ದಿಲ್ಲಿ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಮಂದಿ ಸಾವು
ಚಳಿಯಿಂದ ಪಾರಾಗಲು ಬೆಂಕಿ ಹೊತ್ತಿಸಿದ್ದ ಸಂತ್ರಸ್ತರು

Photo: indiatoday.in
ಹೊಸದಿಲ್ಲಿ: ದಿಲ್ಲಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಆರು ಜನರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಎರಡೂ ಪ್ರಕರಣಗಳಲ್ಲಿ ಮೃತರು ಚಳಿಯಿಂದ ಪಾರಾಗಲು ಕೋಣೆಯ ಮೂಲೆಯಲ್ಲಿ ಬೆಂಕಿ ಉರಿಸಿದ್ದರು.
ಉತ್ತರ ದಿಲ್ಲಿಯಲ್ಲಿ ಸಂಭವಿಸಿದ ಮೊದಲ ಘಟನೆಯಲ್ಲಿ ದಂಪತಿ ಹಾಗೂ ಅವರ ಏಳು ಮತ್ತು ಎಂಟು ವರ್ಷ ಪ್ರಾಯದ ಇಬ್ಬರು ಮಕ್ಕಳು ಮನೆಯಲ್ಲಿ ಶವಗಳಾಗಿ ಪತ್ತೆಯಾಗಿದ್ದಾರೆ. ಮನೆಯ ಬಾಗಿಲನ್ನು ಒಳಗಿನಿಂದ ಭದ್ರಪಡಿಸಲಾಗಿತ್ತು. ದಂಪತಿ ಚಳಿಯಿಂದ ಪಾರಾಗಲು ಕೋಣೆಯ ಮೂಲೆಯಲ್ಲಿ ಬೆಂಕಿ ಹಾಕಿದ್ದರು,ಆದರೆ ಹೊಗೆಯಿಂದ ಉಸಿರುಗಟ್ಟಿ ಎಲ್ಲ ನಾಲ್ವರು ಮೃತಪಟ್ಟಿರುವುದನ್ನು ಪ್ರಾಥಮಿಕ ತನಿಖೆಯು ಸೂಚಿಸಿದೆ.
ಪಶ್ಚಿಮ ದಿಲ್ಲಿಯ ಇಂದ್ರಪುರಿಯಲ್ಲಿ ಸಂಭವಿಸಿದ ಎರಡನೇ ಘಟನೆಯಲ್ಲಿ ನೇಪಾಳ ಮೂಲದ ಇಬ್ಬರು ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೋಣೆಯಲ್ಲಿದ್ದ ಏಕೈಕ ಕಿಟಕಿಯನ್ನು ಮುಚ್ಚಲಾಗಿತ್ತು. ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಗಿದ್ದು,ಅಲ್ಲಿ ಕೊನೆಯುಸಿರೆಳೆದಿದ್ದಾರೆ.





