ದಿಲ್ಲಿಯ ಶಿಶು ಮಾರಾಟ ಜಾಲ ಬಯಲಿಗೆ

Photo Credit: AI
ಹೊಸದಿಲ್ಲಿ, ಜೂ.20: ಬಡ ದಂಪತಿಗಳಿಗೆ ಜನಿಸಿದ 4-5 ದಿನಗಳಷ್ಟೇ ಆಗಿರುವ ನವಜಾತ ಶಿಶುಗಳನ್ನು ಲಕ್ಷಾಂತರ ರೂಪಾಯಿಗಳಿಗೆ ಮಕ್ಕಳಿಲ್ಲದ ದಂಪತಿಗಳಿಗೆ ಮಾರಾಟ ಮಾಡುತ್ತಿದ್ದ ಶಿಶು ಕಳ್ಳಸಾಗಣೆ ಜಾಲವೊಂದನ್ನು ದಿಲ್ಲಿ ಪೊಲೀಸರು ಭೇದಿಸಿದ್ದಾರೆ.
ಕೇಂದ್ರ ದಿಲ್ಲಿಯ ಪಹಾರ್ಗಂಜ್ ನಲ್ಲಿ ಮಹಿಳೆಯೊಬ್ಬರು ಆಗಾಗ್ಗೆ ಬೇರೆ ಬೇರೆ ಶಿಶುಗಳೊಂದಿಗೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಯೊಬ್ಬರು ನೀಡಿದ ಸುಳಿವನ್ನು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಶಿಶು ಕಳ್ಳಸಾಗಣೆ ಜಾಲವನ್ನು ಭೇದಿಸಲು ಪೊಲೀಸರು ಪ್ರದೇಶದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು ಹಾಗೂ ಗುಪ್ತಚರ ಮಾಹಿತಿಗಳನ್ನು ಕೂಡ ಕಲೆ ಹಾಕಿದ್ದರು. ಹಲವು ದಿನಗಳ ಶೋಧ ಕಾರ್ಯಾಚರಣೆಯ ಬಳಿಕ ಪೊಲೀಸರು ಮಹಿಳೆಯನ್ನು ಸೆರೆಹಿಡಿಯುವಲ್ಲಿ ಸಫಲರಾಗಿದ್ದಾರೆ. ಬಂಧಿತ ಮಹಿಳೆಯನ್ನು ಜ್ಯೋತಿ ಯಾನೆ ಕಮಲೇಶ್ ಎಂದು ಗುರುತಿಸಲಾಗಿದ್ದು, ಶಿಶು ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಳೆಂದು ಪೊಲೀಸರು ತಿಳಿಸಿದ್ದಾರೆ.
*‘ಗ್ರಾಹಕಿ’ಯ ಸೋಗಿನಲ್ಲಿ ಆರೋಪಿಯನ್ನು ಸಂಪರ್ಕಿಸಿದ್ದ ಮಹಿಳಾ ಪೊಲೀಸ್
ಶಿಶುವನ್ನು ಖರೀದಿಸಲು ಬಯಸುತ್ತಿರುವ ಗ್ರಾಹಕಿಯ ಮಾರುವೇಷದಲ್ಲಿ ಮಹಿಳಾ ಪೊಲೀಸರೊಬ್ಬರು ಈ ಮಹಿಳೆಯನ್ನು ಸಂಪರ್ಕಿಸಿದ್ದರು. ಮಗುವನ್ನು ಖರೀದಿಸಲು 20 ಸಾವಿರ ರೂ. ನೀಡುವ ಒಪ್ಪಂದವೂ ಆಗಿತ್ತು. ಜೂನ್ 5ರಂದು ಆರೋಪಿ ಜ್ಯೋತಿ ಯಾನೆ ಕಮಲೇಶ್, ಶಿಶುವನ್ನು ಮಾರುವೇಷದ ಮಹಿಳಾ ಪೊಲೀಸ್ ಗೆ ತಂದು ಒಪ್ಪಿಸಿದ್ದಳು. ಆಗ ಸ್ಥಳದಲ್ಲೇ ಆಕೆಯನ್ನು ಬಂಧಿಸಲಾಯಿತು.
ಆಕೆಯನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ಅಂತಾರಾಜ್ಯ ಶಿಶು ಮಾರಾಟ ಜಾಲವೊಂದು ಕಾರ್ಯಾಚರಿಸುತ್ತಿರುವುದು ಬಯಲಿಗೆ ಬಂದಿತು. ರಾಜಸ್ಥಾನ, ಗುಜರಾತ್ ರಾಜ್ಯಗಳ ಬಡ ದಂಪತಿಗಳಿಂದ ಶಿಶುಗಳನ್ನು ಖರೀದಿಸಿ ಅಥವಾ ಅಪಹರಿಸಿ ಅವುಗಳನ್ನು ಮಧ್ಯಪ್ರದೇಶ ಹಾಗೂ ಹರಿಯಾಣದಲ್ಲಿ ಮಕ್ಕಳಿಲ್ಲದ ದಂಪತಿಗಳಿಗೆ ಮಾರಾಟ ಮಾಡುತ್ತಿರುವುದು ಪತ್ತೆಯಾಯಿತು.
ವಿಚಾರಣೆ ವೇಳೆ ಕಮಲೇಶ್ ನೀಡಿದ ಮಾಹಿತಿಯನ್ನು ಆಧರಿಸಿ ಆಕೆಯ ಸಹಚರರಾದ ಶಾಲು, ಲಲಿತ್ ಎಂಬವರನ್ನು ಬಂಧಿಸಲಾಯಿತು. ಆನಂತರ ಲಲಿತ್ನ ಸಹವರ್ತಿಗಳಾದ ಪ್ರತಿಭಾ ಹಾಗೂ ವಿಪಿನ್ ಅವರನ್ನು ಸೆರೆಹಿಡಿಯಲಾಯಿತು.
ಮಾರಾಟಕ್ಕಾಗಿ ಶಿಶುಗಳನ್ನು ಸಂಪಾದಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಭೇಟಿಯಾಗಲು ತೆರಳುತ್ತಿದ್ದಾಗ ಆರೋಪಿಗಳಾದ ಪ್ರತಿಭಾ ಹಾಗೂ ವಿಪಿನ್ ಅವರನ್ನು ಬಂಧಿಸಲಾಯಿತು. ಪ್ರತಿಭಾ ಹಾಗೂ ವಿಪಿನ್ರಿಂದ ಪೊಲೀಸರು 3 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
► ದಿಲ್ಲಿಯ ಆಸ್ಪತ್ರೆ ಶಿಶು ಮಾರಾಟ ಜಾಲದ ಕೇಂದ್ರಬಿಂದು
ಹಲವು ದಿನಗಳ ತೀವ್ರ ವಿಚಾರಣೆಯ ಬಳಿಕ ಬಂಧಿತ ಆರೋಪಿಗಳು ಪಶ್ಚಿಮ ದಿಲ್ಲಿಯ ಆಸ್ಪತ್ರೆಯೊಂದು ಶಿಶು ಮಾರಾಟ ಜಾಲದ ಕೇಂದ್ರಬಿಂದುವಾಗಿ ಕಾರ್ಯಾಚರಿಸುತ್ತಿರುವ ಬಗ್ಗೆ ಬಾಯ್ಬಿಟ್ಟರು. ರೋಹಿಣಿ ಪ್ರದೇಶದ ಬೇಗಂಪುರದಲ್ಲಿರುವ ಹಿರಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮಾಲಕಿ ಡಾ. ವಿವೇಕಿ ಜಾಲದ ಕಿಂಗ್ಪಿನ್ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದರು.
ಮಕ್ಕಳಿಲ್ಲದ ದಂಪತಿಗಳಿಗೆ ಶಿಶುಗಳನ್ನು ಮಾರಾಟ ಮಾಡುವವರೆಗೆ ಅವುಗಳನ್ನು ಡಾ. ವಿವೇಕಿಯ ಆಸ್ಪತ್ರೆಯಲ್ಲಿ ಆರೋಪಿಗಳು ಇರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಡಾ. ವಿವೇಕಿ, ಶಿಶುಗಳ ಸಂಬಂಧಿಸಿದ ನಕಲಿ ದಾಖಲೆಗಳನ್ನು, ಜನನ ಪ್ರಮಾಣಪತ್ರಗಳನ್ನು, ಹೆರಿಗೆಯ ದಾಖಲೆಗಳನ್ನು ಮತ್ತು ನಕಲಿ ಬಿಲ್ಗಳನ್ನು ತನ್ನ ಆಸ್ಪತ್ರೆಯಲ್ಲಿ ಮಾಡಿಕೊಡುತ್ತಿದ್ದರು. ಅಲ್ಲದೆ, ಆ ಶಿಶುಗಳು ಇದೇ ಆಸ್ಪತ್ರೆಯಲ್ಲಿ ಜನಿಸಿದಂತೆ ತೋರಿಸಲಾಗುತ್ತಿತ್ತು ಎಂದು ಡಿಸಿಪಿ ರೋಹಿತ್ ರಾಜ್ಭರ್ ಸಿಂಗ್ ತಿಳಿಸಿದ್ದಾರೆ.






