Tamil Nadu TASMAC ಭ್ರಷ್ಟಾಚಾರ | ಮುಖ್ಯಮಂತ್ರಿ ವಿಜಯ್ ಹೇಳಿಕೆಗೆ DMK ಆಕ್ಷೇಪ; ಸದನದಲ್ಲಿ ಗದ್ದಲ, ಶಾಸಕರನ್ನು ಹೊರಹಾಕಿದ ಸ್ಪೀಕರ್

Photo credit | indiatoday
ಚೆನ್ನೈ: ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸೋಮವಾರ TASMAC ಭ್ರಷ್ಟಾಚಾರದ ಕುರಿತು ಜಾರಿ ನಿರ್ದೇಶನಾಲಯದ (ED) ದಾಖಲೆಗಳನ್ನು ಆಧರಿಸಿ ಮಾಡಿದ ಹೇಳಿಕೆಗಳನ್ನು ವಿಧಾನಸಭೆಯ ದಾಖಲೆಯಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿ ಡಿಎಂಕೆ ಶಾಸಕರು ಮಂಗಳವಾರ ಸದನದಲ್ಲಿ ಪ್ರತಿಭಟನೆ ನಡೆಸಿದರು.
ಘೋಷಣೆಗಳನ್ನು ಕೂಗುತ್ತಾ ಶಾಸಕರು ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರ ಪೀಠವನ್ನು ಸುತ್ತುವರಿದ ಹಿನ್ನೆಲೆಯಲ್ಲಿ ಸದನದಲ್ಲಿ ಗದ್ದಲ ಉಂಟಾಯಿತು.
ಡಿಎಂಕೆ ಶಾಸಕರ ಬೇಡಿಕೆಯನ್ನು ಸ್ಪೀಕರ್ ತಿರಸ್ಕರಿಸಿದರು. ಇದಾದ ಬಳಿಕವೂ ವಿರೋಧ ಪಕ್ಷದ ಶಾಸಕರು ಸದನದೊಳಗೆ ಪ್ರತಿಭಟನೆ ಮುಂದುವರಿಸಿದರು.
ಡಿಎಂಕೆ ಶಾಸಕರು ಘೋಷಣೆಗಳನ್ನು ಕೂಗುತ್ತಿದ್ದ ವೇಳೆ ಕಾನೂನು ಸಚಿವರು ಮುಖ್ಯಮಂತ್ರಿ ವಿಜಯ್ ಅವರ ಹೇಳಿಕೆಯನ್ನು ಸಮರ್ಥಿಸಿದರು. ಪ್ರತಿಭಟನಾನಿರತ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸದನದ ನಾಯಕ ಸೆಂಗೊಟ್ಟೈಯನ್ ಒತ್ತಾಯಿಸಿದರು ಎಂದು ಪಿಟಿಐ ವರದಿ ಮಾಡಿದೆ.
ಶಾಸಕರನ್ನು ಹೊರಹಾಕಿದ ಮಾರ್ಷಲ್ ಗಳು
ಪ್ರತಿಭಟನೆ ಮುಂದುವರಿದ ಹಿನ್ನೆಲೆಯಲ್ಲಿ ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರು ವಾಚ್ ಆ್ಯಂಡ್ ವಾರ್ಡ್ ಸಿಬ್ಬಂದಿಗೆ ಡಿಎಂಕೆ ಶಾಸಕರನ್ನು ಸದನದಿಂದ ಹೊರಹಾಕುವಂತೆ ನಿರ್ದೇಶನ ನೀಡಿದರು. ಬಳಿಕ ವಿಧಾನಸಭೆಯ ಮಾರ್ಷಲ್ಗಳು ಪ್ರತಿಭಟನಾನಿರತ ಶಾಸಕರನ್ನು ಸದನದಿಂದ ಹೊರಗೆ ಕರೆದೊಯ್ದರು.
TASMAC ಭ್ರಷ್ಟಾಚಾರದ ಬಗ್ಗೆ ವಿಜಯ್ ಆರೋಪ
ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ವಿಜಯ್, ಸರ್ಕಾರಿ ಸ್ವಾಮ್ಯದ ಮದ್ಯದ ಚಿಲ್ಲರೆ ಮಾರಾಟ ಸಂಸ್ಥೆ ಟಾಸ್ಮಾಕ್ (TASMAC)ನಲ್ಲಿನ ಭ್ರಷ್ಟಾಚಾರದ ಕುರಿತು ಹಿಂದಿನ ಡಿಎಂಕೆ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಕೇಂದ್ರ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯದ ತನಿಖೆಯಿಂದ ಹೊರಬಂದಿರುವ ಅಂಶಗಳನ್ನು ಅವರು ವಿವರಿಸಿದ್ದರು.
