ದಿಲ್ಲಿ ವಿಮಾನ ನಿಲ್ದಾಣ : ಚಳಿಗಾಲದ ಪರೀಕ್ಷೆಯಲ್ಲಿ ವಿಫಲಗೊಂಡ ಸಿಎಟಿ-III ರನ್ ವೇ ಗಳು

Photo: ANI
ಹೊಸದಿಲ್ಲಿ: ಜನವರಿ 14-15ರ ನಡುವೆ ಶೂನ್ಯ ಮಟ್ಟದ ಗೋಚರತೆ ಹಾಗೂ ದಟ್ಟ ಮಂಜಿನ ಕಾರಣಕ್ಕೆ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಒಂದು ಸಾವಿರಕ್ಕೂ ಹೆಚ್ಚು ವಿಮಾನಗಳು ವಿಳಂಬಗೊಂಡಿವೆ ಹಾಗೂ ಸುಮಾರು 300 ವಿಮಾನಗಳು ರದ್ದುಗೊಂಡಿವೆ. ಇದರಿಂದ ಸಾವಿರಾರು ಮಂದಿ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬಿದ್ದಿದ್ದಾರೆ ಮತ್ತು ಪ್ರಕ್ಷುಬ್ಧಗೊಂಡಿದ್ದರು.
CAT IIIB ಮಾನದಂಡವನ್ನು ಪಾಲಿಸುತ್ತಿರುವ ಎರಡು ರನ್ ವೇಗಳು ದಿಲ್ಲಿ ವಿಮಾನ ನಿಲ್ದಾಣದಲ್ಲಿದ್ದು, ಇವನ್ನು ಕನಿಷ್ಠ ಗೋಚರತೆಯ ಸಂದರ್ಭದಲ್ಲಿ ವಿಮಾನಗಳು ಟೇಕಾಫ್ ಆಗಲು ಹಾಗೂ ಭೂಸ್ಪರ್ಶ ಮಾಡಲು ಸಜ್ಜುಗೊಳಿಸಲಾಗಿದೆ. ಈ ಪೈಕಿ ಒಂದು ರನ್ ವೇ ಇದುವರೆಗೂ ಕಾರ್ಯಾಚರಣೆ ಪ್ರಾರಂಭಿಸಿಲ್ಲವಾದರೆ, ಮತ್ತೊಂದು ರನ್ ವೇ ಮಂಗಳವಾರದವರೆಗೆ ಭಾಗಶಃ ಕಾರ್ಯಾಚರಣೆ ಮಾತ್ರ ನಡೆಸುತ್ತಿತ್ತು. ಉತ್ತರ ಭಾರತವು ಇಂದಿಗೂ ಶೀತ ಮಾರುತದ ಹಿಡಿತದಲ್ಲೇ ಇದೆ.
ಇಡೀ ದೇಶದಲ್ಲಿ ಅತಿ ದೊಡ್ಡ ಹಾಗೂ ಜನನಿಬಿಡ ವಿಮಾನ ನಿಲ್ದಾಣವಾಗಿರುವ ದಿಲ್ಲಿ ವಿಮಾನ ನಿಲ್ದಾಣದಲ್ಲಿನ ವೈಮಾನಿಕ ಕಾರ್ಯಾಚರಣೆಯ ಮೇಲೆ ಈ ಸಂಗತಿಗಳು ಪ್ರತಿಕೂಲ ಪರಿಣಾಮವನ್ನು ಮಾತ್ರ ಬೀರಿಲ್ಲ; ಬದಲಿಗೆ, ದೇಶಾದ್ಯಂತ ವೈಮಾನಿಕ ಜಾಲ ಹಾಗೂ ಕಾರ್ಯಾಚರಣೆಯ ಮೇಲೂ ದುಷ್ಪರಿಣಾಮವನ್ನುಂಟು ಮಾಡಿವೆ.
