‘ಡಿಜಿಟಲ್ ಅರೆಸ್ಟ್’; ಉತ್ತರ ಪ್ರದೇಶ ವ್ಯಕ್ತಿಗೆ 1 ಕೋಟಿ ರೂ. ವಂಚನೆ

ಸಾಂದರ್ಭಿಕ ಚಿತ್ರ | PC : freepik.com
ಶಾಹಜಹಾನ್ಪುರ (ಉ.ಪ್ರ.): ಶಾಹಜಹಾನ್ ಪುರದ ನಿವಾಸಿಯೋರ್ವರನ್ನು ಡಿಜಿಟಲ್ ಎರೆಸ್ಟ್ ಮಾಡಲು ಜಾರಿ ನಿರ್ದೇಶನಾಲಯ (ಈಡಿ) ಹಾಗೂ ಸಿಬಿಐ ಅಧಿಕಾರಿಗಳ ಸೋಗು ಹಾಕಿದ ಹಾಗೂ ನಕಲಿ ಆನ್ಲೈನ್ ನ್ಯಾಯಾಲಯದ ಮೂಲಕ 1 ಕೋಟಿ ರೂ.ಗೂ ಅಧಿಕ ಮೊತ್ತ ವಂಚಿಸಿದ ಆರೋಪದಲ್ಲಿ 7 ಮಂದಿಯನ್ನು ಉತ್ತರಪ್ರದೇಶ ಪೊಲೀಸರು ಬುಧವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2.8 ಕೋಟಿ ರೂ. ಕಾನೂನುಬಾಹಿರ ವರ್ಗಾವಣೆಯ ಆರೋಪದ ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು 60 ವರ್ಷದ ಶರದ್ ಚಂದ್ ಅವರಿಗೆ ಮನವರಿಕೆ ಮಾಡಲಾಗಿತ್ತು. ಇದು ಈ ಗುಂಪಿನ ಕಾರ್ಯಾಚರಣೆ ವಿಧಾನವಾಗಿತ್ತು.
ವಂಚಕರು ಮೊದಲು ಈಡಿ ಹಾಗೂ ಸಿಬಿಐ ಅಧಿಕಾರಿಗಳ ಸೋಗು ಹಾಕಿ ಮೇ 6ರಂದು ಫೋನ್ ಮೂಲಕ ಅವರನ್ನು ಸಂಪರ್ಕಿಸಿದರು. ಅನಂತರ ನ್ಯಾಯಾಧೀಶರಂತೆ ಸೋಗು ಹಾಕುವ ಮೂಲಕ ವಂಚನೆಯನ್ನು ಮುಂದುವರಿಸಿದರು. ಅಲ್ಲದೆ ಸರಿಸುಮಾರು ತಿಂಗಳು ಕಾಲ ವ್ಯಾಟ್ಸ್ಆ್ಯಪ್ ಮೂಲಕ ನಕಲಿ ವರ್ಚುವಲ್ ವಿಚಾರಣೆ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರ್ಚುವಲ್ ವಿಚಾರಣೆ ಸಂದರ್ಭ ನಕಲಿ ವಕೀಲರು, ನ್ಯಾಯಾಧೀಶರು ಚಾಂದ್ ಅವರನ್ನು ಬೆದರಿಸಿದರು. ಅಂತಿಮವಾಗಿ ವಕೀಲರೆಂದು ಹೇಳಲಾದ 9 ವ್ಯಕ್ತಿಗಳಿಗೆ ಸೇರಿದ 40 ಖಾತೆಗಳಿಗೆ 1.04 ಕೋಟಿ ರೂ. ವರ್ಗಾಯಿಸುವಂತೆ ಅವರನ್ನು ಬಲವಂತಪಡಿಸಿದರು. ಸರಕಾರೇತರ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದ ಚಾಂದ್ ಡಿಜಿಟಲ್ ಎರೆಸ್ಟ್ ಸಂದರ್ಭ ಯಾರೊಬ್ಬರಿಗೂ ಮಾಹಿತಿ ನೀಡಿರಲಿಲ್ಲ. ಆದರೆ ತನ್ನನ್ನು ವಂಚಿಸಲಾಗುತ್ತಿದೆ ಎಂದು ಅರಿವಾದ ಬಳಿಕ ಅವರು ಈ ವಿಷಯದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಶಾಹಜಹಾನ್ ಪುರ ಪೊಲೀಸ್ ವರಿಷ್ಠ ರಾಜೇಶ್ ದ್ವಿವೇದಿ ತಿಳಿಸಿದ್ದಾರೆ.
ವಿಚಾರಣೆ ವೇಳೆ ಈ ಪ್ರಕರಣಕ್ಕೆ ಸಂಬಂಧಿಸಿ ಬ್ಯಾಂಕ್ ಖಾತೆಗಳಿಗೆ 9 ಕೋಟಿ ರೂ. ಸಂದೇಹಾಸ್ಪದ ವರ್ಗಾವಣೆಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಖಾತೆ ಕೂಡ ಪರಿಶೀಲನೆಯಲ್ಲಿದೆ ಎಂದು ದ್ವಿವೇದಿ ತಿಳಿಸಿದ್ದಾರೆ.
ಬಂಧಿತರನ್ನು ಸಚಿನ್, ಪ್ರಶಾಂತ್, ಗೌತಮ್ ಸಿಂಗ್, ಸಂದೀಪ್ ಕುಮಾರ್, ಸೈಯದ್ ಸೈಫ್, ಆರ್ಯನ್ ಶರ್ಮಾ ಹಾಗೂ ಪವನ್ ಯಾದವ್ ಎಂದು ಗುರುತಿಸಲಾಗಿದೆ. ಎಲ್ಲರೂ 20ರಿಂದ 28 ವರ್ಷಗಳ ನಡುವಿನ ವಯಸ್ಸಿನವರು.
ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಐಟಿ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.







