ಧರ್ಮಸ್ಥಳ ದೂರು | ಮಾಧ್ಯಮ ಮೇಲಿನ ನಿರ್ಬಂಧ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಯೂಟ್ಯೂಬ್ ಚಾನೆಲ್
ಮಾನಹಾನಿ ಸುದ್ದಿ ಪ್ರಕಟಿಸದಂತೆ ನಿರ್ಬಂಧ ಹೇರಿದ್ದ ಬೆಂಗಳೂರು ಹೆಚ್ಚುವರಿ ಸಿವಿಲ್, ಸೆಷನ್ಸ್ ಕೋರ್ಟ್

ಸುಪ್ರೀಂ ಕೋರ್ಟ್ | PTI
ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂತಿರುವ ಆರೋಪ ಸಂಬಂಧಿಸಿದ ಮಾಧ್ಯಮ ವರದಿಗಳ ಮೇಲೆ ಹೇರಲಾದ ನ್ಯಾಯಾಲಯದ ನಿರ್ಬಂಧವನ್ನು ಪ್ರಶ್ನಿಸಿ 'ಥರ್ಡ್ ಐ' ಎಂಬ ಯೂಟ್ಯೂಬ್ ವಾಹಿನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಧರ್ಮಸ್ಥಳದಲ್ಲಿ ಕೊಲೆಯಾದ ನೂರಾರು ಮೃತದೇಹಗಳನ್ನು ಹೂತಿದ್ದೇನೆ ಎಂದು ಸ್ವಚ್ಛತಾ ಕಾರ್ಮಿಕರೊಬ್ಬರು ಮಾಡಿದ ಆರೋಪಗಳನ್ನು ವಿವಿಧ ಮಾಧ್ಯಮಗಳು ವರದಿ ಮಾಡಿದ್ದವು. ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾಗ ಮೇಲ್ವಿಚಾರಕರು ತನಗೆ ಬೆದರಿಕೆ ಹಾಕಿ ಶವಗಳನ್ನು ಹೂಳುವಂತೆ ಒತ್ತಾಯಿಸಿದ್ದಾರೆ ಎಂದು ಸ್ವಚ್ಛತಾ ಕಾರ್ಮಿಕ ದೂರು ದಾಖಲಿಸಿದ್ದರು. ಆದರೆ ಕೃತ್ಯದಲ್ಲಿ ನಿರ್ದಿಷ್ಟ ವ್ಯಕ್ತಿಗಳನ್ನು ಅವರು ಹೆಸರಿಸಿರಲಿಲ್ಲ.
ಎಫ್ಐಆರ್ನಲ್ಲಿ ತಮ್ಮ ವಿರುದ್ಧ ಆರೋಪಗಳು ಇಲ್ಲದಿದ್ದರೂ ತಮ್ಮ ಕುಟುಂಬ, ದೇವಾಲಯ ಹಾಗೂ ಸಂಸ್ಥೆಗಳ ವಿರುದ್ಧ ಆನ್ಲೈನ್ನಲ್ಲಿ ಮತ್ತು ಮಾಧ್ಯಮಗಳಲ್ಲಿ ಸುಳ್ಳು ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಹರ್ಷೇಂದ್ರ ಕುಮಾರ್ ಆರೋಪಿಸಿದ್ದರು.
ಈ ಸಂಬಂಧ ಧರ್ಮಸ್ಥಳದ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆಯವರ ಸಹೋದರ ಹರ್ಷೇಂದ್ರ ಕುಮಾರ್ ಡಿ ಹಾಗು ಅವರ ಕುಟುಂಬದವರ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ಬೆಂಗಳೂರು ನಗರ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರ್ಬಂಧ ಹೇರಿತ್ತು.