ಕಿಕ್ಕಿರಿದ ವಿಮಾನ ನಿಲ್ದಾಣಗಳು, ಸುದೀರ್ಘ ವಿಳಂಬಗಳು, ರದ್ದತಿಗಳು ಹಾಗೂ ವಿಮಾನ ಯಾನ ಸಿಬ್ಬಂದಿಗಳ ವೃತ್ತಿರಪರತೆ ರಹಿತ ವರ್ತನೆಗಳನ್ನು ಕುರಿತು ಅತೃಪ್ತ ಪ್ರಯಾಣಿಕರ ದೂರುಗಳಿಂದ ಸಾಮಾಜಿಕ ಮಾಧ್ಯಮ ವೇದಿಕೆಗಳು ತುಂಬಿ ತುಳುಕುತ್ತಿವೆ. ಕೆಲವು ಪ್ರಯಾಣಿಕರು ವಿಮಾನವು ಟೇಕಾಫ್ ಆಗುವ ಮುನ್ನ ಅಥವಾ ವಿಮಾನವು ಭೂಸ್ಪರ್ಶ ಮಾಡಿದ ನಂತರ ಗಂಟೆಗಟ್ಟಲೆ ವಿಮಾನದಲ್ಲಿ ಸಿಲುಕಿಕೊಂಡಿದ್ದಾರೆ. ಒಂದು ಘಟನೆಯಲ್ಲಿ ಇಂಡಿಗೊ ವಿಮಾನದ ಪೈಲಟ್ ವಿಮಾನವು ವಿಳಂಬವಾಗಲಿದೆ ಎಂದು ಪ್ರಕಟಿಸುವಾಗ ಪ್ರಯಾಣಿಕನೋರ್ವ ಹಲ್ಲೆ ನಡೆಸಿದ್ದರೆ, ಮತ್ತೊಂದು ಘಟನೆಯಲ್ಲಿ ಗೋವಾದಿಂದ ದಿಲ್ಲಿಗೆ ತೆರಳಬೇಕಿದ್ದ ವಿಮಾನವು ಮುಂಬೈ ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಾಯಿಸಿ ಸುದೀರ್ಘ ವಿಳಂಬದ ನಂತರ ಭೂಸ್ಪರ್ಶ ಮಾಡಿದ ನಂತರ, ಅದರಲ್ಲಿನ ಪ್ರಯಾಣಿಕರು ಡಾಂಬರು ರಸ್ತೆಯ ಮೇಲೆಯೇ ಆಹಾರ ಸೇವನೆ ಮಾಡಿದ್ದಾರೆ.
ಈ ಘಟನೆಗಳು ಕೇವಲ ವಿಮಾನ ಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳು ಹಾಗೂ ವಿಮಾನ ಪ್ರಾಧಿಕಾರಗಳು ಮಂಜು ಕವಿದ ವಾತಾವರಣಕ್ಕೆ ಸನ್ನದ್ಧವಾಗಿರದಿದ್ದ ಸ್ಥಿತಿಯನ್ನು ಮಾತ್ರ ಎತ್ತಿ ತೋರಿಸುತ್ತಿಲ್ಲ. ಬದಲಿಗೆ ಇಂತಹ ಪರಿಸ್ಥಿತಿಯನ್ನು ಎದುರಿಸುವಲ್ಲಿನ ವಿಮಾನ ಯಾನ ಸಂಸ್ಥೆಗಳ ಅಸಮರ್ಥತೆಯನ್ನೂ ಬಯಲು ಮಾಡಿವೆ. ಇದರಿಂದಾಗಿ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯವು ಸಾಲು ಸಾಲು ಅಧಿಸೂಚನೆಗಳನ್ನು ಹೊರಡಿಸಿ, ಭಾರಿ ಪ್ರಮಾಣದ ದಂಡವನ್ನು ವಿಧಿಸಿದ್ದರಿಂದ ಭಾರತದ ವಿಮಾನ ಯಾನ ಸಂಸ್ಥೆಗಳ ಮಹತ್ವಾಕಾಂಕ್ಷೆ ಮುಕ್ಕಾಗಿದೆ.
