ಅನರ್ಹತೆ ಅರ್ಜಿ : ಟಿಎಂಸಿಯ 20 ಬಂಡಾಯ ಸಂಸದರಿಗೆ ನೋಟಿಸ್ ಜಾರಿ ಮಾಡಿದ ಲೋಕಸಭಾ ಸಚಿವಾಲಯ

Photo Credit : PTI
ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ನ 20 ಬಂಡಾಯ ಸಂಸದರಿಗೆ ಲೋಕಸಭಾ ಸಚಿವಾಲಯವು ನೋಟಿಸ್ ಜಾರಿ ಮಾಡಿದ್ದು, ಏಳು ದಿನಗಳ ಒಳಗೆ ಉತ್ತರಿಸುವಂತೆ ಸೂಚಿಸಿದೆ. ಅನರ್ಹತೆ ಪ್ರಕ್ರಿಯೆಗಳನ್ನು ಕೈಗೊಳ್ಳುವಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿವೆ.
ಲೋಕಸಭಾ ಸದಸ್ಯರ (ಪಕ್ಷಾಂತರದ ಆಧಾರದ ಮೇಲೆ ಅನರ್ಹತೆ) ನಿಯಮಗಳು, 1985ರ ನಿಯಮ 6ರ ಅಡಿಯಲ್ಲಿ ಈ ನೋಟಿಸ್ ಜಾರಿಗೊಳಿಸಲಾಗಿದೆ. ಆಗಸ್ಟ್ 25ರ ದಿನಾಂಕ ನಮೂದಿಸಿರುವ ಈ ನೋಟಿಸ್ ಜೊತೆಗೆ, ಜೂನ್ 18ರಂದು ಈ ಸಂಸದರ ವಿರುದ್ಧ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ್ದ ಅನರ್ಹತೆ ಅರ್ಜಿಗಳ ಪ್ರತಿಗಳನ್ನೂ ಲಗತ್ತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅನರ್ಹತೆ ಪ್ರಕ್ರಿಯೆ ವಿಳಂಬವಾಗುತ್ತಿರುವುದನ್ನು ಪ್ರಶ್ನಿಸಿ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ಸಮ್ಮತಿಸಿತ್ತು. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ 20 ಸಂಸದರಿಗೆ ನೋಟಿಸ್ ಜಾರಿ ಮಾಡಿದೆ.
ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಅವರು ಲೋಕಸಭಾ ಸ್ಪೀಕರ್ ಮತ್ತು ಪ್ರಧಾನ ಕಾರ್ಯದರ್ಶಿಯವರನ್ನು ಪ್ರತಿನಿಧಿಸುತ್ತಿರುವುದಾಗಿ ತಿಳಿಸಿದ ಕಾರಣ ನ್ಯಾಯಾಲಯ ಅವರಿಗೆ ಪ್ರತ್ಯೇಕ ನೋಟಿಸ್ ಜಾರಿ ಮಾಡಿರುವುದಿಲ್ಲ.
"ಇದು ಕೇವಲ ನೋಟಿಸ್ ಜಾರಿ ಮಾಡುವ ಪ್ರಶ್ನೆಯಲ್ಲ. ನಿಗದಿತ ಕಾಲಮಿತಿಯೊಳಗೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ವಿಷಯವಾಗಿದೆ" ಎಂದು ವಿಚಾರಣೆ ವೇಳೆ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಬ್ಯಾನರ್ಜಿ ಅವರು ಜುಲೈ 27 ರಂದು ಲಿಖಿತ ಜ್ಞಾಪಕ ಪತ್ರ ಕಳುಹಿಸಿ ಈ ಅರ್ಜಿಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವಂತೆ ಕೋರಿದ್ದರು. ಬಳಿಕ, ಆಗಸ್ಟ್ 12 ರಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಮತ್ತೊಮ್ಮೆ ಮನವಿ ಮಾಡಿದ್ದರು.
ಅನರ್ಹತೆ ನೋಟಿಸ್ ಪಡೆದ 20 ಸಂಸದರು:
ಕಾಕೋಲಿ ಘೋಷ್ ದಸ್ತಿದಾರ್, ಸುದೀಪ್ ಬಂಡೋಪಾಧ್ಯಾಯ, ಶತಾಬ್ದಿ ರಾಯ್, ಪ್ರಸೂನ್ ಬ್ಯಾನರ್ಜಿ, ರಚನಾ ಬ್ಯಾನರ್ಜಿ, ಜಗದೀಶ್ ಚಂದ್ರ ಬರ್ಮಾ ಬಸುನಿಯಾ, ಪಾರ್ಥ ಭೌಮಿಕ್, ಅರೂಪ್ ಚಕ್ರವರ್ತಿ, ಅಧಿಕಾರಿ ದೀಪಕ್ ದೇವ್, ಸಯಾನಿ ಘೋಷ್, ಬಾಪಿ ಹಾಲ್ದಾರ್, ಮೊಹಮ್ಮದ್ ಅಬು ತಾಹಿರ್ ಖಾನ್, ಕಾಳಿಪದ ಸರೆನ್ ಖೇರ್ವಾಲ್, ಅಸಿತ್ ಕುಮಾರ್ ಮಾಲ್, ಜೂನ್ ಮಲಿಯಾ, ಮಿತಾಲಿ ಬಾಗ್, ಖಲೀಲುರ್ ರಹಮಾನ್, ಮಾಲಾ ರಾಯ್, ಶರ್ಮಿಳಾ ಸರ್ಕಾರ್ ಮತ್ತು ಯೂಸುಫ್ ಪಠಾಣ್.






