ಬಾಲಿವುಡ್ ನಟ ಧರ್ಮೇಂದ್ರ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ : ಸ್ಪಷ್ಟನೆ ನೀಡಿದ ಕುಟುಂಬ

Photo | PTI
ಮುಂಬೈ : ಬಾಲಿವುಡ್ ನಟ ಧರ್ಮೇಂದ್ರ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಕುರಿತು ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಿ ಎಂದು ಅವರ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಬಾಲಿವುಡ್ ನಟ ಧರ್ಮೇಂದ್ರ ಅವರ ನಿಧನದ ಕುರಿತು ಸುದ್ದಿ ಹರಿದಾಡಿತ್ತು. ಇದರ ಬೆನ್ನಲ್ಲೆ ಇನ್ಸ್ಟಾಗ್ರಾಮ್ನಲ್ಲಿ ಪ್ರತಿಕ್ರಿಯಿಸಿದ ಧರ್ಮೇಂದ್ರ ಅವರ ಪುತ್ರಿ ಇಶಾ ಡಿಯೋಲ್, ಧರ್ಮೇಂದ್ರ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಮುಂಬೈ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸುವಂತೆ ಮಾಧ್ಯಮಗಳಿಗೆ ಆಗ್ರಹಿಸಿದ್ದಾರೆ.
"ಮಾಧ್ಯಮಗಳು ಅತಿಯಾದ ಉತ್ಸಾಹದಲ್ಲಿದ್ದು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ. ನನ್ನ ತಂದೆಯ ಆರೋಗ್ಯ ಸ್ಥಿರವಾಗಿದೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ. ಅಪ್ಪನ ತ್ವರಿತ ಚೇತರಿಕೆಗೆ ಪ್ರಾರ್ಥನೆಗಾಗಿ ಧನ್ಯವಾದಗಳು" ಎಂದು ಇಶಾ ಡಿಯೋಲ್ ಹೇಳಿದ್ದಾರೆ.
ಧರ್ಮೇಂದ್ರ ಅವರ ಪತ್ನಿ, ನಟಿ, ರಾಜಕಾರಣಿ ಹೇಮಾ ಮಾಲಿನಿ ಕೂಡ ಹಿರಿಯ ನಟನ ಆರೋಗ್ಯದ ಬಗ್ಗೆ ಮಾಧ್ಯಮ ವರದಿಯನ್ನು ಟೀಕಿಸಿದ್ದಾರೆ.
"ಈಗ ನಡೆಯುತ್ತಿರುವ ಬೆಳವಣಿಗೆ ಅಕ್ಷಮ್ಯ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮತ್ತು ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಯ ಬಗ್ಗೆ ಜವಾಬ್ದಾರಿಯುತ ಚಾನೆಲ್ಗಳು ಹೇಗೆ ಸುಳ್ಳು ಸುದ್ದಿಗಳನ್ನು ಹರಡಬಹುದು? ಇದು ಅತ್ಯಂತ ಅಗೌರವ ಮತ್ತು ಬೇಜವಾಬ್ದಾರಿಯುತವಾದುದು. ದಯವಿಟ್ಟು ಕುಟುಂಬದ ಗೌಪ್ಯತೆಗೆ ಗೌರವ ಕೊಡಿ" ಎಂದು ಹೇಮಾ ಮಾಲಿನಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.







