ಕ್ಷೇತ್ರ ಮರುವಿಂಗಡಣೆ, ಮಹಿಳಾ ಮೀಸಲಾತಿ ಮಸೂದೆ: NDAಗೆ ಬಹುಮತದ ಸವಾಲು
ಮೂರನೇ ಎರಡರಷ್ಟು ಬಹುಮತಕ್ಕೆ 40 ಮತಗಳ ಕೊರತೆ; ಪ್ರಾದೇಶಿಕ ಪಕ್ಷಗಳ ಬೆಂಬಲ ನಿರ್ಣಾಯಕ

Photo: PTI
ಹೊಸದಿಲ್ಲಿ: ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಮಹಿಳಾ ಮೀಸಲಾತಿ ಮಸೂದೆಯನ್ನು ಮತ್ತೆ ಮಂಡಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ, ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಲೋಕಸಭೆಯಲ್ಲಿ ಸಂಖ್ಯಾಬಲದ ಸವಾಲು ಎದುರಿಸುತ್ತಿದೆ. ಆಡಳಿತಾರೂಢ ಮೈತ್ರಿಕೂಟವು ಲೋಕಸಭೆಯಲ್ಲಿ ಅಂದಾಜು 320 ಸಂಸದರನ್ನು ಹೊಂದಿದ್ದರೂ, ಮಸೂದೆ ಅಂಗೀಕಾರಕ್ಕೆ ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತ ಪಡೆಯಲು ಡಿಎಂಕೆ, ಎನ್ಸಿಪಿ (ಶರದ್ಚಂದ್ರ ಪವಾರ್) ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷಗಳ ಬೆಂಬಲ ಅನಿವಾರ್ಯವಾಗಲಿದೆ.
ಲೋಕಸಭೆಯ ಅನುಮೋದಿತ ಸದಸ್ಯಬಲ 543 ಆಗಿದ್ದು, ಪ್ರಸ್ತುತ 540 ಸದಸ್ಯರಿದ್ದಾರೆ. ಎಲ್ಲ 540 ಸದಸ್ಯರು ಮತ ಚಲಾಯಿಸಿದರೆ, ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ 360 ಮತಗಳ ಅಗತ್ಯವಿದೆ.
ಎನ್ಡಿಎ ಪ್ರಸ್ತುತ 320 ಸಂಸದರನ್ನು ಹೊಂದಿದ್ದು, ಅಗತ್ಯವಿರುವ ಬಹುಮತಕ್ಕೆ ಇನ್ನೂ 40 ಮತಗಳ ಕೊರತೆಯಿದೆ. ಆದರೆ, ಮತದಾನದ ವೇಳೆ ಎಷ್ಟು ಸಂಸದರು ಹಾಜರಿರುತ್ತಾರೆ ಮತ್ತು ಮತ ಚಲಾಯಿಸುತ್ತಾರೆ ಎಂಬುದರ ಆಧಾರದ ಮೇಲೆ ಅಗತ್ಯವಿರುವ ಮತಗಳ ಸಂಖ್ಯೆಯೂ ಬದಲಾಗಲಿದೆ.
ಸರಕಾರ ಎದುರಿಸುತ್ತಿರುವ ಸಂಖ್ಯಾಬಲದ ಸವಾಲನ್ನು ಮೂರು ಸಂಭಾವ್ಯ ಸನ್ನಿವೇಶಗಳು ಸ್ಪಷ್ಟಪಡಿಸುತ್ತವೆ.
ಆಡಳಿತಾರೂಢ ಮೈತ್ರಿಕೂಟದಲ್ಲಿ 241 ಸಂಸದರನ್ನು ಹೊಂದಿರುವ ಬಿಜೆಪಿ ಅತಿದೊಡ್ಡ ಪಕ್ಷವಾಗಿದೆ. ಉಳಿದ 79 ಸಂಸದರು ಅದರ ಮಿತ್ರಪಕ್ಷಗಳಿಗೆ ಸೇರಿದವರಾಗಿದ್ದಾರೆ.
