Tamil Nadu| ಕ್ಷೇತ್ರ ಪುನರ್ವಿಂಗಡಣೆ ವಿರೋಧಿಸಿ ಎ.16ರಂದು ರಾಜ್ಯಾದ್ಯಂತ ಕಪ್ಪು ಬಾವುಟ ಪ್ರದರ್ಶಿಸಲು ಸ್ಟಾಲಿನ್ ಕರೆ

Photo : x@mkstalin
ಚೆನ್ನೈ,ಎ.15: ಕೇಂದ್ರ ಸರಕಾರದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ವಿರುದ್ಧದ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಅದು ದಕ್ಷಿಣದ ರಾಜ್ಯಗಳ ವಿರುದ್ಧದ ‘‘ಐತಿಹಾಸಿಕ ಅನ್ಯಾಯ’’ವಾಗಿದೆ ಎಂಬುದಾಗಿ ಬಣ್ಣಿಸಿದ್ದಾರೆ. ಇದನ್ನು ವಿರೋಧಿಸಿ ಗುರುವಾರ ರಾಜ್ಯಾದ್ಯಂತ ಕಪ್ಪು ಬಾವುಟ ಪ್ರತಿಭಟನೆಗಳನ್ನು ನಡೆಸಲು ಅವರು ಕರೆ ನೀಡಿದ್ದಾರೆ.
ಭಾರತದ ಪ್ರಗತಿಗೆ ಕೊಡುಗೆ ನೀಡಿರುವುದಕ್ಕಾಗಿ ದಕ್ಷಿಣದ ರಾಜ್ಯಗಳನ್ನು ಶಿಕ್ಷಿಸಲಾಗುತ್ತಿದೆಯೇ ಎಂದು ಅವರು ಪ್ರಶ್ನಿಸಿದರು ಹಾಗೂ ಕೇಂದ್ರ ಸರಕಾರದ ಈ ಕ್ರಮವು ಈ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ ಎಂಬುದಾಗಿ ಅವರು ಎಚ್ಚರಿಸಿದರು.
ಪ್ರಸ್ತಾವಿತ ತಿದ್ದುಪಡಿಯು ‘‘ಘೋರ ಅಪಾಯ’’ವಾಗಿದೆ ಎಂಬುದಾಗಿ ಬಣ್ಣಿಸಿದ ಅವರು, ಈ ಬೆದರಿಕೆಯನ್ನು ಎದುರಿಸಲು ಜಂಟಿ ತಂತ್ರೋಪಾಯವೊಂದನ್ನು ರೂಪಿಸುವುದಕ್ಕಾಗಿ ದಕ್ಷಿಣದ ರಾಜ್ಯಗಳ ಸಂಸದರನ್ನು ಸಂಪರ್ಕಿಸಲಾಗುತ್ತಿದೆ ಎಂದು ಸ್ಟಾಲಿನ್ ಹೇಳಿದರು. ಅವರು ಬುಧವಾರ ಡಿಎಂಕೆ ಸಂಸದರ ತುರ್ತು ಸಭೆಯೊಂದನ್ನೂ ಏರ್ಪಡಿಸಿದರು.
‘‘ನಮ್ಮ ತಲೆಗಳ ಮೇಲೆ ತೂಗುತ್ತಿದ್ದ ಕತ್ತಿಯು ಈಗ ತಲೆಯ ಮೇಲೆ ಬೀಳುತ್ತಿದೆ. ಇದು ಪಕ್ಷಗಳು ಮತ್ತು ವ್ಯಕ್ತಿಗಳಿಗೆ ಸಂಬಂಧಿಸಿದ ವಿಷಯವಲ್ಲ. ಇದು ನಮ್ಮ ಜನರ ಹಕ್ಕುಗಳನ್ನು ರಕ್ಷಿಸುವ ಪ್ರಶ್ನೆ. ನಮ್ಮ ಪ್ರಜಾಸತ್ತೆಯನ್ನು ರಕ್ಷಿಸಲು ಒಂದಾಗುವಂತೆ ಭಾರತದಾದ್ಯಂತ ಇರುವ ಎಲ್ಲಾ ಪಕ್ಷಗಳು ಮತ್ತು ಸಂಸದರಿಗೆ ನಾನು ಮನವಿ ಮಾಡುತ್ತೇನೆ’’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಹೇಳಿದ್ದಾರೆ.






