ದಿಲ್ಲಿ ಚಲೋ ಪ್ರತಿಭಟನೆ | ರೈತರ ವಿರುದ್ಧ ಮಿಲಿಟರಿ ಮಾದರಿ ಮದ್ದುಗುಂಡುಗಳ ಬಳಕೆ: ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಆರೋಪ

Photo : PTI
ಹೊಸದಿಲ್ಲಿ : ಅರೆ ಮಿಲಿಟರಿ ಪಡೆಗಳು ಪ್ರತಿಭಟನಾನಿರತ ರೈತರ ವಿರುದ್ಧ ಮಿಲಿಟರಿ ಮಾದರಿಯ ಮದ್ದುಗುಂಡುಗಳನ್ನು ಬಳಸುತ್ತಿವೆ ಎಂದು ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರವಣ ಸಿಂಗ್ ಪಂಧೇರ್ ಅವರು ಗುರುವಾರ ಆರೋಪಿಸಿದರು. ಅವಧಿ ಮುಕ್ತಾಯಗೊಂಡ ಮದ್ದುಗುಂಡುಗಳನ್ನು ದಾಖಲೆಗಳಲ್ಲಿ ತೋರಿಸಲಾಗುವುದಿಲ್ಲ, ಹೀಗಾಗಿ ಅವುಗಳನ್ನೇ ರೈತರ ವಿರುದ್ಧ ಬಳಸಲಾಗುತ್ತಿದೆ ಎಂದು ಅವರು ಹೇಳಿದರು.
ಸ್ಮೋಕ್ ಶೆಲ್ಗಳು ಮತ್ತು ರಬ್ಬರ್ ಬುಲೆಟ್ಗಳನ್ನು ಹೋಲುವ ಮದ್ದುಗುಂಡುಗಳನ್ನು ಸುದ್ದಿಗಾರರ ಎದುರು ಪ್ರದರ್ಶಿಸಿದ ಪಂಧೇರ್, ಸೇನೆಯು ಮಾತ್ರ ಬಳಸುವ ಅಶ್ರುವಾಯು, ಗಾಳಿಯಲ್ಲಿ ಸ್ಫೋಟಿಸುವ ಸ್ಮೋಕ್ ಶೆಲ್ ಮತ್ತು ನೆಲದ ಮೇಲೆ ಸ್ಫೋಟಿಸುವ ಸ್ಮೋಕ್ ಶೆಲ್ಗಳನ್ನು ನಿಮಗೆ ತೋರಿಸುತ್ತಿದ್ದೇವೆ. ಗುರಿಗೆ ಅಪ್ಪಳಿಸಿದ ಬಳಿಕ ಸ್ಫೋಟಗೊಳ್ಳುವ ಮತ್ತು ಗಾಯಗಳನ್ನುಂಟು ಮಾಡುವ ಇದನ್ನು ಸೇನೆಯು ಮಾತ್ರ ಬಳಸುತ್ತದೆ, ಪೋಲಿಸರಲ್ಲ. ಭಾರೀ ಸ್ಫೋಟಕ ಮದ್ದುಗುಂಡುಗಳನ್ನು ಬಳಸಲಾಗುತ್ತಿದೆ. ಖಾಸಗಿಯಾಗಿ ಖರೀದಿಸಲಾಗಿರುವ ಎಸ್ಎಲ್ಆರ್ ಗುಂಡುಗಳನ್ನು ಹಾರಿಸಲಾಗುತ್ತಿದೆ ಎಂದು ಆರೋಪಿಸಿದರು.
ದೇಶಾದ್ಯಂತ ರೈತರನ್ನು ಬಂಧಿಸಲಾಗುತ್ತಿದೆ. ಅವರು ತಮ್ಮ ಮನೆಗಳಿಂದ ಹೊರಬರಲೂ ಅವಕಾಶವನ್ನು ನೀಡಲಾಗುತ್ತಿಲ್ಲ ಎಂದು ಪಂಧೇರ್ ತಿಳಿಸಿದರು.
ಈ ನಡುವೆ ಗುರುವಾರ ರಾಜಪುರ ಮತ್ತು ಪಟಿಯಾಳಾದ ರೈತರು ರಾಜಪುರ ರೈಲು ನಿಲ್ದಾಣದಲ್ಲಿ ಹಳಿಗಳ ಮೇಲೆ ಕುಳಿತು ರೈಲುಗಳ ಸಂಚಾರಕ್ಕೆ ನಿರ್ಬಂಧವೊಡ್ಡಿದ್ದರು.
ಎಂಎಸ್ಪಿ ಕುರಿತು ಕಾನೂನು ಮತ್ತು ಸಾಲಮನ್ನಾ ಸೇರಿದಂತೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಡ ಹೇರಲು ರೈತರ ‘ದಿಲ್ಲಿ ಚಲೋ ’ ಆಂದೋಲನವನ್ನು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಮುನ್ನಡೆಸುತ್ತಿವೆ. ತಮ್ಮ ‘ದಿಲ್ಲಿ ಚಲೋ ’ ಕರೆಯ ಅಂಗವಾಗಿ ಪಂಜಾಬಿನ ರೈತರು ಶಂಭು ಮತ್ತು ಖಾನೌರಿ ಗಡಿಗಳಲ್ಲಿ ಜಮಾಯಿಸಿದ್ದಾರೆ.







