ದಿಲ್ಲಿ : ಮತ್ತೆ ಅತ್ಯಂತ ಕಳಪೆ ಶ್ರೇಣಿಗೆ ಕುಸಿದ ವಾಯುಗುಣಮಟ್ಟ

Photo Credit : PTI
ಹೊಸದಿಲ್ಲಿ,ಡಿ.26: ಅಲ್ಪ ಕಾಲದ ಬಿಡುವಿನ ಬಳಿಕ ದಿಲ್ಲಿಯಲ್ಲಿ ವಾಯುಗುಣಮಟ್ಟ ಶುಕ್ರವಾರ ಮತ್ತೆ ಹದಗೆಟ್ಟಿದ್ದು, ಅತ್ಯಂತ ಕಳಪೆ ಶ್ರೇಣಿಗೆ ಕುಸಿದಿದೆ. ರಾಜಧಾನಿಯಲ್ಲಿ ಗಾಳಿ ಬೀಸುವ ವೇಗ ಮತ್ತೆ ಕ್ಷೀಣವಾಗಿದ್ದು, ಇದರಿಂದಾಗಿ ವಾತಾವರಣದಲ್ಲಿ ಕನಿಷ್ಠ ತಾಪಮಾನ 7.7 ಡಿಗ್ರಿ ಸೆಂಟಿಗ್ರೇಡ್ಗೆ ಸಾಧಾರಣ ಏರಿಕೆಯಾಗಿದೆ. ಗುರುವಾರ ತಾಪಮಾನವು 6.5 ಡಿಗ್ರಿ ಸೆಂಟಿಗ್ರೇಡ್ಗೆ ಇಳಿಕೆಯಾಗಿತ್ತು. ಸೋಮವಾರದದವರೆಗೆ ತಾಪಮಾನವು 5ರಿಂದ 8 ಡಿಗ್ರಿ ಸೆಂಟಿಗ್ರೇಡ್ವರೆಗೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗಾಳಿಯ ವೇಗವು ಕುಂಠಿತವಾಗುತ್ತಿದ್ದಂತೆಯೇ ಅತ್ಯಂತ ದಟ್ಟವಾದ ಮಂಜು ಆವರಿಸಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಯ ವೇಳೆಗೆ 24 ತಾಸುಗಳ ಸರಾಸರಿ ವಾಯು ಮಾಲಿನ್ಯ ಸೂಚ್ಯಂಕ (ಎಕ್ಯೂಐ)ವು 305 (ಅತ್ಯಂತ ಕಳಪೆ) ಆಗಿತ್ತು. ಇದಕ್ಕೆ ಹೋಲಿಸಿದರೆ ಗುರುವಾರ ಸಂಜೆ 4 ಗಂಟೆಯ ವೇಳೆಗೆ ಎಕ್ಯೂಐ ಮಟ್ಟವು 234 (ಕಳಪೆ ಶ್ರೇಣಿ), ಬುಧವಾರ 271 (ಕಳಪೆ) ಮತ್ತು ಮಂಗಳವಾರ 412 (ತೀವ್ರ)ಆಗಿತ್ತು. ತಾಸಿಗೆ 20 ಕಿ.ಮೀ.ವೇಗದಲ್ಲಿ ಬೀಸಿದ ಗಾಳಿಯು ಈ ವಾರದ ದಿಲ್ಲಿ ಎಕ್ಯೂಐ ಮಟ್ಟವು ಸುಧಾರಣೆಗೊಳ್ಳಲು ನೆರವಾಗಿತ್ತು.