ಎನ್ಡಿಎಯಲ್ಲಿ 241 ಸಂಸದರನ್ನು ಹೊಂದಿರುವ ಬಿಜೆಪಿ ಅತಿದೊಡ್ಡ ಪಕ್ಷವಾಗಿದೆ. ಮಿತ್ರಪಕ್ಷಗಳ ಪೈಕಿ ನ್ಯಾಷನಲ್ ಸಿಟಿಝನ್ಸ್ ಪಾರ್ಟಿ ಆಫ್ ಇಂಡಿಯಾ (NCPI) 20, ತೆಲುಗು ದೇಶಂ ಪಕ್ಷ (TDP) 16, ಶಿವಸೇನೆ 13, ಜನತಾ ದಳ (ಯುನೈಟೆಡ್) 12 ಮತ್ತು ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಐದು ಸಂಸದರನ್ನು ಹೊಂದಿವೆ. ರಾಷ್ಟ್ರೀಯ ಲೋಕದಳ (RLD), ಜನತಾ ಸಮಾಜವಾದಿ ಪಕ್ಷ (JSP) ಮತ್ತು ಜನತಾ ದಳ (ಸೆಕ್ಯುಲರ್) ತಲಾ ಇಬ್ಬರು ಸಂಸದರನ್ನು ಹೊಂದಿವೆ. NCP, ಶಿರೋಮಣಿ ಅಕಾಲಿದಳ, AGP, AJSU, ಅಪ್ನಾ ದಳ (S), HAM ಮತ್ತು SKM ಪಕ್ಷಗಳು ತಲಾ ಒಬ್ಬ ಸಂಸದರನ್ನು ಹೊಂದಿವೆ. ಎನ್ಡಿಎಯ ಒಟ್ಟು ಸಂಖ್ಯಾಬಲ 320.
ಡಿಎಂಕೆ, ಎನ್ಸಿಪಿ (ಶರದ್ ಪವಾರ್ ಬಣ) ಮತ್ತು ವೈಎಸ್ಆರ್ಸಿಪಿ ಬೆಂಬಲಿಸಿದರೆ ಏನಾಗಲಿದೆ?
ಈ ಮೂರೂ ಪಕ್ಷಗಳು ಮಸೂದೆಯನ್ನು ಬೆಂಬಲಿಸಿದರೆ, ಅವುಗಳ ಒಟ್ಟು 34 ಸಂಸದರ ಬೆಂಬಲದೊಂದಿಗೆ ಎನ್ಡಿಎಯ ಸಂಖ್ಯಾಬಲ 354ಕ್ಕೆ ಏರಲಿದೆ. ಇದರಲ್ಲಿ ಎನ್ಡಿಎಯ 320, ಡಿಎಂಕೆಯ 22, ಎನ್ಸಿಪಿ (ಶರದ್ಚಂದ್ರ ಪವಾರ್)ನ ಎಂಟು ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಲ್ಕು ಸಂಸದರು ಸೇರಿದ್ದಾರೆ. ಎಲ್ಲ 540 ಸದಸ್ಯರು ಮತ ಚಲಾಯಿಸಿದರೆ, ಮಸೂದೆ ಅಂಗೀಕಾರಕ್ಕೆ ಅಗತ್ಯವಿರುವ 360 ಮತಗಳಿಗಿಂತ ಆರು ಮತಗಳು ಕಡಿಮೆಯಾಗಲಿವೆ.
ಡಿಎಂಕೆ ಮತದಾನದಿಂದ ದೂರ ಉಳಿದು, ಎನ್ಸಿಪಿ (ಎಸ್ಪಿ) ಮತ್ತು ವೈಎಸ್ಆರ್ಸಿಪಿ ಬೆಂಬಲಿಸಿದರೆ ಏನಾಗಬಹುದು?
