ನ್ಯಾಷನಲ್ ಹೆರಾಲ್ಡ್ ಪ್ರಕರಣ | ಸೋನಿಯಾ, ರಾಹುಲ್ ಗಾಂಧಿಗೆ ನೋಟಿಸ್ ನೀಡಿದ ದಿಲ್ಲಿ ನ್ಯಾಯಾಲಯ

Photo | NDTV
ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ನ್ಯಾಯಾಲಯ ಶುಕ್ರವಾರ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಅರ್ಜಿ ವಿಚಾರಣೆ ನಡೆಸಿದ ದಿಲ್ಲಿ ನ್ಯಾಯಾಲಯದ ನ್ಯಾಯಾಧೀಶರಾದ ವಿಶಾಲ್ ಗೋಗ್ನೆ, ʼಆರೋಪಿಗಳನ್ನು ವಿಚಾರಣೆ ನಡೆಸುವ ಹಕ್ಕು ನ್ಯಾಯಯುತ ವಿಚಾರಣೆಗೆ ಜೀವ ತುಂಬುತ್ತದೆʼ ಎಂದು ಹೇಳಿದರು.
ಈ ಕುರಿತ ಮುಂದಿನ ವಿಚಾರಣೆಯನ್ನು ಮೇ.8ಕ್ಕೆ ಮುಂದೂಡಲಾಗಿದೆ.
ಎಪ್ರಿಲ್ 25ರಂದು ದಿಲ್ಲಿ ನ್ಯಾಯಾಲಯ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಲು ತಾತ್ಕಾಲಿಕವಾಗಿ ನಿರಾಕರಿಸಿತ್ತು.
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಪ್ರಕರಣದ ದೂರುದಾರ. ಈ ಬಗ್ಗೆ ಜಾರಿ ನಿರ್ದೇಶನಾಲಯ 2021ರಲ್ಲಿ ತನಿಖೆ ಆರಂಭಿಸಿತ್ತು. ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರನ್ನು ಒಂದನೇ ಆರೋಪಿ ಮತ್ತು ರಾಹುಲ್ ಗಾಂಧಿ ಅವರನ್ನು ಎರಡನೇ ಆರೋಪಿ ಎಂದು ಹೆಸರಿಸಲಾಗಿತ್ತು.





