ಧರ್ಮಸ್ಥಳ ಪ್ರಕರಣ | ಸುಪ್ರೀಂ ಕೋರ್ಟ್ ತೀರ್ಪಿನ ತಪ್ಪು ನಿರೂಪಣೆ : ಕನ್ನಡ ಸುದ್ದಿ ವಾಹಿನಿಗಳ ವಿರುದ್ಧ ಕ್ರಮಕ್ಕೆ ಸಿಜೆಐಗೆ ವಕೀಲರಿಂದ ಪತ್ರ

Photo Credit: The Hindu
ಹೊಸದಿಲ್ಲಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ಇತ್ತೀಚಿನ ತೀರ್ಪನ್ನು ತಪ್ಪಾಗಿ ಉದ್ದೇಶಪೂರ್ವಕವಾಗಿ ಪ್ರಸಾರ ಮಾಡಿರುವ ಕೆಲವು ಕನ್ನಡ ಸುದ್ದಿ ವಾಹಿನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವಕೀಲ ದೀಪಕ್ ಖೋಸ್ಲಾ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
ಮೇ 5, 2025 ರಂದು ಸುಪ್ರೀಂ ಕೋರ್ಟ್ W.P. (Crl.) ಸಂಖ್ಯೆ 184/2025 ಅರ್ಜಿಯನ್ನು ವಜಾಗೊಳಿಸಿತ್ತು. ವಿಳಂಬವಾಗಿ ಅರ್ಜಿ ಸಲ್ಲಿಕೆ, ದೂರು-ಎಫ್ಐಆರ್ ಕೊರತೆಯ ಆಧಾರದ ಮೇಲೆ ಮಾತ್ರ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಅದರ ಹೊರತಾಗಿ ಪ್ರಕರಣವು ವಿಚಾರಣೆಗೆ ಸೂಕ್ತವಲ್ಲ ಎಂಬ ಯಾವುದೇ ತೀರ್ಪನ್ನು ನ್ಯಾಯಾಲಯ ನೀಡಿಲ್ಲ ಎಂದು ಸಿಜೆಐಗೆ ಬರೆದ ಪತ್ರದಲ್ಲಿ ಖೋಸ್ಲಾ ಅವರು ಸ್ಪಷ್ಟಪಡಿಸಿದ್ದಾರೆ.
ಕೆಲವು ಕನ್ನಡ ವಾಹಿನಿಗಳು ಈ ತೀರ್ಪನ್ನು “ಪ್ರಕರಣವು ಸಂಪೂರ್ಣ ಮುಕ್ತಾಯಗೊಂಡಿದೆ”, “ಆರೋಪಗಳು ತಳ್ಳಿ ಹಾಕಲ್ಪಟ್ಟಿವೆ” ಎಂಬ ರೀತಿಯಲ್ಲಿ ಪ್ರಸಾರ ಮಾಡಿರುವುದು ವೀಕ್ಷಕರಿಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ. ಇದರಿಂದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್, ಈಗ ನಡೆಯುತ್ತಿರುವ ಎಸ್ಐಟಿ ತನಿಖೆ ಹಾಗೂ ಕರ್ನಾಟಕ ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿರುವ ರಿಟ್ ಅರ್ಜಿಗಳ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ವರದಿಗಳನ್ನು ದೀಪಕ್ ಖೋಸ್ಲಾ ಅವರು ಉದ್ದೇಶಪೂರ್ವಕ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಖಂಡಿಸಿದ್ದಾರೆ. ಇವು ನ್ಯಾಯಾಂಗದ ಮೇಲಿನ ವಿಶ್ವಾಸಕ್ಕೆ ಧಕ್ಕೆಯುಂಟುಮಾಡುತ್ತವೆ. ಇದರಿಂದಾಗಿ ಬಾಕಿ ಇರುವ ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪವಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ರೀತಿಯ ಸುದ್ದಿ ಹರಡಿರುವ ಸುದ್ದಿ ವಾಹಿನಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವುದನ್ನು ಪರಿಗಣಿಸಬೇಕು. ಜೊತೆಗೆ ಭವಿಷ್ಯದಲ್ಲಿ ಇಂತಹ ತಪ್ಪು ನಿರೂಪಣೆಗಳನ್ನು ತಡೆಯುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪುಗಳ ನಿಖರ ಪ್ರಸಾರದ ಕುರಿತಂತೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು ಎಂದು ಅವರು ಸಿಜೆಐಗೆ ಮನವಿ ಮಾಡಿದ್ದಾರೆ.







