ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಕುರಿತು ಮೃದು ಧೋರಣೆ ತಳೆದ DMK | ತಮಿಳುನಾಡಿನ ಹಿತಾಸಕ್ತಿ ಕಾಪಾಡಿದರೆ ಬೆಂಬಲಕ್ಕೆ ಸಿದ್ಧಎಂದ ದ್ರಾವಿಡ ಪಕ್ಷ

ಎಂ.ಕೆ. ಸ್ಟಾಲಿನ್ | Photo Credit : PTI
ಹೊಸದಿಲ್ಲಿ: ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಕುರಿತು ದ್ರಾವಿಡ ಮುನ್ನೇತ್ರ ಕಳಗಂ (DMK) ಮೃದು ಧೋರಣೆ ತಳೆದಿದ್ದು, ತಮಿಳುನಾಡಿನ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಮಸೂದೆ ರೂಪುಗೊಂಡರೆ ಬೆಂಬಲ ನೀಡಲು ಸಿದ್ಧ ಎಂಬ ನಿಲುವು ವ್ಯಕ್ತಪಡಿಸಿದೆ. ಜುಲೈ 21ರಿಂದ ಆರಂಭವಾಗಲಿರುವ ಸಂಸತ್ತಿನ ಮಂಗಾರು ಅಧಿವೇಶನಕ್ಕೂ ಮುನ್ನ ಪಕ್ಷ ಕಾದು ನೋಡುವ ತಂತ್ರ ಅನುಸರಿಸಿದೆ.
"ಮಸೂದೆಯನ್ನು ನಾವು ಸಮಗ್ರವಾಗಿ ಅಧ್ಯಯನ ಮಾಡುತ್ತೇವೆ. ತಮಿಳುನಾಡಿನ ಹಿತಾಸಕ್ತಿಯನ್ನು ರಕ್ಷಿಸುವ ಅಂಶಗಳು ಮಸೂದೆಯಲ್ಲಿ ಒಳಗೊಂಡಿವೆ ಎಂಬುದು ಖಚಿತವಾದ ಬಳಿಕವೇ ನಮ್ಮ ನಿಲುವು ಪ್ರಕಟಿಸುತ್ತೇವೆ" ಎಂದು DMK ಮೂಲಗಳನ್ನು ಉಲ್ಲೇಖಿಸಿ The News Minute ವರದಿ ಮಾಡಿದೆ.
ರಾಜಕೀಯವಾಗಿ ಮಹತ್ವದ ಬೆಳವಣಿಗೆಯೊಂದರ ನಡುವೆಯೇ DMKಯ ಈ ಮೃದು ಧೋರಣೆ ಹೊರಬಿದ್ದಿದೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಬಳಿಕ DMK ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟದಿಂದ ಕಾಂಗ್ರೆಸ್ ಹೊರಬಂದಿದ್ದು, ಮುಖ್ಯಮಂತ್ರಿ ಸಿ. ವಿಜಯ್ ಜೋಸೆಫ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸರ್ಕಾರಕ್ಕೆ ಬೆಂಬಲ ನೀಡಿತ್ತು. ಇದರ ಬೆನ್ನಲ್ಲೇ DMKಯೂ ಇಂಡಿಯಾ ಮೈತ್ರಿಕೂಟದಿಂದ ಹೊರಬಂದಿತ್ತು.
DMK ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿಲ್ಲ. ಆದರೆ, ಕ್ಷೇತ್ರ ಪುನರ್ವಿಂಗಡಣೆಯನ್ನು ಜನಗಣತಿಯ ಆಧಾರದಲ್ಲಿ ಮಾತ್ರ ಕೈಗೊಳ್ಳುವ ಕ್ರಮಕ್ಕೆ ಪಕ್ಷ ವಿರೋಧ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
"ಜನಗಣತಿಯ ಆಧಾರದಲ್ಲಿ ಕ್ಷೇತ್ರ ಪುನರ್ವಿಂಗಡಣೆ ನಡೆಸಿದರೆ ತಮಿಳುನಾಡಿಗೆ ದೊಡ್ಡ ನಷ್ಟವಾಗಲಿದೆ. ಆದರೆ, ಅನುಪಾತದ ಆಧಾರದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಾಡಿದರೆ ಅದನ್ನು ನಾವು ಪರಿಗಣಿಸುತ್ತೇವೆ. ತಮಿಳುನಾಡಿಗೆ ಹೆಚ್ಚುವರಿ ಲೋಕಸಭಾ ಕ್ಷೇತ್ರಗಳು ಖಂಡಿತ ಬೇಕು" ಎಂದು DMKಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡರೆ, ಅದನ್ನು ಎಲ್ಲ ರಾಜ್ಯಗಳಿಗೂ ಸಮಾನವಾಗಿ ಅನ್ವಯಿಸಬೇಕು. ಇದರಿಂದ ಎಲ್ಲ ರಾಜ್ಯಗಳಿಗೂ ಸಮಾನ ಪ್ರಾತಿನಿಧ್ಯ ಉಳಿಯಲಿದೆ ಎಂದು ಮತ್ತೊಬ್ಬ DMK ನಾಯಕ ಹೇಳಿದ್ದಾರೆ.
ಈ ವಿಷಯದ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ DMK ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ಗುರುವಾರ ಪಕ್ಷದ ಸಂಸದರೊಂದಿಗೆ ಆನ್ಲೈನ್ ಸಭೆ ನಡೆಸಿದರು. ಸಭೆಯಲ್ಲಿ ರಾಜ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಕುರಿತು ಸಂಸದರು ತಮ್ಮ ನಿಲುವು ರೂಪಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಅದಕ್ಕೆ ಅನುಗುಣವಾಗಿ ಮುಂದಿನ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಯಿತು ಎಂದು ತಿಳಿದು ಬಂದಿದೆ.






