ದಿಲ್ಲಿ: ತಿಲಕ್ ಮಾರ್ಗದಲ್ಲಿರುವ ಸುಪ್ರೀಂಕೋರ್ಟ್ ಗೂ ನುಗ್ಗಿದ ಪ್ರವಾಹದ ನೀರು
ಫ್ರಾನ್ಸ್ ನಿಂದ ಪ್ರವಾಹದ ಪರಿಸ್ಥಿತಿ ವಿಚಾರಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಬುಧವಾರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ್ದ ಯಮುನಾ ನದಿಯ ನೀರಿನ ಮಟ್ಟವು ನಿಧಾನವಾಗಿ ಕಡಿಮೆಯಾಗುತ್ತಿದ್ದರೂ ಕೂಡ ದಿಲ್ಲಿಯ ಹಲವಾರು ಪ್ರದೇಶಗಳು ಜಲಾವೃತವಾಗಿವೆ. ನಗರದ ಮಧ್ಯ ಭಾಗದಲ್ಲಿರುವ ತಿಲಕ್ ಮಾರ್ಗ್ ಪ್ರದೇಶದಲ್ಲಿರುವ ಸುಪ್ರೀಂಕೋರ್ಟ್ ಗೂ ಪ್ರವಾಹದ ನೀರು ತಲುಪಿದೆ.
ಐಟಿಒ ಹಾಗೂ ರಾಜ್ಘಾಟ್ ನಲ್ಲಿರುವ ಪ್ರದೇಶಗಳು ಇನ್ನೂ ಮುಳುಗಡೆಯಾಗಿದ್ದು, ದಿಲ್ಲಿ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆಯ ನಿಯಂತ್ರಕ ಇಂದ್ರಪ್ರಸ್ಥದ ಬಳಿ ಹಾನಿಯಾಗಿದೆ, ಇದು ಈಗಾಗಲೇ ಭೀಕರ ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ.
ನಿಯಂತ್ರಕಕ್ಕೆ ಆಗಿರುವ ಹಾನಿಯ ವಿಷಯವನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಂಡು ಸಮಸ್ಯೆ ಬಗೆಹರಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸರಕಾರ ಸೂಚಿಸಿದೆ ಎಂದು ದಿಲ್ಲಿ ಕ್ಯಾಬಿನೆಟ್ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ.
ಉಕ್ಕಿ ಹರಿಯುತ್ತಿರುವ ಯಮುನಾ ನದಿಯ ನೀರು ರಾಷ್ಟ್ರ ರಾಜಧಾನಿಯನ್ನು ಜಲಾವೃತಗೊಳಿಸಿದ್ದರಿಂದ ದಿಲ್ಲಿ ಸರಕಾರ ಬುಧವಾರದಂದು ಶಾಲೆಗಳು, ಕಾಲೇಜುಗಳು, ಸ್ಮಶಾನಗಳು ಹಾಗೂ ನೀರಿನ ಸಂಸ್ಕರಣಾ ಘಟಕಗಳನ್ನು ಮುಚ್ಚಿದೆ.
ಬೆಳಿಗ್ಗೆ 6 ಗಂಟೆಗೆ ಯಮುನಾ ನೀರಿನ ಮಟ್ಟವು 208.46 ಮೀಟರ್ಗಳಷ್ಟಿತ್ತು, ನಿನ್ನೆ ರಾತ್ರಿಯ 208.66 ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಇಂದು ನೀರಿನ ಮಟ್ಟ ಕುಸಿಯಲಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ 208.30 ಮೀಟರ್ ತಲುಪಬಹುದು ಎಂದು ಕೇಂದ್ರ ಜಲ ಆಯೋಗ ಮುನ್ಸೂಚನೆ ನೀಡಿದೆ.
ರಾಷ್ಟ್ರ ರಾಜಧಾನಿಯ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಪೂರೈಕೆ ಕಡಿತವಾಗಲಿದೆ ಎಂದು ದಿಲ್ಲಿ ಅಧಿಕಾರಿಗಳು ಹೇಳಿದ್ದಾರೆ.
ಪ್ರವಾಹದ ಪರಿಸ್ಥಿತಿ ವಿಚಾರಿಸಿದ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ನಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕರೆ ಮಾಡಿ ದಿಲ್ಲಿಯ ಕೆಲವು ಭಾಗಗಳಲ್ಲಿ ಪ್ರವಾಹದಂತಹ ಪರಿಸ್ಥಿತಿಯ ಬಗ್ಗೆ ವಿಚಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಮ್ಮ ದೂರವಾಣಿ ಸಂಭಾಷಣೆಯ ಸಮಯದಲ್ಲಿ, ಶಾ ಅವರು ಪ್ರಧಾನಿ ಮೋದಿಯವರಿಗೆ ಪ್ರವಾಹದಂತಹ ಪರಿಸ್ಥಿತಿಯ ಬಗ್ಗೆ ವಿವರಿಸಿದರು ಹಾಗೂ ಮುಂದಿನ 24 ಗಂಟೆಗಳಲ್ಲಿ ಯಮುನಾದಲ್ಲಿ ನೀರಿನ ಮಟ್ಟ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.







