ಮಾನನಷ್ಟ ಪ್ರಕರಣ: ಧ್ರುವ್ ರಾಠೀ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿಗೊಳಿಸಿದ ದಿಲ್ಲಿ ನ್ಯಾಯಾಲಯ

Photo: X/Dhruv Rathee | PTI
ಹೊಸದಿಲ್ಲಿ: 2018ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಧ್ರುವ್ ರಾಠೀ ವಿರುದ್ಧ ದಿಲ್ಲಿ ನ್ಯಾಯಾಲಯ ಸೋಮವಾರ ಜಾಮೀನುರಹಿತ ವಾರಂಟ್ ಜಾರಿಗೊಳಿಸಿದೆ.
'ಐ ಸಪೋರ್ಟ್ ನರೇಂದ್ರ ಮೋದಿ' ಎಂಬ ಫೇಸ್ಬುಕ್ ಪುಟದ ಸಂಸ್ಥಾಪಕ ವಿಕಾಸ್ ಪಾಂಡೆ ಎಂಬವರು ಧ್ರುವ್ ರಾಠೀ ವಿರುದ್ಧ ದೂರು ದಾಖಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಸಾಕೇತ್ ನ್ಯಾಯಾಲಯದ ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅನಮ್ ರಯೀಸ್ ಖಾನ್ ಅವರು ಈ ಆದೇಶ ಹೊರಡಿಸಿದ್ದಾರೆ.
ಪ್ರಸ್ತುತ ಜರ್ಮನಿಯಲ್ಲಿರುವ ಧ್ರುವ್ ರಾಠೀ, ಅಕ್ಟೋಬರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP)ಯ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಭೇಟಿ ನೀಡಿದ್ದರು. ದಿಲ್ಲಿಯಲ್ಲಿ ಪ್ರತಿಭಟನೆಗೂ ಮುನ್ನ ದಿಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು.
'BJP IT Cell Part II' ಎಂಬ ಶೀರ್ಷಿಕೆಯ ವೀಡಿಯೊದಲ್ಲಿ ಧ್ರುವ್ ರಾಠೀ ತಮ್ಮ ವಿರುದ್ಧ ಸುಳ್ಳು ಹಾಗೂ ಮಾನಹಾನಿಕರ ಆರೋಪಗಳನ್ನು ಮಾಡಿದ್ದಾರೆ ಎಂದು ಪಾಂಡೆ ಆರೋಪಿಸಿದ್ದಾರೆ. ಈ ವೀಡಿಯೊದಲ್ಲಿನ ಆರೋಪಗಳಿಂದ ತಮ್ಮ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ತಿಳಿಸಿದ್ದಾರೆ.
ಜಾಮೀನುರಹಿತ ವಾರಂಟ್ ಜಾರಿಗೊಳಿಸುವ ಮೊದಲು ನ್ಯಾಯಾಲಯವು ಧ್ರುವ್ ರಾಠೀ ಅವರಿಗೆ ಸಮನ್ಸ್ ಹಾಗೂ ಎರಡು ಜಾಮೀನು ಸಹಿತ ವಾರಂಟ್ಗಳನ್ನು ಜಾರಿಗೊಳಿಸಿತ್ತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು 2026ರ ಡಿಸೆಂಬರ್ 3ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ.






