ಸಿಜೆಪಿ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ವಿರುದ್ಧ ನಿಂದನಾತ್ಮಕ ಪೋಸ್ಟ್ ಆರೋಪ : ದಿಲ್ಲಿ ಪೊಲೀಸರಿಂದ ಹಲವು X ಬಳಕೆದಾರರಿಗೆ ನೋಟಿಸ್

ಸಾಂದರ್ಭಿಕ ಚಿತ್ರ
ಹೊಸ ದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿ ಹಾಗೂ ಇತರೆಡೆ ನೀಟ್ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾಗ, ಪ್ರಧಾನಿ ನರೇಂದ್ರ ಮೋದಿ ಹಾಗೂ ಭದ್ರತಾ ಪಡೆಗಳ ವಿರುದ್ಧ ನಿಂದನಾತ್ಮಕ ಪೋಸ್ಟ್ ಗಳನ್ನು ಮಾಡಿದ ಆರೋಪದಲ್ಲಿ ಕೆಲವು ಸುದ್ದಿ ಜಾಲತಾಣಗಳ ಖಾತೆಗಳು ಸೇರಿದಂತೆ ಹಲವು ಖಾತೆಗಳ ಬಳಕೆದಾರರಿಗೆ ದಿಲ್ಲಿ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ ಎಂದು NDTV ವರದಿ ಮಾಡಿದೆ.
ನೀಟ್ ಪ್ರತಿಭಟನೆ ವೇಳೆ ಹಾಗೂ ಮುಕ್ತಾಯಗೊಂಡ ನಂತರ, ಅಪ್ಲೋಡ್ ಮಾಡಲಾಗಿರುವ ತುಣುಕುಗಳ ಪರಿಶೀಲನೆ ನಡೆಸಿದ ಬಳಿಕ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಂಭವನೀಯ ಕಾನೂನು ಉಲ್ಲಂಘನೆ ಮಾಡಿದ ಆರೋಪ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡುವುದರಲ್ಲಿ ಅವುಗಳ ಪರಿಣಾಮಕಾರಿ ಪ್ರಭಾವವನ್ನು ಬೀರಿರುವ ಪೋಸ್ಟ್ ಗಳು, ವಿಡಿಯೊಗಳು ಹಾಗೂ ಪ್ರತಿಕ್ರಿಯೆಗಳನ್ನು ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಆದರೆ, ಈವರೆಗೆ ಎಷ್ಟು ಎಕ್ಸ್ ಬಳಕೆದಾರರಿಗೆ ನೋಟಿಸ್ ನೀಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಇದಕ್ಕೂ ಮುನ್ನ, ಪ್ರತಿಭಟನೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಗಳು, ವದಂತಿಗಳು ಹಾಗೂ ಡೀಪ್ ಫೇಕ್ ವಿಡಿಯೋಗಳನ್ನು ಹಂಚಿಕೊಂಡಿದ್ದ ಸುಮಾರು 400 ಸಾಮಾಜಿಕ ಮಾದ್ಯಮ ಖಾತೆಗಳನ್ನು ಪತ್ತೆ ಹಚ್ಚಲಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿರುವ ಬಗ್ಗೆ ವರದಿಯಾಗಿತ್ತು.