ಡಿಎಂಕೆಯ 22 ಸಂಸದರು ಮತದಾನದಿಂದ ದೂರ ಉಳಿದು, ಎನ್ಸಿಪಿ (ಎಸ್ಪಿ) ಮತ್ತು ವೈಎಸ್ಆರ್ಸಿಪಿ ಮಸೂದೆಯನ್ನು ಬೆಂಬಲಿಸಿದರೆ, ಈ ಎರಡು ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಸರಕಾರಕ್ಕೆ 332 ಮತಗಳು ದೊರೆಯಬಹುದು. ಡಿಎಂಕೆಯ 22 ಸಂಸದರು ಮತ ಚಲಾಯಿಸದಿದ್ದರೆ, ಮತದಾನದಲ್ಲಿ ಭಾಗವಹಿಸುವ ಸದಸ್ಯರ ಸಂಖ್ಯೆ 518ಕ್ಕೆ ಇಳಿಯಬಹುದು. ಆಗ ಮೂರನೇ ಎರಡರಷ್ಟು ಬಹುಮತಕ್ಕೆ 346 ಮತಗಳ ಅಗತ್ಯವಿರುತ್ತದೆ. ಈ ಸನ್ನಿವೇಶದಲ್ಲಿಯೂ ಸರಕಾರಕ್ಕೆ ಇನ್ನೂ 14 ಮತಗಳ ಕೊರತೆ ಎದುರಾಗಲಿದೆ.
ಡಿಎಂಕೆ ಮತ್ತು ಎನ್ಸಿಪಿ (ಎಸ್ಪಿ) ಮತದಾನದಿಂದ ದೂರ ಉಳಿದರೆ ಏನಾಗಬಹುದು?
ಡಿಎಂಕೆ ಮತ್ತು ಎನ್ಸಿಪಿ (ಎಸ್ಪಿ) ಎರಡೂ ಪಕ್ಷಗಳು ಮತದಾನದಿಂದ ದೂರ ಉಳಿದು, ವೈಎಸ್ಆರ್ಸಿಪಿ ಮಸೂದೆಯನ್ನು ಬೆಂಬಲಿಸಿದರೆ, ಎನ್ಡಿಎಯ ಒಟ್ಟು ಬಲ 324ಕ್ಕೆ ಏರಲಿದೆ. ಈ ಎರಡೂ ಪಕ್ಷಗಳ ಒಟ್ಟು 30 ಸಂಸದರು ಮತದಾನದಿಂದ ದೂರ ಉಳಿದರೆ, ಮತ ಚಲಾಯಿಸುವ ಸದಸ್ಯರ ಸಂಖ್ಯೆ 510ಕ್ಕೆ ಇಳಿಯಬಹುದು. ಆಗ ಮೂರನೇ ಎರಡರಷ್ಟು ಬಹುಮತಕ್ಕೆ 340 ಮತಗಳ ಅಗತ್ಯವಿರುತ್ತದೆ. ಈ ಸನ್ನಿವೇಶದಲ್ಲಿಯೂ ಎನ್ಡಿಎಗೆ 16 ಮತಗಳ ಕೊರತೆ ಎದುರಾಗಲಿದೆ.
ಪ್ರಾದೇಶಿಕ ಪಕ್ಷಗಳು ಏಕೆ ನಿರ್ಣಾಯಕ?
ಸಂವಿಧಾನ ತಿದ್ದುಪಡಿಗೆ ಅಗತ್ಯವಿರುವ ಸಂಖ್ಯಾಬಲ ಕ್ರೋಢೀಕರಿಸುವ ಸರಕಾರದ ಪ್ರಯತ್ನದಲ್ಲಿ ಪ್ರಾದೇಶಿಕ ಪಕ್ಷಗಳ ಮಹತ್ವವನ್ನು ಈ ಮೂರು ಸನ್ನಿವೇಶಗಳು ಎತ್ತಿ ತೋರಿಸುತ್ತವೆ.
