ದಿಲ್ಲಿ ಮೆಟ್ರೋ ಸ್ಟೇಷನ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ : ಬಾಲಕನಿಗೆ ತರಗತಿಯಲ್ಲಿ ಶಿಕ್ಷಕ ಅವಮಾನಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆ

ಹೊಸದಿಲ್ಲಿ: ದಿಲ್ಲಿಯ ಪ್ರತಿಷ್ಠಿತ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಗಳು ಮಹತ್ವದ ಸುಳಿವು ನೀಡಿರುವುದಾಗಿ ದಿಲ್ಲಿ ಪೊಲೀಸ್ ಮೂಲಗಳು ತಿಳಿಸಿವೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಒಬ್ಬ ಶಿಕ್ಷಕ 16 ವರ್ಷದ ಬಾಲಕನನ್ನು ತರಗತಿಯಲ್ಲೇ ಇತರ ಮಕ್ಕಳ ಎದುರು ಅವಮಾನಿಸುತ್ತಿರುವುದು ದಾಖಲಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಜೇಂದ್ರ ಪ್ಲೇಸ್ ಮೆಟ್ರೋ ನಿಲ್ದಾಣದಿಂದ ಬಾಲಕ ಹಾರಿ ಆತ್ಮಹತ್ಯೆಗೆ ಶರಣಾದ ಎರಡು ದಿನಗಳ ನಂತರ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಪೊಲೀಸರು ಬಾಲಕನ ಐವರು ಸ್ನೇಹಿತರ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಬಾಲಕನ ಆತ್ಮಹತ್ಯೆಗೆ ಕಾರಣವಾಗಿರುವ ವಿಷಯಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಬಾಲಕನ ತಂದೆ ನೀಡಿದ ದೂರಿನಂತೆ ಎಫ್‌ಐಆರ್‌ನಲ್ಲಿ ಮೂವರು ಸಹಪಾಠಿಗಳ ಹೆಸರು ಸೇರಿದ್ದು, ಆತ್ಮಹತ್ಯೆಗೆ ನಾಲ್ಕು ದಿನಗಳ ಮೊದಲೇ ಮಗನು ನಿರಂತರವಾಗಿ ಅವಮಾನ ಅನುಭವಿಸುತ್ತಿದ್ದನೆಂದು ಆರೋಪಿಸಲಾಗಿದೆ. ಸಾಕ್ಷಿದಾರರ ಹೇಳಿಕೆಗಳ ಪ್ರಕಾರ ಶಿಕ್ಷಕರಿಂದ ನಿಯಮಿತವಾಗಿ ಬೆದರಿಕೆ ಮತ್ತು ಗುರಿಯಾಗಿಸುವ ವರ್ತನೆ ಕಂಡುಬಂದಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 107 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 3(5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಶಾಲೆಯು ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಮಧ್ಯ ದಿಲ್ಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಉಪ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಮಾಡಿದೆ. ನವೆಂಬರ್ 19ರಂದು ಸಲ್ಲಿಸಿದ ದೂರಿನ ಆಧಾರದ ಮೇಲೆ 10 ದಿನಗಳೊಳಗೆ ವರದಿ ಸಲ್ಲಿಸಲು ಸೂಚಿಸಿದೆ. ಶಾಲಾ ಶಿಕ್ಷಕರ ನಿರಂತರ ಮಾನಸಿಕ ಕಿರುಕುಳ ಮತ್ತು ತಾರತಮ್ಯದ ವರ್ತನೆಯೇ ಆತ್ಮಹತ್ಯೆಗೆ ಕಾರಣ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.