ತಮ್ಮ ಭಾಷಣದ ವೇಳೆ ED ದಾಖಲೆಗಳನ್ನು ಪ್ರದರ್ಶಿಸಿದ ವಿಜಯ್, ಡಿಎಂಕೆ ಮಾಜಿ ಸಚಿವ ವಿ. ಸೆಂಥಿಲ್ ಬಾಲಾಜಿ ಮತ್ತು ಅವರ ಸಹೋದರ ಅಶೋಕ್ ಕುಮಾರ್ ಅವರು ಮದ್ಯದ ಚಿಲ್ಲರೆ ಮಾರಾಟಕ್ಕೆ ಸಂಬಂಧಿಸಿದ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿದ್ದರು.
‘ಭ್ರಷ್ಟಾಚಾರವೇ ಡಿಎಂಕೆಯ ದೊಡ್ಡ ಸಾಧನೆ’ ಎಂದು ವಿಜಯ್ ಆರೋಪಿಸಿದ್ದರು. ತಮ್ಮ ಆರೋಪಕ್ಕೆ ಪೂರಕವಾಗಿ ಜಾರಿ ನಿರ್ದೇಶನಾಲಯದ (ED) ದಾಖಲೆಗಳಲ್ಲಿರುವ ಅಂಶಗಳನ್ನು ಅವರು ಸದನದಲ್ಲಿ ಉಲ್ಲೇಖಿಸಿದ್ದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ತಿಳಿಸಿತ್ತು.
ಆಗಿನ ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ನೇತೃತ್ವದ ಸರಕಾರದ ಅವಧಿಯಲ್ಲಿ ಟೆಂಡರ್ ಗಳಲ್ಲಿ ಶೇ 2.5ರಷ್ಟು ಭ್ರಷ್ಟಾಚಾರ ನಡೆದಿತ್ತು ಎಂದು ಹೇಳಿದ್ದ ಸರ್ಕಾರಿಯಾ ಆಯೋಗದ ವರದಿಯನ್ನು ವಿಜಯ್ ಉಲ್ಲೇಖಿಸಿದ್ದರು.
‘ಹಣಕಾಸಿನ ಅಕ್ರಮಗಳನ್ನು ಸಂಘಟಿತ ರೀತಿಯಲ್ಲಿ ನಡೆಸಲಾಗಿತ್ತು. ಡಿಎಂಕೆ ಆಡಳಿತದಲ್ಲಿ ನಡೆದಿರುವುದು ವೈಜ್ಞಾನಿಕ ಭ್ರಷ್ಟಾಚಾರ’ ಎಂದು ಅವರು ಆರೋಪಿಸಿದ್ದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡುವಾಗ ಡಿಎಂಕೆ ಟಿವಿಕೆ ಸರಕಾರವನ್ನು ಟೀಕಿಸುತ್ತದೆ ಎಂದು ವಿಜಯ್ ಹೇಳಿದರು. ಆದರೆ, ‘ನಾವು ಎಂದಿಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ’ ಎಂದು ಡಿಎಂಕೆ ಎಂದಿಗೂ ಹೇಳುವುದಿಲ್ಲ ಎಂದು ಅವರು ಟೀಕಿಸಿದ್ದರು.
ಡಿಎಂಕೆಯಿಂದ ಪ್ರತಿಭಟನೆ, ಸಭಾತ್ಯಾಗ
ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (TVK) ವಿರುದ್ಧ ವಿಜಯ್ ಮಾಡಿದ್ದ ಟೀಕೆಗೆ ಡಿಎಂಕೆ ಪ್ರತಿಕ್ರಿಯಿಸಿತು. ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಶಾಸಕರು ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದರು.
ಸ್ಪೀಕರ್ ಅವರ ಪೀಠದ ಮುಂದೆ ಕುಳಿತು ಮಾತನಾಡಲು ಅವಕಾಶ ನೀಡುವಂತೆ ಡಿಎಂಕೆ ಶಾಸಕರು ಕೇಳಿದರು. ಆದರೆ, ಸ್ಪೀಕರ್ ಇದಕ್ಕೆ ಒಪ್ಪಲಿಲ್ಲ. ಬಳಿಕ ಡಿಎಂಕೆ ನಾಯಕರು ಸಭಾತ್ಯಾಗ ಮಾಡಿದರು.