ಯಶಸ್ವಿ ವಿಮಾನಗಳ ಹಿಂದಿನ ಸಂಗತಿಗಳು
ಇವುಗಳ ಬೆನ್ನಿಗೇ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ನಾಗರಿಕ ವಿಮಾನ ಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಯಶಸ್ವಿ ಕ್ಯಾಟ್-III ಭೂಸ್ಪರ್ಶಕ್ಕೆ ಮೂರು ಸಂಗತಿಗಳನ್ನು ಪಟ್ಟಿ ಮಾಡಿದ್ದಾರೆ. ರನ್ ವೇ ಸಾಮರ್ಥ್ಯ, ವಿಮಾನದ ಸಾಮರ್ಥ್ಯ ಹಾಗೂ ಪೈಲಟ್ ಮಾನ್ಯತೆ.
ಪ್ರವರ್ಗ III ಅಥವಾ ಕ್ಯಾಟ್-III, ವಿಮಾನ ಭೂಸ್ಪರ್ಶ ವ್ಯವಸ್ಥೆ (ಐಎಲ್ಎಸ್) ಪ್ರವರ್ಗವಾಗಿದ್ದು, ಇದರರ್ಥ, ಕನಿಷ್ಠ ಗೋಚರತೆ ಸಂದರ್ಭಗಳಲ್ಲಿ ಇರಬೇಕಾದ ನಿಖರ ಧೋರಣೆ ಹಾಗೂ ಭೂಸ್ಪರ್ಶ ಕಾರ್ಯಾಚರಣೆಗಳು ಎಂದು. ಕ್ಯಾಟ್-III ಪ್ರವರ್ಗವನ್ನು ಮತ್ತೆ ಮೂರು ಪ್ರವರ್ಗಗಳನ್ನಾಗಿ ವಿಂಗಡಿಸಲಾಗಿದೆ: ಕ್ಯಾಟ್-IIIಎ ಪ್ರವರ್ಗದಲ್ಲಿ ರನ್ ವೇ ಗೋಚರತೆ ವ್ಯಾಪ್ತಿಯು 200 ಮೀಟರ್ ಗಿಂತ ಕಡಿಮೆ ಇರುವುದಿಲ್ಲ. ಕ್ಯಾಟ್-IIIಬಿ ಪ್ರವರ್ಗದಲ್ಲಿ ರನ್ ವೇ ಗೋಚರತೆ ವ್ಯಾಪ್ತಿಯು 50 ಮೀ ಇದ್ದರೆ, ಕ್ಯಾಟ್-IIIಸಿ ಪ್ರವರ್ಗದಲ್ಲಿ ರನ್ ವೇ ಗೋಚರತೆ ವ್ಯಾಪ್ತಿಗೆ ಯಾವುದೇ ಮಿತಿ ಇರುವುದಿಲ್ಲ.
