Delhi SIR | ಅಲ್ಪಸಂಖ್ಯಾತ ಪ್ರಾಬಲ್ಯದ SC ಕ್ಷೇತ್ರಗಳಲ್ಲಿ ಶೇ. 20–45ರಷ್ಟು ಮತದಾರರ ಹೆಸರು ಡಿಲೀಟ್!

Photo Credit : PTI
ಹೊಸದಿಲ್ಲಿ, ಸೆ. 1: ದಿಲ್ಲಿಯಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಮತ್ತು ಪರಿಶಿಷ್ಟ ಜಾತಿಗೆ (SC) ಮೀಸಲಾದ ವಿಧಾನಸಭಾ ಕ್ಷೇತ್ರಗಳಲ್ಲಿ ಶೇ. 20ರಿಂದ 45ರಷ್ಟು ಮತದಾರರ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.
SIR ಕೈಗೊಳ್ಳಲಾಗುತ್ತಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ದಿಲ್ಲಿಯಲ್ಲಿ ಒಟ್ಟಾರೆಯಾಗಿ ಅತಿ ಹೆಚ್ಚು ಪ್ರಮಾಣದ ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಿಲ್ಲಿ ಮುಖ್ಯ ಚುನಾವಣಾಧಿಕಾರಿ (CEO) ಕಚೇರಿ ಆಗಸ್ಟ್ 31ರಂದು 70 ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿತು. ದಿಲ್ಲಿಯಲ್ಲಿ ಒಟ್ಟು 1.45 ಕೋಟಿ ಮತದಾರರ ಪೈಕಿ 47.5 ಲಕ್ಷ ಮಂದಿಯ ಹೆಸರುಗಳನ್ನು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದು ಒಟ್ಟು ಮತದಾರರ ಶೇ 33ರಷ್ಟಾಗಿದೆ.
►ಓಖ್ಲಾದಲ್ಲಿ ಶೇ. 45
ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಏಳು ಕ್ಷೇತ್ರಗಳ ಪೈಕಿ ಓಖ್ಲಾದಲ್ಲಿ ಅತಿ ಹೆಚ್ಚು, ಶೇ 45ರಷ್ಟು ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಆಮ್ ಆದ್ಮಿ ಪಕ್ಷದ (AAP) ಶಾಸಕ ಅಮಾನುಲ್ಲಾ ಖಾನ್ ಪ್ರತಿನಿಧಿಸುವ ಓಖ್ಲಾ ಕ್ಷೇತ್ರದಲ್ಲಿ ಒಟ್ಟು 3,62,813 ಮತದಾರರಿದ್ದರು. ಅವರಲ್ಲಿ 1,63,829 ಮಂದಿಯ ಹೆಸರುಗಳನ್ನು ತೆಗೆದುಹಾಕಲಾಗಿದ್ದು, 1,98,984 ಮತದಾರರ ಹೆಸರುಗಳು ಕರಡು ಪಟ್ಟಿಯಲ್ಲಿ ಉಳಿದಿವೆ.
ಇತರ ಅಲ್ಪಸಂಖ್ಯಾತ ಪ್ರಾಬಲ್ಯದ ಕ್ಷೇತ್ರಗಳಲ್ಲೂ ಗಣನೀಯ ಪ್ರಮಾಣದ ಹೆಸರುಗಳನ್ನು ತೆಗೆದುಹಾಕಲಾಗಿದೆ. ಚಾಂದನಿ ಚೌಕ್ ನಲ್ಲಿ ಶೇ. 38, ಬಲ್ಲಿಮಾರನ್ನಲ್ಲಿ ಶೇ. 32, ಮುಸ್ತಫಾಬಾದ್ ನಲ್ಲಿ ಶೇ. 28, ಬಾಬರ್ ಪುರದಲ್ಲಿ ಶೇ. 26, ಮಾಟಿಯಾ ಮಹಲ್ ನಲ್ಲಿ ಶೇ. 24 ಮತ್ತು ಸೀಲಾಂಪುರದಲ್ಲಿ ಶೇ. 23ರಷ್ಟು ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ.