ಲೋಕಸಭೆಯಲ್ಲಿ ಡಿಎಂಕೆ 22 ಸಂಸದರನ್ನು ಹೊಂದಿದ್ದರೆ, ಎನ್ಸಿಪಿ (ಶರದ್ಚಂದ್ರ ಪವಾರ್) ಎಂಟು ಮತ್ತು ವೈಎಸ್ಆರ್ಸಿಪಿ ನಾಲ್ಕು ಸಂಸದರನ್ನು ಹೊಂದಿದೆ. ಈ ಪಕ್ಷಗಳ ಬೆಂಬಲ ಅಥವಾ ಗೈರುಹಾಜರಿಯು ಮಸೂದೆ ಅಂಗೀಕಾರಕ್ಕೆ ಅಗತ್ಯವಿರುವ ಮತಗಳ ಸಂಖ್ಯೆಯ ಮೇಲೆ ಹಾಗೂ ಸರಕಾರದ ಶಾಸನಾತ್ಮಕ ಪ್ರಯತ್ನದ ಯಶಸ್ಸಿನ ಸಾಧ್ಯತೆಯ ಮೇಲೆ ಪ್ರಭಾವ ಬೀರಬಲ್ಲದು.
ಪ್ರಸ್ತಾವಿತ ತಿದ್ದುಪಡಿಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವುದನ್ನು ಕ್ಷೇತ್ರ ಮರುವಿಂಗಡಣೆ ಮತ್ತು ಲೋಕಸಭೆಯ ಸದಸ್ಯಬಲ ಹೆಚ್ಚಳದೊಂದಿಗೆ ಜೋಡಿಸುವ ಉದ್ದೇಶ ಹೊಂದಿದೆ.
ನ. 30ರಂದು ಲೋಕಸಭೆ ಮತ್ತು ಡಿಸೆಂಬರ್ 2ರಂದು ರಾಜ್ಯಸಭೆಯ ಕಲಾಪಗಳು ಮತ್ತೆ ಆರಂಭವಾಗಲಿವೆ. ಸಂಸತ್ತಿನ ವಿಶೇಷ ಕಲಾಪದಲ್ಲಿ ಸರಕಾರ ಈ ವಿಷಯವನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.
ಸಂವಿಧಾನ ತಿದ್ದುಪಡಿಯನ್ನು ಅಂಗೀಕರಿಸಲು ಅಗತ್ಯವಿರುವ ಹೆಚ್ಚುವರಿ ಮತಗಳನ್ನು ಪಡೆಯುವ ಮೂಲಕ ಅಥವಾ ಪ್ರತಿಪಕ್ಷಗಳು ಮತದಾನದಿಂದ ದೂರ ಉಳಿದು ಅಗತ್ಯವಿರುವ ಮತಗಳ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಎನ್ಡಿಎ ಸಾಕಷ್ಟು ಬೆಂಬಲ ಕ್ರೋಢೀಕರಿಸಲು ಸಾಧ್ಯವಾಗುತ್ತದೆಯೇ ಎಂಬುದು ಈಗಿನ ಪ್ರಮುಖ ಪ್ರಶ್ನೆಯಾಗಿದೆ.
ಎಪ್ರಿಲ್ ನಲ್ಲಿ ನಡೆದ ಮತದಾನದ ವೇಳೆ ಏನಾಯಿತು?
ಎ. 17ರಂದು ಲೋಕಸಭೆಯಲ್ಲಿ ಸಂವಿಧಾನ (131ನೇ ತಿದ್ದುಪಡಿ) ಮಸೂದೆ ಸೋಲನುಭವಿಸಿದ ಬಳಿಕ ಸಂಖ್ಯಾಬಲದ ಕುರಿತ ಪ್ರಶ್ನೆಗಳು ಮತ್ತೆ ಮುನ್ನೆಲೆಗೆ ಬಂದಿವೆ.
ಒಟ್ಟು 528 ಸಂಸದರು ಮತ ಚಲಾಯಿಸಿದ್ದು, ಅವರಲ್ಲಿ 298 ಮಂದಿ ಮಸೂದೆಯ ಪರವಾಗಿ ಮತ್ತು 230 ಮಂದಿ ವಿರುದ್ಧವಾಗಿ ಮತ ಹಾಕಿದ್ದರು. ಮೂರನೇ ಎರಡರಷ್ಟು ಬಹುಮತ ಪಡೆಯಲು ಸರಕಾರಕ್ಕೆ 352 ಮತಗಳ ಅಗತ್ಯವಿತ್ತು. ಆದರೆ, ಅಗತ್ಯ ಸಂಖ್ಯೆಯನ್ನು ತಲುಪಲು 54 ಮತಗಳ ಕೊರತೆಯಾಗಿತ್ತು.