ಈ ಪೈಕಿ ದಿಲ್ಲಿ ವಿಮಾನ ನಿಲ್ದಾಣದಲ್ಲಿರುವ ಕ್ಯಾಟ್-IIIಬಿ ರನ್ ವೇಗಳ ಪೈಕಿ ಒಂದು ರನ್ ವೇಯನ್ನು ರಿಪೇರಿ ಹಾಗೂ ನಿರ್ವಹಣೆಗಾಗಿ ಸೆಪ್ಟೆಂಬರ್ ನಿಂದ ಮುಚ್ಚಲಾಗಿದ್ದು, ಈ ರನ್ ವೇ ಈ ವಾರದಿಂದ ಮಾತ್ರ ಕಾರ್ಯಾಚರಣೆಗೆ ಸಿದ್ಧವಾಗುವ ನಿರೀಕ್ಷೆ ಇದೆ. ತೀಕ್ಷ್ಣ ಟೀಕೆಗಳು ವ್ಯಕ್ತವಾದ ನಂತರ, ಇಂದಿರಾ ಗಾಂಧಿ ವಿಮಾನ ನಿಲ್ದಾಣವು, ಏರ್ ಸ್ಟ್ರಿಪ್ 28/10 ಅನ್ನು ಕಾರ್ಯಾಚರಣೆಗೆ ಸಿದ್ಧಗೊಳಿಸುವಲ್ಲಿ ವಿಳಂಬವಾಗಿದೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯಕ್ಕೆ ತಿಳಿಸಿದೆ. ಜಿ20 ಶೃಂಗ ಸಭೆ ಮುಕ್ತಾಯಗೊಂಡ ನಂತರವಷ್ಟೆ ನಿರ್ವಹಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಮತ್ತೊಂದು ಅಡ್ಡಿಯೆಂದರೆ, ದಿಲ್ಲಿಯಲ್ಲಿ ಜಾರಿಗೊಂಡಿರುವ ಕೊನೆಯ ಹಂತದ ವಾಯು ಮಾಲಿನ್ಯ ನಿಯಂತ್ರಣ ಯೋಜನೆಯಾದ ಶ್ರೇಣೀಕೃತ ಪ್ರತಿಸ್ಪಂದನಾ ಕ್ರಿಯಾ ಯೋಜನೆ (GRAP IV). ಈ ಯೋಜನೆಯು ದಿಲ್ಲಿಯಲ್ಲಿ ನಿರ್ಮಾಣ ಕಾಮಗಾರಿಗಳಿಗೆ ನಿರ್ಬಂಧ ವಿಧಿಸಿದೆ.
ಕ್ಯಾಟ್-IIIಬಿ ಮಾನದಂಡವನ್ನು ಪಾಲಿಸುವ ಮತ್ತೊಂದು ರನ್ ವೇಯನ್ನು ಕಳೆದ ವಾರ ಕ್ಯಾಟ್-Iಬಿ ದರ್ಜೆಗೆ ಇಳಿಸಲಾಗಿದ್ದು, ಇದರನ್ವಯ ರನ್ ವೇಯ ಗೋಚರತೆ ವ್ಯಾಪ್ತಿಯು 550 ಮೀಟರ್ ವರೆಗೆ ಇದ್ದಾಗ ಮಾತ್ರ ವಿಮಾನಗಳು ಭೂಸ್ಪರ್ಶ ಮಾಡಲು ಅವಕಾಶ ನೀಡಲಾಗುತ್ತದೆ. ಇದಕ್ಕೆ ಕಾರಣ, ದ್ವಾರಕಾ ಮೇಲ್ಸೇತುವೆ ಬಳಿ ನಡೆಯುತ್ತಿರುವ ನಿರ್ಮಾಣ ಚಟುವಟಿಕೆಗಳಿಂದ ರೇಡಿಯೊ ಸಂಪರ್ಕಕ್ಕೆ ಅಡ್ಡಿಯುಂಟಾಗಿರುವುದು. ಇದರ ಪರಿಣಾಮವಾಗಿ ಈ ರನ್ ವೇಯ ಒಂದು ಬದಿ ಮಾತ್ರ ಮಂಗಳವಾರದವರೆಗೆ ಕ್ಯಾಟ್-III ಮಾನದಂಡವನ್ನು ಹೊಂದಿದ್ದು, ರನ್ ವೇಯ ಗೋಚರತೆ ವ್ಯಾಪ್ತಿಯು ಕನಿಷ್ಠ 50 ಮೀಟರ್ ಇದ್ದಾಗ ವಿಮಾನಗಳಿಗೆ ಭೂಸ್ಪರ್ಶ ಮಾಡಲು ಅವಕಾಶ ನೀಡಲಾಗುತ್ತಿದೆ.
