‘ಆನ್ಲೈನ್ ಚಟುವಟಿಕೆ’ಗೆ ಸಂಬಂಧಿಸಿದ ಎಫ್ಐಆರ್ | ಮಾಜಿ ನಾಗರಿಕ ಸೇವಾ ಅಧಿಕಾರಿ ಆಶಿಶ್ ಜೋಶಿ ಅವರನ್ನು ವಶಕ್ಕೆ ಪಡೆದ ದಿಲ್ಲಿ ಪೊಲೀಸರು

ಆಶಿಶ್ ಜೋಶಿ (X/@bismil_prasad)
ಹೊಸದಿಲ್ಲಿ: ಈ ವರ್ಷದ ಮಾರ್ಚ್ ನಲ್ಲಿ ಕೇಂದ್ರ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾದ ಮಾಜಿ ನಾಗರಿಕ ಸೇವಾ ಅಧಿಕಾರಿ ಆಶಿಶ್ ಜೋಶಿ ಅವರನ್ನು ದಿಲ್ಲಿ ಪೊಲೀಸರು ಬುಧವಾರ ಬೆಳಿಗ್ಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
‘ಗಲಭೆ ಉಂಟುಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಪ್ರಚೋದನೆ ನೀಡುವುದು’ಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 192ರ ಅಡಿಯಲ್ಲಿ ಜೋಶಿ ಅವರ ‘ಆನ್ಲೈನ್ ಚಟುವಟಿಕೆ’ ಕುರಿತು ದಿಲ್ಲಿ ಪೊಲೀಸರ ವಿಶೇಷ ಘಟಕವು ಎರಡು ದಿನಗಳ ಹಿಂದೆ ಪ್ರಕರಣ ದಾಖಲಿಸಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಭಾರತೀಯ ಅಂಚೆ ಮತ್ತು ದೂರಸಂಪರ್ಕ ಲೆಕ್ಕಪತ್ರ ಹಾಗೂ ಹಣಕಾಸು ಸೇವೆ (ಐಪಿ ಆ್ಯಂಡ್ ಟಿಎಎಫ್ಎಸ್) ವಿಭಾಗದ 1992ರ ಬ್ಯಾಚ್ ನ ಅಧಿಕಾರಿಯಾಗಿರುವ ಜೋಶಿ ಅವರನ್ನು ವಿಚಾರಣೆ ಬಳಿಕ ಬುಧವಾರ ಸಂಜೆ ಬಿಡುಗಡೆ ಮಾಡಲಾಯಿತು.
ಸಂಜೆ 7.30ರ ಸುಮಾರಿಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದ ಜೋಶಿ, ‘ಈಗಷ್ಟೇ ಮನೆಗೆ ಮರಳಿದ್ದೇನೆ. ದಿಲ್ಲಿ ವಿಶೇಷ ಘಟಕದ ಪೊಲೀಸರು ನನ್ನನ್ನು ಮನೆಗೆ ಬಿಟ್ಟುಹೋದರು. ವಿವರಗಳನ್ನು ಬಳಿಕ ನೀಡುತ್ತೇನೆ’ ಎಂದು ತಿಳಿಸಿದ್ದಾರೆ.
‘ಎರಡು ದಿನಗಳ ಹಿಂದೆ ಪ್ರಕರಣ ದಾಖಲಾಗಿತ್ತು. ಅವರನ್ನು ವಿಚಾರಣೆಗೆ ಕರೆಯಲಾಗಿತ್ತು ಮತ್ತು ವಶಕ್ಕೆ ಪಡೆಯಲಾಗಿತ್ತು. ಇದು ಸಂಜ್ಞೇಯ ಹಾಗೂ ಜಾಮೀನು ನೀಡಬಹುದಾದ ಅಪರಾಧ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬುಧವಾರ ಬೆಳಿಗ್ಗೆ ಸರಳ ಉಡುಪಿನಲ್ಲಿದ್ದ ದೆಹಲಿ ಪೊಲೀಸರು ಜೋಶಿ ಅವರನ್ನು ಕರೆದೊಯ್ದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಮಾಜಿ ಶಾಸಕ ಹಾಗೂ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರು ‘ಎಕ್ಸ್’ನಲ್ಲಿ, ‘ನನ್ನ ಆತ್ಮೀಯ ಸ್ನೇಹಿತ ಹಾಗೂ ನಾಗರಿಕ ಸಮಾಜದೊಂದಿಗೆ ಸಂಪರ್ಕ ಸಾಧಿಸಲು ನನಗೆ ಸಹಾಯ ಮಾಡುತ್ತಿದ್ದ ಆಶಿಶ್ ಜೋಶಿ ಅವರನ್ನು ನೆಹರೂ ಪಾರ್ಕ್ನಿಂದ ಇಬ್ಬರು ಪೊಲೀಸ್ ಸಿಬ್ಬಂದಿ ಕರೆದೊಯ್ದಿದ್ದಾರೆ. ಅವರ ಪತ್ನಿ ಬೆಳಿಗ್ಗೆ ನನ್ನೊಂದಿಗೆ ಮಾತನಾಡಿದ ಬಳಿಕ ಈ ವಿಷಯ ತಿಳಿಯಿತು. ಬೆಳಿಗ್ಗೆ 10 ಗಂಟೆಯಿಂದ ಅವರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಆದರೆ ಯಾವುದೇ ಮಾಹಿತಿ ಸಿಕ್ಕಿಲ್ಲ. ನಾವು ತುಂಬಾ ಆತಂಕದಲ್ಲಿದ್ದೇವೆ. ದಿಲ್ಲಿ ಪೊಲೀಸರು ಅವರನ್ನು ಎಲ್ಲಿಗೆ ಕರೆದೊಯ್ದಿದ್ದಾರೆ ಎಂಬುದನ್ನು ಸಾಧ್ಯವಾದಷ್ಟು ಬೇಗ ತಿಳಿಸಬೇಕು’ ಎಂದು ಹೇಳಿದ್ದರು.
ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ್ ಕೂಡ, ‘ಇಂದು ಮುಂಜಾನೆ ದಿಲ್ಲಿಯಲ್ಲಿ ಬೆಳಗಿನ ವಾಕಿಂಗ್ಗೆ ತೆರಳಿದ್ದ ಮಾಜಿ ಅಧಿಕಾರಿ ಆಶಿಶ್ ಜೋಶಿ ಅವರನ್ನು ಇಬ್ಬರು ಸರಳ ಉಡುಪಿನಲ್ಲಿದ್ದ ದಿಲ್ಲಿ ಪೊಲೀಸರು ಕರೆದೊಯ್ದಿದ್ದಾರೆ. ಅವರು ಎಲ್ಲಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ. ಮೋದಿ ಸರ್ಕಾರ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ಗಳಿಂದ ಅಸಮಾಧಾನಗೊಂಡಿದೆಯೇ?’ ಎಂದು ಪ್ರಶ್ನಿಸಿದ್ದರು.
ಈ ಬೆಳವಣಿಗೆ ಕುರಿತು ThePrintಗೆ ಪ್ರತಿಕ್ರಿಯಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಜೋಶಿ ಅವರನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗುತ್ತಿದೆ ಮತ್ತು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದರು. ಆದರೆ ಆಗ ಎಫ್ಐಆರ್ ಅಥವಾ ಪ್ರಕರಣದ ಸೆಕ್ಷನ್ಗಳ ವಿವರಗಳನ್ನು ಅವರು ಬಹಿರಂಗಪಡಿಸಿರಲಿಲ್ಲ. ಪ್ರಕರಣದಲ್ಲಿ ಜೋಶಿ ಅವರ ಪಾತ್ರವೂ ಸ್ಪಷ್ಟವಾಗಿರಲಿಲ್ಲ.
ಸಾಮಾಜಿಕ ಮಾಧ್ಯಮ ಪೋಸ್ಟ್ ಗಳು
ಜೋಶಿ ಅವರ ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳಲ್ಲಿ ಪ್ರಸ್ತುತ ಆಡಳಿತದ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. ಇತ್ತೀಚೆಗೆ ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಪೊಲೀಸರ ಕ್ರಮದ ಬಗ್ಗೆಯೂ ಅವರು ಪೋಸ್ಟ್ ಮಾಡಿದ್ದರು.
‘ನಾಗರಿಕ ಸೇವೆಯ ಆಂತರಿಕ ವಿಚಾರ. ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳ ವಿರುದ್ಧದ ಕ್ರಮಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಮತ್ತು ಗೃಹ ಕಾರ್ಯದರ್ಶಿ ನಡುವೆ ತೀವ್ರ ಭಿನ್ನಾಭಿಪ್ರಾಯ ಉಂಟಾಗಿತ್ತು. ವಿದ್ಯಾರ್ಥಿಗಳ ವಿರುದ್ಧ ಕಠಿಣ ಪೊಲೀಸ್ ಕ್ರಮವನ್ನು ಗೃಹ ಕಾರ್ಯದರ್ಶಿ ವಿರೋಧಿಸಿದ್ದರು. ಕ್ಷೇತ್ರದಲ್ಲಿದ್ದ ಕಿರಿಯ ಅಧಿಕಾರಿಗಳಲ್ಲಿಯೂ ಇದಕ್ಕೆ ವಿರೋಧವಿತ್ತು. ಗೃಹ ಕಾರ್ಯದರ್ಶಿ ವಿಸ್ತರಣೆ ಬಯಸಿರಲಿಲ್ಲ. ಆದರೆ ಗೃಹ ಸಚಿವರ ವಿರೋಧದ ನಡುವೆಯೂ ಅವರಿಗೆ ವಿಸ್ತರಣೆ ನೀಡಲಾಯಿತು. ನಾಗರಿಕರು ಇದರ ಹಿಂದಿನ ಅರ್ಥವನ್ನು ಅರ್ಥಮಾಡಿಕೊಳ್ಳಬಹುದು’ ಎಂದು ಅವರು ಬರೆದಿದ್ದರು. ಈ ಪೋಸ್ಟ್ ಅನ್ನು ಬಳಿಕ ಅಳಿಸಲಾಗಿತ್ತು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್ಯಾಲಿ ಬಳಿಕ ಹಲ್ದ್ವಾನಿಯಲ್ಲಿ ನಡೆದ ‘ಶುದ್ಧೀಕರಣ’ದ ಬಗ್ಗೆಯೂ ಜೋಶಿ ಪೋಸ್ಟ್ ಮಾಡಿದ್ದರು.