ಈ ಕ್ಷೇತ್ರಗಳಲ್ಲಿ ತೆಗೆದುಹಾಕಲಾದ ಮತದಾರರ ಸಂಖ್ಯೆ ಚಾಂದನಿ ಚೌಕ್ನಲ್ಲಿ 48,405, ಮುಸ್ತಫಾಬಾದ್ನಲ್ಲಿ 80,804, ಬಾಬರ್ ಪುರದಲ್ಲಿ 55,264, ಬಲ್ಲಿಮಾರನ್ ನಲ್ಲಿ 49,640, ಸೀಲಾಂಪುರದಲ್ಲಿ 45,105 ಮತ್ತು ಮಾಟಿಯಾ ಮಹಲ್ ನಲ್ಲಿ 32,099.
ಜೂನ್ 30ರಿಂದ ಆಗಸ್ಟ್ 17ರವರೆಗೆ ಮನೆಮನೆಗೆ ತೆರಳಿ ಮತದಾರರ ಪರಿಶೀಲನೆ ನಡೆಸಲಾಗಿತ್ತು. 70 ಕ್ಷೇತ್ರಗಳಲ್ಲೂ ಮತದಾರರ ಹೆಸರುಗಳನ್ನು ತೆಗೆದುಹಾಕುವ ಯಾವುದೇ ನಿರ್ದಿಷ್ಟ ಮಾದರಿ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಸಾಮಾನ್ಯ ಕ್ಷೇತ್ರಗಳಿಗೆ ಹೋಲಿಸಿದರೆ ಅಲ್ಪಸಂಖ್ಯಾತ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಮತದಾರರ ಎನ್ಯೂಮರೇಷನ್ ಫಾರ್ಮ್ ಸಲ್ಲಿಕೆ ಪ್ರಮಾಣ ತುಲನಾತ್ಮಕವಾಗಿ ಹೆಚ್ಚಿತ್ತು.
ಪೂರ್ಣಗೊಂಡ ಮತದಾರರ ನಮೂನೆಗಳ ಡಿಜಿಟಲೀಕರಣವು ಸೀಲಾಂಪುರದಲ್ಲಿ ಶೇ 76.6ರಷ್ಟಿದ್ದು, ಮಾಟಿಯಾ ಮಹಲ್ ನಲ್ಲಿ ಶೇ. 75.5, ಬಾಬರ್ ಪುರದಲ್ಲಿ ಶೇ. 72.9 ಮತ್ತು ಮುಸ್ತಫಾಬಾದ್ ನಲ್ಲಿ ಶೇ. 71.9ರಷ್ಟಿದೆ.
►SC ಮೀಸಲು ಕ್ಷೇತ್ರಗಳಲ್ಲೂ ಡಿಲೀಟ್
ದಿಲ್ಲಿಯ 12 SC ಮೀಸಲು ಕ್ಷೇತ್ರಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಕರೋಲ್ ಬಾಗ್ ನಲ್ಲಿ ಶೇ. 40, ಅಂಬೇಡ್ಕರ್ ನಗರದಲ್ಲಿ ಶೇ. 39, ದೇವ್ಲಿಯಲ್ಲಿ ಶೇ. 37, ಕೊಂಡ್ಲಿಯಲ್ಲಿ ಶೇ. 37, ತ್ರಿಲೋಕ್ಪುರಿಯಲ್ಲಿ ಶೇ. 33, ಸೀಮಾಪುರಿಯಲ್ಲಿ ಶೇ. 31 ಮತ್ತು ಸುಲ್ತಾನ್ಪುರಿ ಮಜ್ರಾದಲ್ಲಿ ಶೇ. 31ರಷ್ಟು ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ.