ಆದರೆ, ಯಶಸ್ವಿ ಭೂಸ್ಪರ್ಶಕ್ಕೆ ಸಿಂಧಿಯಾ ಪಟ್ಟಿ ಮಾಡಿದ ಇನ್ನೆರಡು ಸಂಗತಿಗಳಾದ ವಿಮಾನದ ಸಾಮರ್ಥ್ಯ ಹಾಗೂ ಪೈಲಟ್ ಮಾನ್ಯತೆ ವಿಮಾನ ಯಾನ ಸಂಸ್ಥೆಗಳ ಕೈಯಲ್ಲಿದೆ. ಅವು ಕ್ಯಾಟ್-IIIಬಿ ಮಾನದಂಡದೊಂದಿಗೆ ಸಜ್ಜುಗೊಂಡಿರುವ ವಿಮಾನಗಳು ಹಾಗೂ ಕನಿಷ್ಠ ಗೋಚರತೆ ಕಾರ್ಯಾಚರಣೆಯನ್ನು ನಿರ್ವಹಿಸಬಲ್ಲ ಮಾನ್ಯತೆ ಹೊಂದಿರುವ ಪೈಲಟ್ ಗಳನ್ನು ನಿಯೋಜಿಸಬೇಕಿದೆ.
ಇದರೊಂದಿಗೆ, ಏರ್ ಬಸ್ ಎ20 ಹಾಗೂ ಬೋಯಿಂಗ್ 737 ಮ್ಯಾಕ್ಸ್ ಸೇರಿದಂತೆ ಭಾರತದಲ್ಲಿರುವ ಬಹುತೇಕ ವಿಮಾನಗಳು ರನ್ ವೇಗಳ ಸಾಮರ್ಥ್ಯಕ್ಕಿಂತ ಹೆಚ್ಚು ಕನಿಷ್ಠ ಗೋಚರತೆ ಪ್ರಮಾಣವನ್ನು ಹೊಂದಿವೆ” ಎಂಬುದರತ್ತಲೂ ಸಿಂಧಿಯಾ ತಮ್ಮ ಪೋಸ್ಟ್ ನಲ್ಲಿ ಬೊಟ್ಟು ಮಾಡಿದ್ದಾರೆ. ಇದರರ್ಥ, ಕಾರ್ಯಾಚರಣೆಯಲ್ಲಿರುವ ರನ್ ವೇ ಹಾಗೂ ಸಾಕಷ್ಟು ತರಬೇತಿ ಪಡೆದ ಪೈಲಟ್ ಗಳಿದ್ದಾಗಲೂ ಈ ವಿಮಾನಗಳು ಶೂನ್ಯ ಗೋಚರತೆ ಕಾರ್ಯಾಚರಣೆಗಳಿಗೆ ತಕ್ಕಂತೆ ವಿನ್ಯಾಸಗೊಂಡಿಲ್ಲ ಎಂಬುದಾಗಿದೆ.
ಡಿಜಿಸಿಎ ಕ್ರಮ
ಅತೃಪ್ತ ಪ್ರಯಾಣಿಕರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ದೂರುಗಳ ಮಹಾಪೂರವೇ ಹರಿದಿರುವುದರಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಹಾಗೂ ವೈಮಾನಿಕ ನಿಯಂತ್ರಕರು ಸೋಮವಾರ ಕ್ರಮಕ್ಕೆ ಮುಂದಾಗಿದ್ದಾರೆ. “ಈ ಕಠಿಣ ಸಮಯದಲ್ಲಿ ನಮ್ಮೊಂದಿಗೆ ಸಹಕರಿಸಿ” ಎಂದು ಪ್ರಯಾಣಿಕರಿಗೆ ಮನವಿ ಮಾಡಿರುವ ಸರ್ಕಾರವು, ರಿಪೇರಿಗಾಗಿ ಮುಚ್ಚಲ್ಪಟ್ಟಿರುವ ಕ್ಯಾಟ್-III ಮಾನದಂಡದ ರನ್ ವೇಯನ್ನು ಕಾರ್ಯಾಚರಣೆಗೆ ಸಜ್ಜುಗೊಳಿಸುವ ಕೆಲಸವನ್ನು ಚುರುಕುಗೊಳಿಸಿ” ಎಂದು ದಿಲ್ಲಿ ವಿಮಾನ ನಿಲ್ದಾಣಕ್ಕೆ ನಿರ್ದೇಶನ ನೀಡಿದೆ.