ಎಪ್ರಿಲ್ ನಲ್ಲಿ ಮಂಡಿಸಲಾದ ಸಂಸದೀಯ ಪ್ರಸ್ತಾವನೆಯು ಹೊಸದಾಗಿ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ನಡೆಸುವ ಮೂಲಕ ಲೋಕಸಭೆಯ ಸದಸ್ಯಬಲ ಹೆಚ್ಚಿಸುವುದರ ಜತೆಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿಗೊಳಿಸುವ ಉದ್ದೇಶ ಹೊಂದಿತ್ತು.
ಸಂಸತ್ತು 2023ರಲ್ಲಿ ಮಹಿಳಾ ಮೀಸಲಾತಿ ಕಾಯ್ದೆಯನ್ನು ಅಂಗೀಕರಿಸಿತ್ತು. ಈ ಕಾಯ್ದೆಯ ಪ್ರಕಾರ, ಅದು ಜಾರಿಗೆ ಬಂದ ಬಳಿಕ ನಡೆಯುವ ಮೊದಲ ಜನಗಣತಿಯ ಅಂಕಿಅಂಶಗಳು ಪ್ರಕಟಗೊಂಡ ನಂತರ ಕ್ಷೇತ್ರ ಮರುವಿಂಗಡಣೆಯೊಂದಿಗೆ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಬೇಕಿದೆ.
ನ. 30ರಿಂದ ಸಂಸತ್ತಿನ ಕಲಾಪ ಪುನರಾರಂಭ
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಗುರುವಾರ ಪ್ರಕಟಣೆ ನೀಡಿ, ಸರಕಾರದ ಪ್ರಮುಖ ಕಾರ್ಯಕಲಾಪಗಳನ್ನು ಕೈಗೆತ್ತಿಕೊಳ್ಳಲು ನ. 30ರಂದು ಲೋಕಸಭೆ ಮತ್ತು ಡಿ. 2ರಂದು ರಾಜ್ಯಸಭೆಯ ಕಲಾಪಗಳನ್ನು ಪುನರಾರಂಭಿಸುವಂತೆ ಸರಕಾರ ಕೋರಿದೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ಮಸೂದೆ ಅಂಗೀಕಾರಕ್ಕೆ ಅಗತ್ಯವಿರುವ ಸಂಖ್ಯಾಬಲದ ಲೆಕ್ಕಾಚಾರ ಮತ್ತೆ ಚರ್ಚೆಗೆ ಬಂದಿದೆ.
ಸದನಗಳ ಮುಂದಿರುವ ಕಾರ್ಯಕಲಾಪಗಳನ್ನು ಅವಲಂಬಿಸಿ ಡಿ. 3ರಂದು ಕಲಾಪಗಳು ಮುಕ್ತಾಯಗೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಈ ಕಲಾಪಗಳು ಮುಂಗಾರು ಅಧಿವೇಶನದ ಮುಂದುವರಿದ ಭಾಗವಾಗಿರಲಿವೆ. ಆ. 13ರಂದು ಸಂಸತ್ತಿನ ಕಲಾಪಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತೇ ಹೊರತು, ಅಧಿವೇಶನವನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಿರಲಿಲ್ಲ.
ಪ್ರಸ್ತಾವಿತ ಕಲಾಪಗಳ ಕಾರ್ಯಸೂಚಿಯನ್ನು ಇನ್ನೂ ಪ್ರಕಟಿಸಲಾಗಿಲ್ಲ. ಆದರೆ, ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಸರಕಾರ ಮತ್ತೊಂದು ಪ್ರಯತ್ನ ನಡೆಸಬಹುದು ಎಂಬ ಊಹಾಪೋಹಗಳು ತೀವ್ರಗೊಂಡಿವೆ.
ಸೌಜನ್ಯ: India Today






