ದಿಲ್ಲಿ ಹೈಕೋರ್ಟ್ನಿಂದ ಉಮರ್ ಖಾಲಿದ್ಗೆ 3 ದಿನಗಳ ಮಧ್ಯಂತರ ಜಾಮೀನು

ಉಮರ್ ಖಾಲಿದ್ (PTI)
ಹೊಸದಿಲ್ಲಿ, ಮೇ 22: ದಿಲ್ಲಿ ಹೈಕೋರ್ಟ್ ಶುಕ್ರವಾರ, 2020ರ ದಿಲ್ಲಿ ಗಲಭೆ ಪ್ರಕರಣದಲ್ಲಿ ಜೈಲಿನಲ್ಲಿರುವ ಹೋರಾಟಗಾರ ಹಾಗೂ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ರಿಗೆ ತನ್ನ ತಾಯಿಯ ಶಸ್ತ್ರಚಿಕಿತ್ಸೆಯ ವೇಳೆ ಆರೈಕೆ ಮಾಡಲು ಮೂರು ದಿನಗಳ ಮಧ್ಯಂತರ ಜಾಮೀನು ನೀಡಿದೆ.
ತನ್ನ ತಾಯಿಯ ಆರೈಕೆ ಮಾಡಲು ಸಾಧ್ಯವಾಗುವಂತೆ ಮೇ 22ರಿಂದ ಜೂನ್ 5ರವರೆಗೆ 15 ದಿನಗಳ ಅವಧಿಗೆ ಜಾಮೀನು ನೀಡುವಂತೆ ಕೋರಿ ಖಾಲಿದ್ ಮೊದಲು ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ವಿಚಾರಣಾ ನ್ಯಾಯಾಲಯವು ಮೇ 19ರಂದು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಅದನ್ನು ಅವರು ದಿಲ್ಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ತನ್ನ ಮಾವನ ಮರಣಾನಂತರದ 40ನೇ ದಿನದ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಲು ಮತ್ತು ತನ್ನ ತಾಯಿಯ ಶಸ್ತ್ರಚಿಕಿತ್ಸೆಯ ವೇಳೆ ಆರೈಕೆ ಮಾಡಲು ಜಾಮೀನು ನೀಡಬೇಕೆಂದು ಅವರು ತನ್ನ ಅರ್ಜಿಯಲ್ಲಿ ಕೋರಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಜೂನ್ ಒಂದರಿಂದ ಮೂರರವರೆಗೆ ಮೂರು ದಿನಗಳ ಜಾಮೀನು ನೀಡಿದೆ. ಅವರ ತಾಯಿಯ ಶಸ್ತ್ರಚಿಕಿತ್ಸೆಯು ಜೂನ್ 2ರಂದು ನಡೆಯಲಿದೆ.
ಖಾಲಿದ್ರ 62 ವರ್ಷದ ತಾಯಿ ಸಬೀಹಾ ಖಾನಮ್ರ ಬೆನ್ನಿನಲ್ಲಿ ಎರಡು ವರ್ಷಗಳಿಂದ ಗಡ್ಡೆ ಬೆಳೆದಿದ್ದು, ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಲು ಈ ತಿಂಗಳ ಆರಂಭದಲ್ಲಿ ವೈದ್ಯರು ಸಲಹೆ ನೀಡಿದ್ದಾರೆ.
ತನ್ನ ಮಾವ ಹತ್ತಿರದ ಸಂಬಂಧಿಯಲ್ಲ ಹಾಗೂ ತಾಯಿಯ ಆರೈಕೆಯನ್ನು ಇತರ ಕುಟುಂಬ ಸದಸ್ಯರು ಮಾಡಬಹುದು ಎಂಬ ವಿಚಾರಣಾ ನ್ಯಾಯಾಲಯದ ಅಭಿಪ್ರಾಯ ಸರಿಯಲ್ಲ ಎಂದು ಖಾಲಿದ್ ತನ್ನ ಅರ್ಜಿಯಲ್ಲಿ ವಾದಿಸಿದ್ದಾರೆ. ದಿವಂಗತ ಮಾವನೊಂದಿಗೆ ತಾನು ಆತ್ಮೀಯ ಸಂಬಂಧ ಹೊಂದಿದ್ದೆ ಹಾಗೂ ಶೋಕಾಚರಣೆ ಅವಧಿಯಲ್ಲಿ ತನ್ನ 87 ವರ್ಷದ ಅಜ್ಜಿಯೊಂದಿಗೆ ಸಮಯ ಕಳೆಯಲು ಬಯಸಿದ್ದೇನೆ ಎಂಬುದಾಗಿಯೂ ಅವರು ಹೇಳಿದ್ದಾರೆ.
2020ರಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಕೋಮುಗಲಭೆಗೆ ಪಿತೂರಿ ಹೂಡಿದ ಆರೋಪದಲ್ಲಿ ಖಾಲಿದ್ರನ್ನು 2020 ಸೆಪ್ಟಂಬರ್ನಲ್ಲಿ ಬಂಧಿಸಲಾಗಿತ್ತು. ಅಂದಿನಿಂದಲೂ ಅವರು ಜೈಲಿನಲ್ಲೇ ಇದ್ದಾರೆ.






