ನುಹ್ ನಲ್ಲಿ ಧ್ವಂಸ ಕಾರ್ಯಾಚರಣೆ ಮುಂದುವರಿಕೆ: ಸಹಾರ ಹೊಟೇಲ್ ಕೆಡವಲು ಮುಂದಾದ ಜಿಲ್ಲಾಡಳಿತ

Photo: Twitter@NDTV
ನುಹ್: ಇತ್ತೀಚೆಗೆ ಕೋಮು ಘರ್ಷಣೆಗೆ ಕಾರಣವಾಗಿದ್ದ ಹರ್ಯಾಣದ ನುಹ್ ನಲ್ಲಿ "ಅಕ್ರಮ" ಕಟ್ಟಡಗಳ ವಿರುದ್ಧ ಬೃಹತ್ ಧ್ವಂಸ ಕಾರ್ಯಾಚರಣೆ ಮುಂದುವರಿಸಿರುವ ನುಹ್ ಜಿಲ್ಲಾಡಳಿತವು ರವಿವಾರ ಸಹಾರಾ ಹೋಟೆಲ್ ಅನ್ನು ನೆಲಸಮಗೊಳಿಸಲು ಬುಲ್ಡೋಝರ್ ಗಳನ್ನು ಸಜ್ಜಗೊಳಿಸಿದೆ.
ಸಹಾರಾ ಹೋಟೆಲ್ ನ ಮೇಲ್ಛಾವಣಿಯಿಂದ ಧಾರ್ಮಿಕ ಮೆರವಣಿಗೆಯ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ ನಂತರ ಸೋಮವಾರ ನುಹ್ ನಲ್ಲಿ ಹಿಂಸಾಚಾರ ಆರಂಭವಾಯಿತು ಎಂದು ಅಧಿಕಾರಿಗಳು ನಂಬಿದ್ದಾರೆ. ಗುಂಪೊಂದು ಮೆರವಣಿಗೆಯ ಮೇಲೆ ಕಲ್ಲುಗಳಿಂದ ದಾಳಿ ಮಾಡುತ್ತಿದ್ದಂತೆ, ಮೆರವಣಿಗೆಯಲ್ಲಿದ್ದ 2,500-ಕ್ಕೂ ಹೆಚ್ಚು ಜನರು ಆಶ್ರಯ ಪಡೆಯಲು ದೇವಸ್ಥಾನದತ್ತ ಧಾವಿಸಿದರು.
ಮೆಡಿಕಲ್ ಸ್ಟೋರ್ ಗಳು ಸೇರಿದಂತೆ ಸುಮಾರು 12 ಅಂಗಡಿಗಳನ್ನು ಶನಿವಾರ ಧ್ವಂಸಗೊಳಿಸಲಾಗಿದೆ. ಹಿಂಸಾಚಾರ ಪೀಡಿತ ನುಹ್ ಜಿಲ್ಲೆಯಿಂದ ಸುಮಾರು 20 ಕಿಮೀ ದೂರದಲ್ಲಿರುವ ತೌರುನಲ್ಲಿ ವಾಸಿಸುವ ವಲಸಿಗರ ಗುಡಿಸಲುಗಳನ್ನು ಈ ವಾರದ ಆರಂಭದಲ್ಲಿ ಸರಕಾರಿ ಭೂಮಿಯನ್ನು ಅತಿಕ್ರಮಣ ಮಾಡಿದ್ದಕ್ಕಾಗಿ ನೆಲಸಮಗೊಳಿಸಲಾಗಿತ್ತು.
ಕೆಡವಲಾಗುತ್ತಿರುವ ಕೆಲವು ಅಂಗಡಿಗಳು ಹಾಗೂ ಮನೆಗಳು ಇತ್ತೀಚಿನ ಘರ್ಷಣೆಯಲ್ಲಿ ಭಾಗಿಯಾದವರ ಒಡೆತನದಲ್ಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ವಿವಿಧ ಪ್ರದೇಶಗಳಲ್ಲಿ 50 ರಿಂದ 60 ಕಟ್ಟಡಗಳನ್ನು ಇದುವರೆಗೆ ಕೆಡವಲಾಗಿದೆ. ಬಂಧನಕ್ಕೆ ಹೆದರಿ ಹಲವರು ಕಾಲ್ಕಿತ್ತಿದ್ದಾರೆ ಎಂದು ವರದಿಯಾಗಿದೆ.