ಶೇ. 30ಕ್ಕಿಂತ ಕಡಿಮೆ ಪ್ರಮಾಣದ ಹೆಸರು ಅಳಿಕೆ ಕಂಡುಬಂದಿರುವ ಮೀಸಲು ಕ್ಷೇತ್ರಗಳಲ್ಲಿ ಗೋಕಲ್ ಪುರ (ಶೇ. 25), ಬವಾನಾ (ಶೇ 23), ಮಾದೀಪುರ (ಶೇ. 23) ಮತ್ತು ಮಂಗೋಲ್ ಪುರಿ (ಶೇ. 21) ಸೇರಿವೆ.
ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕಿರುವ ಮೀಸಲು ಕ್ಷೇತ್ರಗಳ ಪೈಕಿ ದೇವ್ಲಿಯಲ್ಲಿ 94,726, ಪಟೇಲ್ ನಗರದಲ್ಲಿ 80,346, ಕೊಂಡ್ಲಿಯಲ್ಲಿ 75,930, ಬವಾನಾದಲ್ಲಿ 74,829, ಕರೋಲ್ಬಾಗ್ನಲ್ಲಿ 72,430, ಸೀಮಾಪುರಿಯಲ್ಲಿ 68,227, ತ್ರಿಲೋಕ್ಪುರಿಯಲ್ಲಿ 63,582, ಅಂಬೇಡ್ಕರ್ ನಗರದಲ್ಲಿ 63,260 ಮತ್ತು ಗೋಕಲ್ಪುರದಲ್ಲಿ 60,625 ಹೆಸರುಗಳನ್ನು ತೆಗೆದುಹಾಕಲಾಗಿದೆ.
►ಗೈರು, ಸ್ಥಳಾಂತರಗೊಂಡ, ಮೃತರ ಹೆಸರುಗಳು
ದಿಲ್ಲಿ CEO ಕಚೇರಿಯ ಪ್ರಕಾರ, ಕರಡು ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾದ ಮತದಾರರನ್ನು ಗೈರುಹಾಜರು, ಸ್ಥಳಾಂತರಗೊಂಡವರು, ಮೃತಪಟ್ಟವರು, ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರು ಮತ್ತು ಇತರರು (ASDDO) ಎಂಬ ವರ್ಗಗಳ ಅಡಿಯಲ್ಲಿ ಗುರುತಿಸಲಾಗಿದೆ.
CEO ಕಚೇರಿಯ ದತ್ತಾಂಶದ ಪ್ರಕಾರ, ASDDO ವರ್ಗಕ್ಕೆ ಅತಿ ಹೆಚ್ಚು ಕೊಡುಗೆ ನೀಡಿರುವವರು ಶಾಶ್ವತವಾಗಿ ಸ್ಥಳಾಂತರಗೊಂಡ ಅಥವಾ ಗೈರುಹಾಜರಾಗಿರುವ ಮತದಾರರು. ಒಟ್ಟು 47,56,722 ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಈ ಪೈಕಿ 43,32,775 ಮಂದಿ ಗೈರುಹಾಜರು ಅಥವಾ ಸ್ಥಳಾಂತರಗೊಂಡವರ ವರ್ಗಕ್ಕೆ ಸೇರಿದವರು.
ಮೃತ ಮತದಾರರ ಸಂಖ್ಯೆ 2,82,412. ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಹೆಸರು ಹೊಂದಿರುವವರ ಸಂಖ್ಯೆ 1,41,535.
ಗೈರುಹಾಜರಾಗಿರುವ ಅಥವಾ ಸ್ಥಳಾಂತರಗೊಂಡಿರುವ ಮತದಾರರು ಸೆಪ್ಟೆಂಬರ್ 30ರವರೆಗೆ ನಡೆಯುವ ಸೇರ್ಪಡೆ ಮತ್ತು ಆಕ್ಷೇಪಣೆ ಸಲ್ಲಿಕೆ ಅವಧಿಯಲ್ಲಿ ಫಾರ್ಮ್–6 ಸಲ್ಲಿಸಿ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸುವಂತೆ ಕೋರಬಹುದು.
ಸೇರ್ಪಡೆ ಮತ್ತು ಆಕ್ಷೇಪಣೆ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ನವೆಂಬರ್ 4ರಂದು ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.






