ದಿಲ್ಲಿ ಮತ್ತು ಬಾಂಬೆ ಹೈಕೋರ್ಟ್ಗೆ ಬಾಂಬ್ ಬೆದರಿಕೆ : ಕಲಾಪ ಸ್ಥಗಿತಗೊಳಿಸಿ ನ್ಯಾಯಾಲಯದಿಂದ ಹೊರಗೆ ಬಂದ ನ್ಯಾಯಾಧೀಶರು

ಸಾಂದರ್ಭಿಕ ಚಿತ್ರ | ಬಾಂಬೆ ಹೈಕೋರ್ಟ್/ barandbench
ಹೊಸದಿಲ್ಲಿ : ದಿಲ್ಲಿ ಹೈಕೋರ್ಟ್ ಗೆ ಶುಕ್ರವಾರ ಮಧ್ಯಾಹ್ನ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಯಿತು. ಹೈಕೋರ್ಟ್ ಗೆ ಬಂದ ಪತ್ರದಲ್ಲಿ ಹೈಕೋರ್ಟ್ ಕಟ್ಟಡದೊಳಗೆ ಬಾಂಬ್ ಸ್ಫೋಟ ನಡೆಯಲಿದೆ ಎಂದು ಬೆದರಿಕೆ ಹಾಕಲಾಗಿತ್ತು. ಇದರಿಂದಾಗಿ ನ್ಯಾಯಾಲಯ ಆವರಣದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ.
ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು ತಕ್ಷಣ ವಿಚಾರಣೆಗಳನ್ನು ಮುಂದೂಡಿ ಪೀಠಗಳಿಂದ ಹೊರ ಬಂದರು. ವಕೀಲರು, ನ್ಯಾಯಾಧೀಶರು ನ್ಯಾಯಾಲಯದ ಕೊಠಡಿಗಳಿಂದ ಹೊರ ನಡೆದರು. ಹೈಕೋರ್ಟ್ ಆವರಣದಲ್ಲಿ ಕೆಲಕಾಲ ಗೊಂದಲ ಮತ್ತು ಉದ್ವಿಗ್ನತೆ ಆವರಿಸಿತು.
ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ಕರೆಸಲಾಗಿದೆ. ಹೈಕೋರ್ಟ್ ಕಟ್ಟಡದ ಹೊರಗೆ ಬಾಂಬ್ ನಿಷ್ಕ್ರಿಯ ದಳವನ್ನು ನಿಯೋಜಿಸಲಾಗಿದ್ದು, ಸಂಪೂರ್ಣ ಆವರಣವನ್ನು ಪರಿಶೀಲನೆಗೊಳಪಡಿಸಲಾಗುತ್ತಿದೆ.
ಇದೇ ರೀತಿ ಶುಕ್ರವಾರ ಮಧ್ಯಾಹ್ನ ಬಾಂಬೆ ಹೈಕೋರ್ಟ್ಗೆ ಕೂಡ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ವರದಿಯಾಗಿದೆ. ನ್ಯಾಯಾಲಯದ ಆವರಣದಲ್ಲಿ ಪರಿಶೀಲನೆ ನಡೆಯುತ್ತಿದೆ.