ಈ ಆದೇಶವು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ ಎಂದು ಸುಬ್ರಹ್ಮಣ್ಯ ಎಸ್ ಹಂಡಿಗೆ ನೇತೃತ್ವದ 'ಥರ್ಡ್ ಐ' ಯೂಟ್ಯೂಬ್ ಚಾನೆಲ್ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. "ಸಂವಿಧಾನದ 19(1)(ಎ) ಅಡಿಯಲ್ಲಿ ನಮಗೆ ದೊರೆತಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು 21ನೇ ವಿಧಿಯ ಅಡಿಯಲ್ಲಿ ಇರುವ ನ್ಯಾಯ ಹಾಗೂ ಸ್ವಾಭಾವಿಕ ನ್ಯಾಯದ ಹಕ್ಕುಗಳಿಗೆ ಇದು ನೇರ ಧಕ್ಕೆ" ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.
'ಥರ್ಡ್ ಐ' ಚಾನೆಲ್ ಸಲ್ಲಿಸಿದ ಅರ್ಜಿಯಲ್ಲಿ, ಹರ್ಷೇಂದ್ರ ಕುಮಾರ್ ಅವರು ನ್ಯಾಯಾಂಗ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ತಪ್ಪು ಮಾಹಿತಿ ನೀಡಿ ಸೆಷನ್ಸ್ ನ್ಯಾಯಾಲಯದಿಂದ ಆದೇಶ ಪಡೆದಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಇದು ಧರ್ಮಸ್ಥಳದಲ್ಲಿ ಕೊಲೆಯಾದ ಶವಗಳನ್ನು ಹೂತಿಟ್ಟ ಆರೋಪ ಪ್ರಕರಣ ಮತ್ತಿತರ ಗಂಭೀರ ಅಪರಾಧಗಳ ಕುರಿತು ಸರ್ಕಾರ ನಡೆಸುತ್ತಿರುವ ಉನ್ನತ ಮಟ್ಟದ ತನಿಖೆಗೆ ನೇರವಾಗಿ ಅಡ್ಡಿ ಉಂಟುಮಾಡುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಹರ್ಷೇಂದ್ರ ಕುಮಾರ್ ಅವರು ತಮ್ಮನ್ನು ಮಾನಹಾನಿ ಮಾಡಲಾಗುತ್ತಿದೆ ಎಂದು 8,842 ಸಾಮಾಜಿಕ ಮಾಧ್ಯಮ ಲಿಂಕ್ ಗಳ ಪಟ್ಟಿ ನೀಡಿದ್ದು, ಇದರಲ್ಲಿ 4,140 ಯೂಟ್ಯೂಬ್ ವಿಡಿಯೋಗಳು, 932 ಫೇಸ್ಬುಕ್ ಪೋಸ್ಟ್ಗಳು, 3,584 ಇನ್ಸ್ಟಾಗ್ರಾಮ್ ಪೋಸ್ಟ್ಗಳು, 108 ಸುದ್ದಿ ಲೇಖನಗಳು, 37 ರೆಡ್ಡಿಟ್ ಪೋಸ್ಟ್ ಗಳು, 41 ಟ್ವೀಟ್ ಗಳು ಸೇರಿವೆ. ಇದನ್ನು ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
2012ರ ಎಫ್ಐಆರ್ನಲ್ಲಿ ತಮ್ಮನ್ನು ದೋಷಮುಕ್ತಗೊಳಿಸಲಾಗಿದ್ದು ಇತ್ತೀಚಿನ ಮತ್ತೊಂದು ಎಫ್ಐಆರ್ನಲ್ಲಿ ತಮ್ಮ ಅಥವಾ ತಮ್ಮ ಸಂಸ್ಥೆಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಅವರು ತಿಳಿಸಿದ್ದರು.
ವಾದ ಆಲಿಸಿದ್ದ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ವಿಜಯ ಕುಮಾರ್ ರೈ ಅವರು, ಮುಂದಿನ ವಿಚಾರಣೆಯವರೆಗೆ ಡಿಜಿಟಲ್, ಸಾಮಾಜಿಕ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಯಾವುದೇ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ಇಲ್ಲವೇ ಹಂಚದಂತೆ ಪ್ರತಿವಾದಿಗಳು ಮತ್ತು ಅಪರಿಚಿತ ವ್ಯಕ್ತಿಗಳಿಗೆ ನಿರ್ಬಂಧ ವಿಧಿಸಿದ್ದರು.







