ದಿಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಹತ್ಯೆಗೆ ಕೇಂದ್ರ ಸರಕಾರ, ದಿಲ್ಲಿ ಪೊಲೀಸರಿಂದ ಸಂಚು: ಎಎಪಿ ಆರೋಪ

ಅರವಿಂದ್ ಕೇಜ್ರಿವಾಲ್ | PC : PTI
ಹೊಸದಿಲ್ಲಿ: ಬಿಜೆಪಿ ನೇತೃತ್ವದ ಮತ್ತು ದಿಲ್ಲಿ ಪೊಲೀಸರು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಹತ್ಯೆ ಮಾಡಲು ಪಿತೂರಿ ನಡೆಸುತ್ತಿದ್ದು, ಕೇಜ್ರಿವಾಲ್ ಗೆ ಪಂಜಾಬ್ ಪೋಲಿಸ್ ಒದಗಿಸಿದ ಭದ್ರತೆಯನ್ನು ಪುನಃಸ್ಥಾಪಿಸಲು ಚುನಾವಣಾ ಆಯೋಗವನ್ನು ಎಎಪಿ ಒತ್ತಾಯಿಸಿದೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ದಿಲ್ಲಿ ಮುಖ್ಯಮಂತ್ರಿ ಆತಿಶಿ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಕೇಜ್ರಿವಾಲ್ ಅವರ ಭದ್ರತೆಯನ್ನು ಮರುಸ್ಥಾಪಿಸಲು ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆದೇಶದ ಮೇರೆಗೆ ಕೇಜ್ರಿವಾಲ್ ಮೇಲೆ ದಾಳಿ ನಡೆಯುತ್ತಿದೆ. ಕೇಂದ್ರದ ಅಧೀನದಲ್ಲಿ ಬರುವ ದಿಲ್ಲಿ ಪೊಲೀಸರು ಈ ಬಗ್ಗೆ ಕಣ್ಣು ಮುಚ್ಚಿದ್ದಾರೆ ಎಂದು ಆರೋಪಿಸಿದ್ದಾರೆ.
ಕೇಜ್ರಿವಾಲ್ ಅವರನ್ನು ಹತ್ಯೆ ಮಾಡುವ ಸಂಚಿನಲ್ಲಿ ಬಿಜೆಪಿ ಮತ್ತು ದಿಲ್ಲಿ ಪೊಲೀಸರು ಭಾಗಿಯಾಗಿದ್ದಾರೆ. ಅವರ ಮೇಲೆ ಒಂದರ ಹಿಂದೆ ಒಂದರಂತೆ ದಾಳಿಗೆ ಯತ್ನಿಸಲಾಗಿದೆ. ಕಳೆದ ಅಕ್ಟೋಬರ್ ನಲ್ಲಿ ಕೇಜ್ರಿವಾಲ್ ಮೇಲೆ ದಾಳಿ ನಡೆಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ದಾಳಿಕೋರರು ಬಿಜೆಪಿ ಕಾರ್ಯಕರ್ತರು ಎಂದು ಕಂಡುಬಂದಿದೆ, ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆತಿಶಿ ಆರೋಪಿಸಿದ್ದಾರೆ.
ಕೇಜ್ರಿವಾಲ್ ಅವರ ಭದ್ರತೆಯನ್ನು ಮರುಸ್ಥಾಪಿಸಬೇಕು ಎಂದು ನಾವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವೆ. ದಿಲ್ಲಿ ಪೊಲೀಸರ ಮೇಲೆ ನಮಗೆ ನಂಬಿಕೆ ಇಲ್ಲ, ಏಕೆಂದರೆ ಅದು ಅಮಿತ್ ಶಾ ಅವರ ನಿಯಂತ್ರಣದಲ್ಲಿದೆ ಎಂದು ಆತಿಶಿ ಹೇಳಿದ್ದಾರೆ.







