ದಿಲ್ಲಿ ಅಬಕಾರಿ ನೀತಿ ಪ್ರಕರಣ| ನ್ಯಾ.ಸ್ವರ್ಣಕಾಂತ ಅವರ ಪೀಠದ ಮುಂದೆ ಹಾಜರಾಗಲು ನಿರಾಕರಿಸಿದ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್

ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ / ಅರವಿಂದ್ ಕೇಜ್ರಿವಾಲ್ (Photo source: delhihighcourt.nic/PTI)
ಹೊಸದಿಲ್ಲಿ: ಅಬಕಾರಿ ನೀತಿ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಪೀಠದ ಮುಂದೆ ಹಾಜರಾಗಲು ದಿಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರಾಕರಿಸಿದ್ದಾರೆ.
ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರನ್ನು ಈ ಪ್ರಕರಣದಿಂದ ದೂರವಿಡಬೇಕೆಂಬ ತನ್ನ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿದ ಬೆನ್ನಲ್ಲೆ ನ್ಯಾಯಾಂಗದೊಂದಿಗಿನ ಅವರ ಭಿನ್ನಾಭಿಪ್ರಾಯ ಹೆಚ್ಚಾಗಿದೆ.
ನ್ಯಾಯಾಧೀಶರಿಗೆ ಬರೆದ ಪತ್ರದಲ್ಲಿ ಕೇಜ್ರಿವಾಲ್ ಅವರು, ನಿರ್ದಿಷ್ಟ ನ್ಯಾಯಾಧೀಶರ ನ್ಯಾಯ ನೀಡುವ ಸಾಮರ್ಥ್ಯದ ಬಗ್ಗೆ ನಂಬಿಕೆ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ಮಹಾತ್ಮ ಗಾಂಧಿಯವರಿಂದ ಪ್ರೇರಿತವಾದ ಪ್ರತಿಭಟನೆಯ ಮಾರ್ಗವನ್ನು ಅನುಸರಿಸುವುದಾಗಿ ಹೇಳಿದ್ದಾರೆ.
"ನ್ಯಾಯಮೂರ್ತಿ ಸ್ವರ್ಣ ಕಾಂತ ಅವರಿಂದ ನನಗೆ ನ್ಯಾಯ ಸಿಗುತ್ತದೆ ಎಂಬ ನನ್ನ ನಿರೀಕ್ಷೆ ಸಂಪೂರ್ಣವಾಗಿ ಭಗ್ನವಾಗಿದೆ. ನಾನು ಅಥವಾ ನನ್ನ ಪರವಾಗಿ ವಕೀಲರು ನ್ಯಾಯಾಲಯದಲ್ಲಿ ಹಾಜರಾಗುವುದಿಲ್ಲ. ಆದ್ದರಿಂದ, ನಾನು ಮಹಾತ್ಮಾ ಗಾಂಧಿ ಅವರ ಸತ್ಯಾಗ್ರಹದ ಮಾರ್ಗವನ್ನು ಅನುಸರಿಸಲು ನಿರ್ಧರಿಸಿದ್ದೇನೆ" ಎಂದು ಕೇಜ್ರಿವಾಲ್ ಪತ್ರದಲ್ಲಿ ಹೇಳಿದ್ದಾರೆ.
"ನ್ಯಾಯಮೂರ್ತಿ ಸ್ವರ್ಣ ಕಾಂತ ಅವರ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ನಾನು ಕಾಯ್ದಿರಿಸಿದ್ದೇನೆ" ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ವಿರುದ್ಧ ಪಕ್ಷಪಾತದ ಆರೋಪಗಳನ್ನು ಮಾಡಿದ್ದರು. ಜಸ್ಟೀಸ್ ಸ್ವರ್ಣ ಕಾಂತ ಅವರು ದಿಲ್ಲಿ ಅಬಕಾರಿ ನೀತಿ ಪ್ರಕರಣದಿಂದ ಹಿಂದೆ ಸರಿಯಬೇಕು ಎಂದು ಮನವಿ ಮಾಡಿದ್ದರು. ಆದರೆ, ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಅಬಕಾರಿ ನೀತಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಲು ನಿರಾಕರಿಸಿದ್ದರು.