2019ರಲ್ಲಿ ಅಮಾನತು
2019ರಲ್ಲಿ ಆಗಿನ ಆಮ್ ಆದ್ಮಿ ಪಕ್ಷದ ಬಂಡಾಯ ಶಾಸಕ ಕಪಿಲ್ ಮಿಶ್ರಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ವಿವಾದಾತ್ಮಕ ವಿಡಿಯೊದ ಕುರಿತು ಕ್ರಮ ಕೈಗೊಳ್ಳುವಂತೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ನಾಗರಿಕ ಸೇವಾ ನಡವಳಿಕೆ ನಿಯಮ ಉಲ್ಲಂಘನೆಯ ಆರೋಪದಲ್ಲಿ ಜೋಶಿ ಅವರನ್ನು ಅಮಾನತುಗೊಳಿಸಲಾಗಿತ್ತು.
ಆ ಸಂದರ್ಭದಲ್ಲಿ ಜೋಶಿ ThePrintಗೆ, ‘ನಾನು ಯಾವುದೇ ಅಪರಾಧ ಮಾಡಿಲ್ಲ. ಸಾರ್ವಜನಿಕ ಸೇವಕನಾಗಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತರುವುದು ನನ್ನ ಕೆಲಸವಾಗಿತ್ತು. ನಾನು ಮಾಡಿದ್ದಕ್ಕೆ ನನಗೆ ಯಾವುದೇ ವಿಷಾದವಿಲ್ಲ’ ಎಂದು ಹೇಳಿದ್ದರು.
ಆ ವೇಳೆ ಅವರು ಉತ್ತರಾಖಂಡದಲ್ಲಿ ದೂರಸಂಪರ್ಕ ಇಲಾಖೆಯ (ಡಿಒಟಿ) ಸಂವಹನ ನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮಿಶ್ರಾ ಅವರು ಅಪ್ಲೋಡ್ ಮಾಡಿದ್ದ ವಿಡಿಯೊದ ಕುರಿತು ದಿಲ್ಲಿ ಪೊಲೀಸ್ ಆಯುಕ್ತರಿಗೆ ಜೋಶಿ ದೂರು ನೀಡಿದ್ದರು. ವಿಡಿಯೊದಲ್ಲಿ ಪತ್ರಕರ್ತೆ ಬರ್ಖಾ ದತ್ ಹಾಗೂ ಕಾರ್ಯಕರ್ತರಾದ ಪ್ರಶಾಂತ್ ಭೂಷಣ್, ಕವಿತಾ ಕೃಷ್ಣನ್ ಮತ್ತು ಶೆಹ್ಲಾ ರಶೀದ್ ಸೇರಿದಂತೆ ಭಾರತದ ‘ಆಂತರಿಕ ಶತ್ರುಗಳ’ ವಿರುದ್ಧ ದಾಳಿ ನಡೆಸುವ ಅಗತ್ಯದ ಕುರಿತು ಮಿಶ್ರಾ ಮಾತನಾಡಿದ್ದರು.
‘ಸಾಮಾಜಿಕ ಮಾಧ್ಯಮದಲ್ಲಿ ಅಸಭ್ಯ ಸಂದೇಶಗಳು ಹರಡುತ್ತಿರುವ ವಿಷಯವನ್ನು ನನ್ನ ಕಾಲೇಜಿನ ಕಿರಿಯ ಸಹಪಾಠಿ ಬರ್ಖಾ ದತ್ ನನ್ನ ಗಮನಕ್ಕೆ ತಂದಿದ್ದರು. ಅವರು ನನ್ನನ್ನು ಟ್ವಿಟರ್ನಲ್ಲಿ ಟ್ಯಾಗ್ ಮಾಡಿದ್ದರು’ ಎಂದು ಜೋಶಿ ಆಗ ಹೇಳಿದ್ದರು.
ದಿಲ್ಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಜೋಶಿ, ಸಾರ್ವಜನಿಕ ಸೇವಕನಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ತಿಳಿಸುವುದು ತಮ್ಮ ಕರ್ತವ್ಯವಾಗಿತ್ತು ಎಂದು ಹೇಳಿದ್ದರು.
ಈ ವರ್ಷದ ಮಾರ್ಚ್ ನಲ್ಲಿ ಕೇಂದ್ರ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾಗಿರುವ ಜೋಶಿ, ಭಾರತೀಯ ಅಂಚೆ ಮತ್ತು ದೂರಸಂಪರ್ಕ ಲೆಕ್ಕಪತ್ರ ಹಾಗೂ ಹಣಕಾಸು ಸೇವೆ ವಿಭಾಗದ 1992ರ ಬ್ಯಾಚ್ ನ ಅಧಿಕಾರಿಯಾಗಿದ್ದಾರೆ.






