ದಿಲ್ಲಿ ವಿಮಾನ ನಿಲ್ದಾಣದ ಮೇಲ್ಚಾವಣಿ ಕುಸಿತ: ಓರ್ವ ಮೃತ್ಯು, ನಾಲ್ವರಿಗೆ ಗಾಯ
ವಿಮಾನ ಹಾರಾಟ ಸ್ಥಗಿತ

PC: ANI
ಹೊಸದಿಲ್ಲಿ: ಶುಕ್ರವಾರ ಬೆಳಗ್ಗೆ ದಿಲ್ಲಿ ವಿಮಾನ ನಿಲ್ದಾಣದ ಒಂದನೇ ಟರ್ಮಿನಲ್ನ ಮೇಲ್ಚಾವಣಿ ಕುಸಿದು ಬಿದ್ದ ಪರಿಣಾಮ, ಓರ್ವ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ.
ಈ ಕುಸಿತದ ಬೆನ್ನಿಗೇ, ಒಂದನೇ ಟರ್ಮಿನಲ್ನಿಂದ ಕಾರ್ಯಾಚರಿಸಬೇಕಿದ್ದ ಎಲ್ಲ ವಿಮಾನಗಳ ಸೇವೆಯನ್ನು ಮುಂದಿನ ಸೂಚನೆಯವರೆಗೆ ಅಮಾನತುಗೊಳಿಸಲಾಗಿದೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯ ಪ್ರಕಟಿಸಿದೆ. ವಿಮಾನಗಳ ಸುಗಮ ಕಾರ್ಯಾಚರಣೆಗಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಇಂದು ಮಧ್ಯರಾತ್ರಿಯವರೆಗೆ 16 ನಿರ್ಗಮನ ವಿಮಾನಗಳು ಹಾಗೂ 12 ಆಗಮನ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ನಾಗರಿಕ ವಿಮಾನ ಯಾನ ಸಚಿವಾಲಯ, "ಇಂದು ಮುಂಜಾನೆ ಸುರಿದ ಭಾರಿ ಮಳೆಯಿಂದಾಗಿ ದಿಲ್ಲಿ ವಿಮಾನ ನಿಲಾಣದ ಒಂದನೇ ಟರ್ಮಿನಲ್ನ ಮೇಲ್ಚಾವಣಿ ಕುಸಿದಿದೆ. ಹೀಗಾಗಿ ಮುಂದಿನ ಸೂಚನೆಯವರೆಗೆ ಒಂದನೇ ಟರ್ಮಿನಲ್ನಿಂದ ನಿರ್ಗಮಿಸುವ ಹಾಗೂ ಆಗಮಿಸುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ವಿಮಾನಗಳ ಸುಗಮ ಕಾರ್ಯಾಚರಣೆಗಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ" ಎಂದು ಹೇಳಿದೆ.
ಈ ನಡುವೆ, ಪರಿಸ್ಥಿತಿಯನ್ನು ಅವಲೋಕಿಸಲು ನಾಗರಿಕ ವಿಮಾನ ಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ದಿಲ್ಲಿ ವಿಮಾನ ನಿಲ್ದಾಣಕ್ಕೆ ಧಾವಿಸಿದರು. ಅವರಿಗೆ ಘಟನೆಯ ಕುರಿತು ಅಧಿಕಾರಿಗಳು ವಿವರಿಸಿದರು ಎಂದು ವರದಿಯಾಗಿದೆ.
ಘಟನೆಯ ಪರಾಮರ್ಶೆಯ ನಂತರ ಮಾತನಾಡಿದ ಸಚಿವ ನಾಯ್ಡು, ಪರಿಸ್ಥಿತಿಯು ನಿಯಂತ್ರಣದಲ್ಲಿದೆ ಹಾಗೂ ಘಟನೆಯ ಕುರಿತು ಪರಿಶೀಲನೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.