ಪ್ರತಿಕೂಲ ಹವಾಮಾನದ ಕಾರಣಕ್ಕೆ ಆಗುವ ವಿಮಾನ ಯಾನ ರದ್ದು ಹಾಗೂ ವಿಳಂಬಗಳ ಸಂದರ್ಭದಲ್ಲಿ ಪ್ರಯಾಣಿಕರ ಅನನುಕೂಲವನ್ನು ತಗ್ಗಿಸಲು ಪ್ರಯಾಣಿರೊಂದಿಗೆ ಹೇಗೆ ಸಂವಹನ ನಡೆಸಬೇಕು ಹಾಗೂ ಸೌಕರ್ಯ ಒದಗಿಸಬೇಕು ಎಂಬ ಕುರಿತು ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯವು ಪ್ರಮಾಣೀಕೃತ ಕಾರ್ಯಾಚರಣೆ ನಿಯಮಗಳನ್ನೂ ಜಾರಿಗೊಳಿಸಿದೆ.
ಎಲ್ಲ ವಿಮಾನ ಯಾನ ಸಂಸ್ಥೆಗಳೂ ವಿಮಾನಗಳ ವಿಳಂಬದ ಕುರಿತು ತಮ್ಮ ಅಂತರ್ಜಾಲ ತಾಣಗಳಲ್ಲಿ ನೈಜ ಸಮಯದ ಮಾಹಿತಿಯನ್ನು ಪ್ರಕಟಿಸುವುದು ಹಾಗೂ ತೊಂದರೆಗೊಳಗಾಗಲಿರುವ ಪ್ರಯಾಣಿಕರಿಗೆ ಎಸ್ಎಂಎಸ್/ವಾಟ್ಸ್ ಆ್ಯಪ್ ಹಾಗೂ ಇಮೇಲ್ ಮೂಲಕ ಈ ಕುರಿತು ಮುನ್ನೆಚ್ಚರಿಕೆ ನೀಡುವುದನ್ನು ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯವು ಕಡ್ಡಾಯಗೊಳಿಸಿದೆ. ಇದರೊಂದಿಗೆ ಮೂರು ಗಂಟೆಗೂ ಹೆಚ್ಚು ಕಾಲ ವಿಳಂಬವಾಗುವ ವಿಮಾನಗಳನ್ನು ವಿಮಾನ ಯಾನ ಸಂಸ್ಥೆಗಳು ರದ್ದುಗೊಳಿಸಬಹುದಾಗಿದೆ ಎಂದೂ ಸೂಚಿಸಿದೆ.
ಮಂಜು ಕವಿದ ವಾತಾವರಣಕ್ಕೆ ಸನ್ನದ್ಧ ಸ್ಥಿತಿಯ ಕೊರತೆ, ಹೊಣೆಗಾರಿಕೆಯ ಕೊರತೆ ಹಾಗೂ ತುರ್ತು ಪರಿಸ್ಥಿತಿಗಳನ್ನು ದಕ್ಷವಾಗಿ ನಿಭಾಯಿಸುವಲ್ಲಿನ ವೈಫಲ್ಯ ಹಾಗೂ ವೈಮಾನಿಕ ಭದ್ರತಾ ಮಾನದಂಡಗಳನ್ನು ಉಲ್ಲಂಘಿಸಿದ ಕಾರಣ ಸೇರಿದಂತೆ ವಿವಿಧ ಕಾರಣಗಳಿಗಾಗಿ ಮೂರು ವಿಮಾನ ಯಾನ ಸಂಸ್ಥೆಗಳು ಹಾಗೂ ಮುಂಬೈ ವಿಮಾನ ನಿಲ್ದಾಣಕ್ಕೆ ಭಾರಿ ದಂಡ ವಿಧಿಸಲಾಗಿದೆ.
