ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಹಿರಿಯ ಇತಿಹಾಸ ತಜ್ಞ ಪ್ರೊ.ಇರ್ಫಾನ್ ಹಬೀಬ್ ಮೇಲೆ ದಾಳಿ: ಕೆ.ನೀಲಾ ಖಂಡನೆ

ಕಲಬುರಗಿ: ದಿಲ್ಲಿ ವಿಶ್ವವಿದ್ಯಾಲಯದಲ್ಲಿ ನಡೆದ ಜನರ ಸಾಹಿತ್ಯ ಉತ್ಸವ – ಸಮತಾ ಉತ್ಸವದ ವೇಳೆ ಹಿರಿಯ ಇತಿಹಾಸ ತಜ್ಞ ಎಸ್. ಇರ್ಫಾನ್ ಹಬೀಬ್ ಅವರ ಮೇಲೆ ನಡೆದ ದಾಳಿಯನ್ನು ಸಿಪಿಐ(ಎಂ) ಕಲಬುರಗಿ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ಈ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದಲ್ಲಿ ನಡೆದ ಬಲಪಂಥೀಯ ಸಾಹಿತ್ಯ ಉತ್ಸವಕ್ಕೆ ಪ್ರಜಾಪ್ರಭುತ್ವ ಮತ್ತು ಪ್ರಗತಿಪರ ಪರ್ಯಾಯವಾಗಿ ಆಯೋಜಿಸಲಾಗಿತ್ತು. ವಿಶ್ವವಿದ್ಯಾಲಯಗಳಲ್ಲಿ ತಾರತಮ್ಯ ಮತ್ತು ಸಾಂಸ್ಥಿಕ ಕಿರುಕುಳದ ವಿರುದ್ಧ ಕಠಿಣ ಯುಜಿಸಿ ನಿಯಮಗಳನ್ನು ಜಾರಿಗೊಳಿಸುವುದು ಹಾಗೂ "ರೋಹಿತ್ ಕಾಯ್ದೆ" ಜಾರಿಗೆ ತರಬೇಕೆಂಬ ಬೇಡಿಕೆಗಳನ್ನು ಈ ಉತ್ಸವ ಮುಂದಿಟ್ಟಿತ್ತು. ಹಾಗಾಗಿಯೇ ಕಾರ್ಯಕ್ರಮದಲ್ಲಿ ಬಲಪಂಥೀಯ ಗೂಂಡಾ ಶಕ್ತಿಗಳು ಅಡ್ಡಿಪಡಿಸಿ, ಪ್ರೊ. ಇರ್ಫಾನ್ ಹಬೀಬ್ ಅವರ ಮೇಲೆ ದೈಹಿಕ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಘಟನೆ ಕೇವಲ ವ್ಯಕ್ತಿಯ ಮೇಲಿನ ದಾಳಿಯಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯ, ಶೈಕ್ಷಣಿಕ ಸ್ವಾತಂತ್ರ್ಯ ಮತ್ತು ವಿಶ್ವವಿದ್ಯಾಲಯಗಳ ಪ್ರಜಾಪ್ರಭುತ್ವ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇತಿಹಾಸದ ವೈಜ್ಞಾನಿಕ ಮತ್ತು ಪುರಾವೆ ಆಧಾರಿತ ಅಧ್ಯಯನವನ್ನು ಮೌನಗೊಳಿಸುವ ಉದ್ದೇಶದಿಂದ ಈ ದಾಳಿ ನಡೆದಿದ್ದು, ಇತಿಹಾಸದ ವಿರೂಪತೆಯ ವಿರುದ್ಧ ಪ್ರೊ. ಹಬೀಬ್ ನೀಡುತ್ತಿದ್ದ ಉಪನ್ಯಾಸವನ್ನು ತಡೆಯುವ ಪ್ರಯತ್ನವು ವಿಶಾಲವಾದ ಸೈದ್ಧಾಂತಿಕ ಕಾರ್ಯಸೂಚಿಯ ಭಾಗವಾಗಿದೆ ಎಂದು ಹೇಳಿದ್ದಾರೆ.
ದಾಳಿಗೆ ಕಾರಣರಾದವರನ್ನು ತಕ್ಷಣ ಗುರುತಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಕೆ.ನೀಲಾ, ವಿಶ್ವವಿದ್ಯಾಲಯ ಆವರಣದಲ್ಲಿ ಪ್ರಜಾಪ್ರಭುತ್ವ ಕಾರ್ಯಕ್ರಮಗಳ ಸುರಕ್ಷತೆಯನ್ನು ಖಚಿತಪಡಿಸಬೇಕು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳ ಸ್ವಾತಂತ್ರ್ಯವನ್ನು ರಕ್ಷಿಸಬೇಕೆಂದು ಒತ್ತಾಯ ಮಾಡಿದ್ದಾರೆ.







