ದಿಲ್ಲಿ ಕರಡು ಮತದಾರರ ಪಟ್ಟಿ ಬಿಡುಗಡೆ | ಎಸ್ಐಆರ್ ಬಳಿಕ 47.7 ಲಕ್ಷ ಮತದಾರರ ಹೆಸರುಗಳು ರದ್ದು

ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ: ದಿಲ್ಲಿ ಚುನಾವಣಾ ಕಚೇರಿಯು ಸೋಮವಾರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು ವಿಶೇಷ ತೀವ್ರ ಪರಿಷ್ಕರಣೆಯಡಿ (ಎಸ್ಐಆರ್) ಮನೆಮನೆಗೆ ತೆರಳಿ ನಡೆಸಿದ ಪರಿಶೀಲನೆಯ ಬಳಿಕ ನಗರದ ಒಟ್ಟು 1.45 ಕೋಟಿ ಮತದಾರರ ಪೈಕಿ 47.7 ಲಕ್ಷ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ.
ಕರಡು ಪಟ್ಟಿಯಲ್ಲಿ ಹೆಸರಿಲ್ಲದವರು ಸೂಕ್ತ ದಾಖಲೆಗಳೊಂದಿಗೆ ಫಾರ್ಮ್-6ನ್ನು ಭರ್ತಿ ಮಾಡಿ ಸೆ.30ರೊಳಗೆ ಹೆಸರು ಸೇರ್ಪಡೆಗಾಗಿ ಅರ್ಜಿ ಸಲ್ಲಿಸಬಹುದು ಎಂದು ಮುಖ್ಯ ಚುನಾವಣಾ ಅಧಿಕಾರಿ ತಿಳಿಸಿದ್ದು, ಅಂತಿಮ ಮತದಾರರ ಪಟ್ಟಿಯು ನ.4ರಂದು ಪ್ರಕಟವಾಗಲಿದೆ.
ಚುನಾವಣಾ ಆಯೋಗದ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಹಕ್ಕುಗಳು ಹಾಗೂ ಆಕ್ಷೇಪಣೆಗಳ ಪರಿಶೀಲನೆ ಮತ್ತು ನೋಟೀಸ್ ಜಾರಿ ಪ್ರಕ್ರಿಯೆಯು ಅ.29ರವರೆಗೆ ಮುಂದುವರಿಯಲಿದೆ.
ಜೂ.30ರಿಂದ ಆ.17ರವರೆಗೆ ನಡೆದ ಎಸ್ಐಆರ್ ವೇಳೆ ಅರ್ಜಿಗಳನ್ನು ಸ್ವೀಕರಿಸಿ ಡಿಜಿಟಲ್ ರೂಪಕ್ಕಿಳಿಸಲಾದ ಸುಮಾರು 97.5 ಲಕ್ಷ ಮತದಾರರು ಮಾತ್ರ ಈ ಕರಡು ಪಟ್ಟಿಯಲ್ಲಿದ್ದು, ಇದು ದಿಲ್ಲಿಯ ಒಟ್ಟು 1,45,10,299 ಮತದಾರರ ಶೇ.67.18 ರಷ್ಟಿದೆ.
ಉಳಿದ 47.7 ಲಕ್ಷ ಮತದಾರರನ್ನು ಗೈರು, ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಮತದಾರರು ಹಾಗೂ ಇತರ ವರ್ಗಗಳ (ಎಎಸ್ಡಿಡಿಒ) ಅಡಿಯಲ್ಲಿ ವರ್ಗೀಕರಿಸಲಾಗಿದ್ದು, ಅವರ ಹೆಸರುಗಳನ್ನು ಕರಡು ಪಟ್ಟಿಯಿಂದ ಹೊರಗಿಡಲಾಗಿದೆ.
ದಿಲ್ಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ಡಿಜಿಟಲೀಕರಣ ಪ್ರಕ್ರಿಯೆಯು ವಿಭಿನ್ನವಾಗಿದ್ದು, ರೋಹಿಣಿ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ.83.43ರಷ್ಟು ದಾಖಲಾದರೆ, ತುಘಲಕಾಬಾದ್ನಲ್ಲಿ ಅತ್ಯಂತ ಕಡಿಮೆ ಅಂದರೆ ಶೇ.52.15 ರಷ್ಟು ದಾಖಲಾಗಿದೆ.
ಮನೆಮನೆಗೆ ತೆರಳಿ ನಡೆಸಿದ ಪರಿಶೀಲನೆಯ ವೇಳೆ ಅರ್ಜಿ ನಮೂನೆಗಳು ಸಿಗದ ಮತದಾರರು ಈಗ ಹಕ್ಕುಗಳು ಮತ್ತು ಆಕ್ಷೇಪಣೆಗಳ ಪ್ರಕ್ರಿಯೆಯ ಮೂಲಕ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಮರುಸೇರಿಸಿಕೊಳ್ಳಲು ಅವಕಾಶವಿರುತ್ತದೆ.