ವಿಮಾನ ಯಾನ ಸಚಿವಾಲಯದ ನಾಗರಿಕ ವಿಮಾನ ಯಾನ ಭದ್ರತಾ ದಳವು ಇಂಡಿಗೊ ವಿಮಾನ ಯಾನ ಸಂಸ್ಥೆಗೆ ರೂ. 1.20 ಕೋಟಿ ದಂಡ ವಿಧಿಸಿದ್ದರೆ, ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೂ. 60 ಲಕ್ಷ ದಂಡ ವಿಧಿಸಿದೆ. ಇದರೊಂದಿಗೆ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯವು ಮುಂಬೈ ವಿಮಾನ ನಿಲ್ದಾಣಕ್ಕೆ ರೂ. 30 ಲಕ್ಷ ದಂಡ ವಿಧಿಸಿದೆ. ಇದಲ್ಲದೆ ಕನಿಷ್ಠ ಗೋಚರತೆ ಪರಿಸ್ಥಿತಿಯಲ್ಲಿ ವಿಮಾನಗಳ ಕಾರ್ಯಾಚರಣೆ ನಡೆಸಲು ಅರ್ಹತೆ ಪಡೆದ ಪೈಲಟ್ ಗಳನ್ನು ಪಾಳಿಯಲ್ಲಿ ನಿಯೋಜಿಸುವಲ್ಲಿ ವಿಫಲಗೊಂಡಿರುವ ಏರ್ ಇಂಡಿಯಾ ಹಾಗೂ ಸ್ಪೈಸ್ ಜೆಟ್ ವಿಮಾನ ಯಾನ ಸಂಸ್ಥೆಗಳಿಗೂ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯವು ತಲಾ ರೂ. 30 ಲಕ್ಷ ದಂಡ ವಿಧಿಸಿದೆ.
ಮಿನುಗುತ್ತಿರುವ ತಾರೆ?
ಈ ವಾರದಲ್ಲಿ ಇಂತಹ ಘಟನೆಗಳು ನಡೆದಿರುವ ಹೊರತಾಗಿಯೂ, “ನಾಗರಿಕ ವಿಮಾನ ಯಾನ ಕ್ಷೇತ್ರದಲ್ಲಿ ಭಾರತವು ಮಿನುಗುತ್ತಿರುವ ತಾರೆಯಾಗಿದೆ” ಎಂದು ಗುರುವಾರ ಆಯೋಜನೆಗೊಂಡಿದ್ದ ವೈಮಾನಿಕ ಸಮ್ಮೇಳನವಾದ ವಿಂಗ್ಸ್ ಇಂಡಿಯಾದಲ್ಲಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಘೋಷಿಸಿದ್ದಾರೆ.
2014ರಲ್ಲಿ 60 ದಶಲಕ್ಷದಷ್ಟಿದ್ದ ಸ್ವದೇಶಿ ಪ್ರಯಾಣಿಕರ ಸಂಖ್ಯೆ 2020ರ ಹೊತ್ತಿಗೆ 143 ದಶಲಕ್ಷಕ್ಕೆ ಏರಿಕೆಯಾಗುವ ಮೂಲಕ ಕ್ರೋಡೀಕೃತ ವಾರ್ಷಿಕ ಪ್ರಗತಿ ದರವು ಶೇ. 14.5ರಷ್ಟಾಗಿದೆ ಹಾಗೂ 2030ರ ಅಂತ್ಯದ ವೇಳೆಗೆ ಈ ಸಂಖ್ಯೆಯು 300 ದಶಲಕ್ಷ ತಲುಪುವ ನಿರೀಕ್ಷೆ ಇದೆ ಎಂಬುದರತ್ತ ಅವರು ಬೊಟ್ಟು ಮಾಡಿದ್ದಾರೆ.
