ಡಿಜಿಟಲ್ ಅರೆಸ್ಟ್ ಹಗರಣ | ಗುಜರಾತ್ ನ ರೈತ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ಅಹ್ಮದಾಬಾದ್, ನ. 20: ದಿಲ್ಲಿ ಭಯೋತ್ಪಾದನ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳೆಂದು ಸೋಗು ಹಾಕಿದ ಸೈಬರ್ ವಂಚಕರ ಡಿಜಿಟಲ್ ಅರೆಸ್ಟ್ ಹಗರಣಕ್ಕೆ ಸಿಲುಕಿದ ಬಳಿಕ ಗುಜರಾತ್ ನ ವಡೋದರಾ ಜಿಲ್ಲೆಯ 65 ವರ್ಷದ ರೈತರೋರ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸೈಬರ್ ವಂಚಕರು 40 ಕೋಟಿ ರೂ. ನಕಲಿ ವಂಚನೆ ಪ್ರಕರಣದಲ್ಲಿ ಅವರಿಗೆ ದಿನವಿಡಿ ಬೆದರಿಕೆ ಒಡ್ಡಿದ್ದರು. ಘಟನೆಯಿಂದ ಕಂಗಾಲಾಗಿರುವ ಅವರ ಕುಟುಂಬ ದಾಭೋಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಕಠಿಣ ಕ್ರಮ ತೆಗೆದುದುಕೊಳ್ಳುವಂತೆ ಒತ್ತಾಯಿಸಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೃತ ರೈತನನ್ನು ಕಾಕಾ ರಾಮ್ನಾ ಫಾಲಿಯಾ ನಿವಾಸಿ 65 ವರ್ಷದ ಅತುಲ್ಭಾಯಿ ಹೀರಾಬಾಯಿ ಪಟೇಲ್ ಎಂದು ಗುರುತಿಸಲಾಗಿದೆ. ಸೈಬರ್ ವಂಚಕರು ದಿಲ್ಲಿಯ ಎಟಿಎಸ್ ಅಧಿಕಾರಿಗಳೆಂದು ಸೋಗು ಹಾಕಿ ಪಟೇಲ್ ಗೆ ಬೆದರಿಕೆ ಒಡ್ಡಿದ್ದಾರೆ. ಮಾನಸಿಕ ಕಿರುಕುಳ ನೀಡಿದ್ದಾರೆ. ಅಲ್ಲದೆ, 40 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಹೇಳಿದ್ದಾರೆ.
ವಂಚಕರು ಪ್ರತಿ ಕೆಲವು ನಿಮಿಷಗಳಲ್ಲಿ ಒಮ್ಮೆ ವ್ಯಾಟ್ಸ್ ಆ್ಯಪ್ನಲ್ಲಿ ಸಂದೇಶ ಕಳುಹಿಸಿದರೆ, ಇನ್ನೊಮ್ಮೆ ವೀಡಿಯೊ ಕರೆ ಮಾಡುತ್ತಿದ್ದರು. ಅನಂತರ ಪಟೇಲ್ ಅವರನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಎಂದು ಹೇಳಿದ್ದರು. ಮನೆಯಿಂದ ಹೊರಗೆ ಹೋಗದಂತೆ ಹಾಗೂ ಎಲ್ಲಾ ಸಮಯದಲ್ಲಿ ಲಭ್ಯವಿರುವಂತೆ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಡಿಜಿಟಲ್ ಅರಸ್ಟ್ಗೆ ಒಳಗಾದ ಬಳಿಕ ರೈತನೋರ್ವ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಭಯಾನಕ ಹಾಗೂ ಬಹುಶಃ ಮೊದಲ ಪ್ರಕರಣ ಇದಾಗಿದೆ. ಇದರಿಂದಾಗಿ ವಡೊದರಾ ಜಿಲ್ಲೆಯ ಕಾಯಾವರೋಹಣ ಪ್ರದೇಶದಲ್ಲಿ ಆತಂಕ ಮೂಡಿದೆ







