಸಿದಿದ್ದು, ಉಸಿರಾಟ ಮತ್ತು ಗರ್ಭಾವಸ್ಥೆಗೆ ಸಂಬಂಧಿಸಿದ ತೊಂದರೆಗಳಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ ಎಂದು ಆಸ್ಪತ್ರೆಗಳು ವರದಿ ಮಾಡಿವೆ.
ದೀಪಾವಳಿ ಸಂದರ್ಭದಲ್ಲಿ, ವಿಶೇಷವಾಗಿ ತಡರಾತ್ರಿಗಳಲ್ಲಿ ಪಟಾಕಿಗಳ ವ್ಯಾಪಕ ಸಿಡಿತದಿಂದಾಗಿ ವಾಯು ಮತ್ತು ಶಬ್ದ ಮಾಲಿನ್ಯದ ಸಂಯೋಜಿತ ಪರಿಣಾಮಗಳು ಈ ಹೆಚ್ಚಳಕ್ಕೆ ಕಾರಣ ಎಂದು ದಿಲ್ಲಿ-ಎನ್ಸಿಆರ್ನಾದ್ಯಂತದ ವೈದ್ಯರು ಬೆಟ್ಟು ಮಾಡಿದ್ದಾರೆ.
ಶ್ವಾಸಕೋಶ ತಜ್ಞರು ಮತ್ತು ಸ್ತ್ರೀರೋಗ ತಜ್ಞರ ಪ್ರಕಾರ ಮಾಲಿನ್ಯ ಮಟ್ಟವು ಅನುಮತಿಸಲಾದ ಮಿತಿಯನ್ನು ಮೀರಿದ್ದರಿಂದ ಅ.20ರಿಂದ 23ರ ನಡುವೆ ಹೊರರೋಗಿ ವಿಭಾಗ ಮತ್ತು ತುರ್ತು ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ.
ಈ ಅವಧಿಯಲ್ಲಿ ದಿಲ್ಲಿಯ ವಾಯುಗುಣಮಟ್ಟ ಸೂಚ್ಯಂಕವು ‘ಕಳಪೆ ಮಟ್ಟ’ದಲ್ಲಿಯೇ ಉಳಿದುಕೊಂಡಿತ್ತು.
ಹೊಗೆ, ವಿಷಕಾರಿ ಅನಿಲಗಳು ಮತ್ತು ಸೂಕ್ಷ್ಮ ಕಣಗಳಿಗೆ ಹಠಾತ್ ಒಡ್ಡಿಕೊಂಡಿದ್ದರಿಂದ ವೃದ್ಧರು, ಮಕ್ಕಳು, ಗರ್ಭಿಣಿಯರು ಹಾಗೂ ದೀರ್ಘಕಾಲಿಕ ಉಸಿರಾಟ ಅಥವಾ ಹೃದಯ ಸಂಬಂಧಿ ಕಾಯಿಲೆಗಳು ಇರುವವರು ತೀರ ಕಷ್ಟಪಡುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ದೀಪಾವಳಿಯ ನಂತರ ಕೇವಲ ಎರಡು ದಿನಗಳಲ್ಲಿ ಉಸಿರಾಟದ ತೊಂದರೆ, ಅಸ್ತಮಾ ಮತ್ತು ಅಲರ್ಜಿಯಿಂದ ಶ್ವಾಸನಾಳ ಉರಿಯೂತ ರೋಗಿಗಳ ಪ್ರಮಾಣದಲ್ಲಿ ಶೇ.30ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ಸಿಲ್ವರ್ಸ್ಟ್ರೀಕ್ ಸೂಪರ್ಸ್ಪೆಷಾಲಿಟಿ ಹಾಸ್ಪಿಟಲ್ನ ಶ್ವಾಸಕೋಶ ತಜ್ಞ ಡಾ.ಪುಲ್ಕಿತ್ ಅಗರವಾಲ್ ಹೇಳಿದರು.
ವಾಯುಮಾಲಿನ್ಯವು ಗರ್ಭಿಣಿ ಮತ್ತು ಭ್ರೂಣದ ಆರೋಗ್ಯದ ಮೇಲೆ ಬೀರುವ ಹೆಚ್ಚು ಗೋಚರವಾಗದ, ಆದರೆ ಗಂಭೀರ ಪರಿಣಾಮಗಳ ಬಗ್ಗೆ ಸ್ತ್ರೀರೋಗ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ದೀಪಾವಳಿಯ ಬಳಿಕ ದಿಲ್ಲಿಯಲ್ಲಿ ಪಿಎಂ2.5 ಮಟ್ಟವು 675ಕ್ಕೇರಿದ್ದು,ಇದು ನಾಲ್ಕು ವರ್ಷಗಳಲ್ಲಿ ಗರಿಷ್ಠವಾಗಿದೆ.