“ನಮ್ಮ ವೈಮಾನಿಕ ಕ್ಷೇತ್ರವು ನಿಯಮಿತವಾಗಿ ಪ್ರತಿ ದಿನ 4.5 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಸ್ವದೇಶಿ ಪ್ರಯಾಣಿಕರ ಸಂಖ್ಯೆ 4.65 ಲಕ್ಷಕ್ಕೆ ಏರಿಕೆಯಾಗಿದೆ. 2020ರ ಆರ್ಥಿಕ ವರ್ಷಕ್ಕೆ ಅಂತ್ಯಗೊಂಡಂತೆ ಕಳೆದ ಆರು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿನ ಕ್ರೋಡೀಕೃತ ವಾರ್ಷಿಕ ಪ್ರಗತಿ ದರವೂ ಶೇ. 6.1ರಷ್ಟು ವೃದ್ಧಿಯಾಗಿದೆ” ಎಂದು ಅವರು ಹೇಳಿದ್ದಾರೆ.
ಅಮೆರಿಕಾ ಮತ್ತು ಚೀನಾದ ನಂತರ ಹೆಚ್ಚು ವಿಮಾನಗಳನ್ನು ಖರೀದಿಸುತ್ತಿರುವ ಮೂರನೆ ದೊಡ್ಡ ದೇಶ ಭಾರತವಾಗಿದೆ ಎಂದೂ ಸಿಂಧಿಯಾ ತಿಳಿಸಿದ್ದಾರೆ. ಇದರ ಬೆನ್ನಿಗೇ 17 ತಿಂಗಳ ಪ್ರಾಯದ ಆಕಾಸ ವಿಮಾನ ಯಾನ ಸಂಸ್ಥೆಯು 150 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಖರೀದಿ ಆದೇಶವನ್ನು ಪ್ರಕಟಿಸಿದೆ. ಭಾರತದ ಎರಡು ದೊಡ್ಡ ವಿಮಾನ ಯಾನ ಸಂಸ್ಥೆಗಳಾದ ಇಂಡಿಗೊ ಹಾಗೂ ಏರ್ ಇಂಡಿಯಾ 970 ವಿಮಾನಗಳ ಖರೀದಿಗಾಗಿ ಏರ್ ಬಸ್ ಮತ್ತು ಬೋಯಿಂಗ್ ಸಂಸ್ಥೆಗಳಿಗೆ ಆದೇಶ ನೀಡಿದ ಕೆಲವೇ ತಿಂಗಳ ಅಂತರದಲ್ಲಿ ಈ ಪ್ರಕಟಣೆ ಹೊರ ಬಿದ್ದಿದೆ.
ಎರಡನೆ ಕ್ಯಾಟ್-III ರನ್ ವೇಯು ಪ್ರಯಾಣಿಕರ ತೊಂದರೆಗಳನ್ನು ನಿವಾರಿಸುವ ಸಾಧ್ಯತೆ ಇದ್ದು, ಈ ವರ್ಷ ಸೃಷ್ಟಿಯಾದ ಅವ್ಯವಸ್ಥೆಯು ವಿಮಾನ ಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳು ಹಾಗೂ ಮಂಜು ಕವಿದ ಋತುವಿನಲ್ಲಿ ಸುಗಮ ಪ್ರಯಾಣ ಅನುಭವ ನೀಡುವ ಜವಾಬ್ದಾರಿ ಹೊಂದಿರುವ ಪ್ರಾಧಿಕಾರಗಳಿಗೆ ಪಾಠವಾಗಲಿ ಎಂದಷ್ಟೇ ಈ ಹೊತ್ತಿನಲ್ಲಿ ಆಶಿಸಬಹುದಾಗಿದೆ.
ಸೌಜನ್ಯ: theprint.in







