Delhi | ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಬಿಜೆಪಿ ಸಚಿವ ಪರ್ವೇಶ್ ವರ್ಮಾ: ವಿಡಿಯೋ ವೈರಲ್

Photo | PTI
ಹೊಸದಿಲ್ಲಿ: ತಿಲಕ್ ನಗರದಲ್ಲಿ ರವಿವಾರ ರಸ್ತೆ ಪರಿಶೀಲನೆ ನಡೆಸುತ್ತಿದ್ದ ವೇಳೆ ದಿಲ್ಲಿ ಪಿಡಬ್ಲ್ಯೂಡಿ (PWD) ಸಚಿವ ಪರ್ವೇಶ್ ವರ್ಮಾ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ (AAP) ಆರೋಪಿಸಿದೆ. ಘಟನೆಗೆ ಸಂಬಂಧಿಸಿದ ವಿಡಿಯೋವನ್ನು AAP ನಾಯಕರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಸಚಿವ ಪರ್ವೇಶ್ ವರ್ಮಾ ಅವರು ವ್ಯಕ್ತಿಯ ಎಡಗೈಯಲ್ಲಿದ್ದ ಮೊಬೈಲ್ ಫೋನ್ ಅನ್ನು ಕೆಳಕ್ಕೆ ಎಳೆಯುವುದು ಮತ್ತು ಬಳಿಕ ಕಪಾಳಮೋಕ್ಷ ಮಾಡುವುದು ಕಂಡು ಬರುತ್ತದೆ. ನಂತರ ಆ ವ್ಯಕ್ತಿ ವರ್ಮಾ ಅವರನ್ನು ಪ್ರಶ್ನಿಸುತ್ತಿರುವಂತೆ ಕಾಣುತ್ತದೆ. ಈ ವೇಳೆ ಭದ್ರತಾ ಸಿಬ್ಬಂದಿಯೊಬ್ಬರು ಮಧ್ಯಪ್ರವೇಶಿಸಿ ತಡೆದಿದ್ದಾರೆ.
‘ಓಯ್, ಹೊಡೆಯುತ್ತಿರುವುದೇಕೆ?’ ಎಂದು ವ್ಯಕ್ತಿಯೋರ್ವರು ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ. ರಸ್ತೆಯ ಸ್ಥಿತಿಯನ್ನು ಪರಿಶೀಲಿಸಲು ವರ್ಮಾ ಅವರು ಸ್ಥಳಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ರಸ್ತೆಯ ಸ್ಥಿತಿ ತೋರಿಸಿದ್ದಕ್ಕೆ ಹಲ್ಲೆ ನಡೆಸಿದರು:
ಸಾಹೇಬ್ ಎಂದು ಗುರುತಿಸಲಾದ ವ್ಯಕ್ತಿ, ತಾವು ಸ್ಥಳೀಯ ಶಾಸಕರ ಸಾಮಾಜಿಕ ಜಾಲತಾಣ ಚಟುವಟಿಕೆಗಳನ್ನು ನಿರ್ವಹಿಸುತ್ತಿರುವುದಾಗಿ ಹೇಳಿದ್ದಾರೆ. ರಸ್ತೆಯ ಸ್ಥಿತಿಯನ್ನು ಪರಿಶೀಲಿಸಲು ಪಿಡಬ್ಲ್ಯೂಡಿ ಇಲಾಖೆಯು ತಮ್ಮನ್ನು ಸ್ಥಳಕ್ಕೆ ಕರೆದಿತ್ತು ಎಂದು ತಿಳಿಸಿದ್ದಾರೆ.
‘ರಸ್ತೆಯ ಮೇಲ್ಮೈ ಹೇಗೆ ಕಿತ್ತುಬರುತ್ತಿದೆ ಎಂಬುದನ್ನು ನಾನು ಅವರಿಗೆ ತೋರಿಸಿದೆ. ಈ ವಿಷಯವನ್ನು ಸಚಿವರ ಗಮನಕ್ಕೆ ತಂದಾಗ ಅವರು ಅದನ್ನು ಸಹಿಸಿಕೊಳ್ಳಲಿಲ್ಲ. ನನ್ನ ಮೇಲೆ ಹಲ್ಲೆ ನಡೆಸಿದರು. ಅವರ ಸಹಚರರು ನನ್ನನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದರು’ ಎಂದು ಸಾಹೇಬ್ ಆರೋಪಿಸಿದ್ದಾರೆ.
ಘಟನೆ ನಡೆದಾಗ ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಇದ್ದರು. ಸಚಿವರು ಕ್ಷಮೆ ಯಾಚಿಸಬೇಕು. ಅಲ್ಲದೆ, ಅವರ ವಿರುದ್ಧ ಅಮಾನತಿನಂತಹ ಶಿಸ್ತುಕ್ರಮ ಕೈಗೊಳ್ಳಬೇಕು’ ಎಂದು ಸಾಹೇಬ್ ಒತ್ತಾಯಿಸಿದ್ದಾರೆ.
‘ನಾವು ಕೇವಲ ಆರೋಪ ಮಾಡುತ್ತಿಲ್ಲ. ಎಲ್ಲದಕ್ಕೂ ವಿಡಿಯೋ ಸಾಕ್ಷ್ಯವಿದೆ. ನಾವು ಎಫ್ಐಆರ್ (FIR) ದಾಖಲಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ತಿಲಕ್ ನಗರ AAP ಶಾಸಕ ಜರ್ನೈಲ್ ಸಿಂಗ್ ಕೂಡ ಘಟನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರಸ್ತೆ ಪರಿಶೀಲನೆಯ ಕಾರ್ಯಕ್ರಮವನ್ನು ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯ ಮೇಲೆ ವರ್ಮಾ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಕುರಿತ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವರ್ಮಾ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
#WATCH | Delhi: On a video showing him slapping a local youth during a road inspection row in Tilak Nagar, Delhi Minister Parvesh Verma says, "You should know the truth behind a video currently being circulated by the Aam Aadmi Party. Road construction work has been underway on… pic.twitter.com/vvMp9MQjOA
— ANI (@ANI) September 27, 2026






