ದಿಲ್ಲಿ S I R | ಮೃತರೆಂದು ದಾಖಲಾಗಿದ್ದ ಮತದಾರರು ಜೀವಂತ !

Photo Credit : thehindu.com
ಹೊಸದಿಲ್ಲಿ: ದಿಲ್ಲಿಯ ಮುಸ್ತಫಾಬಾದ್ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದ ಸುಮಾರು 28 ಮುಸ್ಲಿಂ ನಿವಾಸಿಗಳನ್ನು ಫಾರ್ಮ್ 7 ಅರ್ಜಿಗಳನ್ನು ಬಳಸಿ ಮೃತಪಟ್ಟಿದ್ದಾರೆ ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ದಾಖಲಿಸಲಾಗಿದೆ ಎಂದು ‘ದಿ ಹಿಂದೂ’ ವರದಿ ಮಾಡಿದೆ.
ಸಾಜಿದ್ ಹುಸೇನ್ ಅವರು ಈಶಾನ್ಯ ಮುಸ್ತಫಾಬಾದ್ ಕ್ಷೇತ್ರದ ದಯಾಲ್ಪುರ ಪ್ರದೇಶದಲ್ಲಿ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ವಾಸಿಸುತ್ತಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬರು ತಮ್ಮ ಪತ್ನಿ ಮತ್ತು ಪುತ್ರನ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವಂತೆ ಕೋರಿ ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಿರುವುದನ್ನು ತಿಳಿದು ಅವರು ಆತಂಕಗೊಂಡಿದ್ದಾರೆ.
ಹುಸೇನ್ ಅವರ ಪತ್ನಿ ಅಫ್ಸಾನಾ ಖಾತೂನ್ ಮತ್ತು ಪುತ್ರ ಅಸದ್ ರಾಝಾ ಜೈದಿ ಅವರು ಫಾರ್ಮ್ 7 ಅರ್ಜಿಗಳನ್ನು ಎದುರಿಸಿದ 28 ಮತದಾರರಲ್ಲಿ ಸೇರಿದ್ದಾರೆ. ಇವರ ಹೆಸರನ್ನು ತೆಗೆದು ಹಾಕಲು ‘‘ಗೈರು ಹಾಜರಿ, ಶಾಶ್ವತ ಸ್ಥಳಾಂತರ ಅಥವಾ ಮೃತ’’ ಎಂದು ಕಾರಣ ನೀಡಲಾಗಿದೆ. ಇವರಲ್ಲಿ ಕನಿಷ್ಠ 19 ಮಂದಿ ಪುರಾವೆಯಾಗಿ ಗುರುತಿನ ದಾಖಲೆಗಳನ್ನು ಹೊಂದಿದ್ದಾರೆ ಮತ್ತು ತಮ್ಮ ವಿಳಾಸಗಳಲ್ಲೇ ವಾಸಿಸುತ್ತಿದ್ದಾರೆ.
‘ದಿ ಹಿಂದೂ’ ಪತ್ರಿಕೆಯ ವರದಿಯ ಪ್ರಕಾರ, ಬಿಜೆಪಿ ನೇಮಿಸಿದ ಬೂತ್ ಮಟ್ಟದ ಏಜೆಂಟ್ (ಬಿಎಲ್ಎ)-2 ಚಂದ್ರಶೇಖರ್ ನೈನ್ವಾಲ್ ಈ ಎಲ್ಲಾ 28 ಫಾರ್ಮ್ಗಳನ್ನು ಸಲ್ಲಿಸಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗದ ದಾಖಲೆಗಳು ತೋರಿಸುತ್ತವೆ.
ಈ ಮತದಾರರೆಲ್ಲರೂ ಗಣತಿ ನಮೂನೆಗಳನ್ನು ಸಲ್ಲಿಸಿದ್ದರು, ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರು. ಅವರು ನೈನ್ವಾಲ್ ಅವರ ಹೆಸರನ್ನು ಎಂದೂ ಕೇಳಿಲ್ಲ ಎಂದು ಹೇಳಿದ್ದಾರೆ.
