Tamil Nadu | ಟಿವಿಕೆ ಶಾಸಕ ವಿಶ್ವಾಸ ಮತದಲ್ಲಿ ಪಾಲ್ಗೊಳ್ಳದಂತೆ ತಡೆಯಿರಿ; ಒಂದೇ ಮತದಿಂದ ಸೋತ ಡಿಎಂಕೆ ನಾಯಕನಿಂದ ರಿಟ್ ಅರ್ಜಿ

Photo credit : thehindu | ಪೆರಿಯಕರುಪ್ಪನ್, ಸೀನಿವಾಸ ಸೇತುಪತಿ
ಚೆನ್ನೈ, ಮೇ 9: ಕಳೆದ ವಾರ ಮುಗಿದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಒಂದು ಮತದ ಅಂತರದಿಂದ ಸೋತ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಹಾಗೂ ಮಾಜಿ ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರು, ತಮ್ಮ ಎದುರಾಳಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಸೀನಿವಾಸ ಸೇತುಪತಿ ಅವರು ರಾಜ್ಯ ವಿಧಾನಸಭೆಯಲ್ಲಿ ನಡೆಯಲಿರುವ ವಿಶ್ವಾಸ ಮತದಲ್ಲಿ ಭಾಗವಹಿಸುವುದನ್ನು ತಡೆಯುವಂತೆ ಕೋರಿ ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಮೇ 13, 2026ರಂದು ಅಥವಾ ಅದಕ್ಕೂ ಮೊದಲು ರಾಜ್ಯ ವಿಧಾನಸಭೆಯಲ್ಲಿ ನಡೆಯಲಿರುವ ವಿಶ್ವಾಸ ಮತದಲ್ಲಿ ಸೀನಿವಾಸ ಸೇತುಪತಿ ಪಾಲ್ಗೊಳ್ಳದಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಶಿವಗಂಗಾ ಜಿಲ್ಲೆಯ ತಿರುಪತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಚಲಾಯಿಸಲಾದ ಮತಗಳನ್ನು ಸರಿಯಾಗಿ ಮರುಎಣಿಕೆ ಮಾಡಲಾಗಿಲ್ಲ. ಹೀಗಾಗಿ ಚುನಾವಣೆಯಲ್ಲಿ ವಿಜೇತರಾಗಿ ಘೋಷಿಸಲ್ಪಟ್ಟ ಅಭ್ಯರ್ಥಿ ಸೀನಿವಾಸ ಸೇತುಪತಿ ಯಾವುದೇ ಶಾಸನಾತ್ಮಕ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು ಅರ್ಜಿದಾರರು ವಾದಿಸಿದ್ದಾರೆ.
ನ್ಯಾಯಮೂರ್ತಿಗಳಾದ ಎಲ್. ವಿಕ್ಟೋರಿಯಾ ಗೌರಿ ಹಾಗೂ ಎನ್. ಸೆಂಥಿಲ್ಕುಮಾರ್ ಅವರ ಬೇಸಿಗೆ ರಜಾ ಪೀಠವು ರವಿವಾರ (ಮೇ 10) ವಿಶೇಷ ಅಧಿವೇಶನದಲ್ಲಿ ಈ ರಿಟ್ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.