ಸೆಪ್ಟಂಬರ್ನಿಂದ ಮುಸ್ತಫಾಬಾದ್ನಲ್ಲಿ 846 ಫಾರ್ಮ್ 7 ಸಲ್ಲಿಕೆಯಾಗಿದೆ. ಮತಗಟ್ಟೆ 129ರಲ್ಲಿ ಸಲ್ಲಿಕೆಯಾದ ಏಕೈಕ ಫಾರ್ಮ್ 7 ಅರ್ಜಿಯೆಂದರೆ, ಅದು ಬಿಜೆಪಿ ಏಜೆಂಟ್ ಸಲ್ಲಿಸಿರುವುದು ಮಾತ್ರ. ದಿಲ್ಲಿ ಮುಖ್ಯ ಚುನಾವಣಾಧಿಕಾರಿಗಳ ದೈನಂದಿನ ಆಕ್ಷೇಪಣೆಗಳ ಪಟ್ಟಿಯಲ್ಲಿ ಅಕ್ಟೋಬರ್ 19ರಂದು 1, ಅಕ್ಟೋಬರ್ 21ರಂದು 9 ಮತ್ತು ಅಕ್ಟೋಬರ್ 25ರಂದು 18 ಅರ್ಜಿಗಳು ಸಲ್ಲಿಸಿರುವುದು ದಾಖಲಾಗಿದೆ.
ಆಗಸ್ಟ್ 31ರಿಂದ ಮುಸ್ತಫಾಬಾದ್ ಕ್ಷೇತ್ರವು 843 ಆಕ್ಷೇಪಣೆಗಳನ್ನು ಸ್ವೀಕರಿಸಿದೆ. 597 ಅರ್ಜಿಗಳನ್ನು ಮೂರನೆ ವ್ಯಕ್ತಿಗಳು ಸಲ್ಲಿಸಿದ್ದಾರೆ. ಶೇ. 96ರಷ್ಟು ಅರ್ಜಿಗಳಲ್ಲಿ ಬಿಜೆಪಿ ಬಿಎಲ್ಎಗಳನ್ನು ಆಕ್ಷೇಪಕರು ಎಂದು ಹೆಸರಿಸಲಾಗಿದೆ. ಇವುಗಳಲ್ಲಿ 572 ಅರ್ಜಿಗಳು ಕ್ಷೇತ್ರದ 24 ಕಡೆಗಳಲ್ಲಿದ್ದ ಮುಸ್ಲಿಂ ಮತದಾರರ ವಿರುದ್ಧವಾಗಿದ್ದುವು.
ಹುಸೇನ್ ಅವರ ಮನೆಯ ಹೊರತಾಗಿ, ಅಬ್ದುಲ್ ಜಬ್ಬಾರ್ ಅವರ ಪುತ್ರಿ ಆಯಿಷಾ ಮತ್ತು 22 ವರ್ಷದ ಪುತ್ರ ಮುಹಮ್ಮದ್ ಹುಝೇಫಾ ಅವರ ಹೆಸರುಗಳನ್ನು ಕೂಡ ತೆಗೆದು ಹಾಕಲು ಕೋರಲಾಗಿತ್ತು. ಸಣ್ಣ ಕಿರಾಣಿ ಅಂಗಡಿ ನಡೆಸುತ್ತಿರುವ ತಮ್ಮ ಸುದೀರ್ಘ ಕಾಲದ ನೆರೆಯವರಾದ ಉಮ್ಮೆದ್ ಅಲಿ ಅವರ ಹೆಸರು ಕೂಡ ಮತದಾರರ ಪಟ್ಟಿಯಿಂದ ಕೈಬಿಟ್ಟ ಹೆಸರುಗಳಲ್ಲಿ ಕಾಣಿಸಿಕೊಂಡಿದೆ ಎಂದು ಹುಝೇಫಾ ತಿಳಿಸಿದ್ದಾರೆ.
ಕ್ಷೇತ್ರದಾದ್ಯಂತ ಈ ಮಾದರಿಯು ಪುನರಾವರ್ತನೆಯಾಗಿದೆ ಎಂದು ವರದಿ ಹೇಳಿದೆ. ಮತದಾರರು ಜೀವಂತವಾಗಿದ್ದು ಮತ್ತು ತಮ್ಮ ನೀಡಿರುವ ವಿಳಾಸಗಳಲ್ಲೇ ವಾಸಿಸುತ್ತಿದ್ದರೂ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಪ್ರಯತ್ನಿಸಲಾಗಿದೆ.






