ಮಕ್ಕಳನ್ನು ಬೇರೆಯವರ ಜೊತೆ ಹೋಲಿಸಬೇಡಿ ; ‘ಪರೀಕ್ಷಾ ಪೇ ಚರ್ಚಾ’ದಲ್ಲಿ ಪ್ರಧಾನಿ ಸಲಹೆ
ನರೇಂದ್ರ ಮೋದಿ | Photo: PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ‘ಪರೀಕ್ಷಾ ಪೆ ಚರ್ಚಾ’ದ 7ನೇ ಆವೃತ್ತಿಯಲ್ಲಿ ಮಂಡಳಿ ಪರೀಕ್ಷೆಯ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು.
ಈ ಕಾರ್ಯಕ್ರಮ ಹೊಸದಿಲ್ಲಿಯ ಭಾರತ ಮಂಡಪಂನಲ್ಲಿ ನಡೆಯಿತು. ವಿದ್ಯಾರ್ಥಿಗಳು ತಮ್ಮ, ಪೋಷಕರು ಹಾಗೂ ಕುಟುಂಬ ಒತ್ತಡವನ್ನು ಹೇಗೆ ನಿಭಾಯಿಸಬಹುದು ಎಂಬುದು ಸೇರಿದಂತೆ ವಿವಿಧ ವಿಷಯಗಳ ಕುರಿತಂತೆ ಅವರು ಮಾತನಾಡಿದರು.
ವಿದ್ಯಾರ್ಥಿಗಳ ನಡುವೆ ಆರೋಗ್ಯಕರ ಸ್ಪರ್ಧೆಯ ಮಹತ್ವವನ್ನು ಅವರು ಒತ್ತಿ ಹೇಳಿದರು. ಅಲ್ಲದೆ, ವಿದ್ಯಾರ್ಥಿಗಳ ರಿಪೋರ್ಟ್ ಕಾಡ್ ಪೋಷಕರಿಗೆ ವಿಸಿಟಿಂಗ್ ಕಾರ್ಡ್ ಅಲ್ಲ ಎಂದರು.
ಪ್ರಮುಖ ಅಂಶಗಳು
1. ಪರೀಕ್ಷೆಯ ಸಂದರ್ಭ ಒತ್ತಡ ನಿಭಾಯಿಸುವುದು ಹೇಗೆ ?
ವಿದ್ಯಾರ್ಥಿಗಳಿಗೆ ಉಂಟಾಗುವ ಎರಡು ರೀತಿಯ ಒತ್ತಡಗಳ ಬಗ್ಗೆ ಅವರು ಗಮನ ಸೆಳೆದರು. ಅದು ಮಾನಸಿಕ ಆಯಾಸಕ್ಕೆ ಕಾರಣವಾಗುವ ಕಠಿಣ ಯೋಜನೆಗಳಿಂದ ಸ್ವಯಂ ಹೇರಿದ ಒತ್ತಡ ಮತ್ತು ಪೋಷಕರು, ಒಡಹುಟ್ಟಿದವರು ಹಾಗೂ ಶಿಕ್ಷಕರ ಬಾಹ್ಯಾ ಒತ್ತಡ ಎಂದರು. ಈ ಒತ್ತಡವನ್ನು ನಿಭಾಯಿಸಲು ಶಿಕ್ಷಕರು ಹಾಗೂ ಕುಟುಂಬದ ಸದಸ್ಯರು ವಿದ್ಯಾರ್ಥಿಗಳಿಗೆ ಹೇಗೆ ಸಹಾಯ ಮಾಡಬಹುದು ಎಂದು ಅವರು ತಿಳಿಸಿದರು.
2. ಆರೋಗ್ಯಕರ ಸ್ಪರ್ಧೆಯ ಪ್ರಾಮುಖ್ಯತೆ
ಸವಾಲುಗಳು ಇಲ್ಲದೇ ಇದ್ದರೆ ಜೀವನ ಸ್ಫೂರ್ತಿದಾಯಕವಾಗಿ ಇರುವುದಿಲ್ಲ. ಸ್ಪರ್ಧೆ ಹಾಗೂ ಸವಾಲಗಳು ಸ್ಫೂರ್ತಿಯ ಮೂಲಗಳಾಗಿವೆ ಎಂದು ಅವರು ತಿಳಿಸಿದರು.
3. ಶಿಕ್ಷಕರು-ವಿದ್ಯಾರ್ಥಿಗಳ ಬಾಂಧವ್ಯದ ಪಾತ್ರ ಅತ್ಯಂತ ಮಹತ್ವದ್ದು
ಪರೀಕ್ಷೆಯ ಒತ್ತಡ ನಿವಾರಿಸಲು ಆರಾಮದಾಯಕ ವಾತಾವರಣವನ್ನು ಸೃಷ್ಟಿಸುವಂತೆ ಹಾಗೂ ಆರಂಭದಿಂದಲೂ ವಿದ್ಯಾರ್ಥಿಗಳೊಂದಿಗೆ ಸಕಾರಾತ್ಮಕ ಸಂಪರ್ಕವನ್ನು ಸ್ಥಾಪಿಸುವಂತೆ ಅವರು ಶಿಕ್ಷಕರಿಗೆ ಸಲಹೆ ನೀಡಿದರು.
4. ವಿದ್ಯಾರ್ಥಿಗಳ ರಿಪೋರ್ಟ್ ಕಾರ್ಡ್ ಪೋಷಕರಿಗೆ ವಿಸಿಟಿಂಗ್ ಕಾರ್ಡ್ ಅಲ್ಲ
ತಮ್ಮ ಮಕ್ಕಳ ಅಂಕಗಳ ಬಗ್ಗೆ ಹೊಗಳಬೇಡಿ ಅಥವಾ ಇತರರೊಂದಿಗೆ ಚರ್ಚಿಸಬೇಡಿ. ಇದರಿಂದ ಅವರಿಗೆ ಒತ್ತಡ ಉಂಟಾಗಬಹುದು. ವಿದ್ಯಾರ್ಥಿಗಳ ರಿಪೋರ್ಟ್ ಕಾರ್ಡ್ ಪೋಷಕರಿಗೆ ವಿಸಿಟಿಂಗ್ ಕಾರ್ಡ್ ಅಲ್ಲ ಎಂದು ಅವರು ಹೇಳಿದರು.
5. ಇತರ ಬಗ್ಗೆ ಅಸೂಯೆ ಪಡಬೇಡಿ
ನಿಮಗೆ ನೀವೇ ಸ್ಪರ್ಧಿಯಾಗಿ. ಇತರರ ಬಗ್ಗೆ ಅಸೂಯೆಪಟ್ಟುಕೊಳ್ಳಬೇಡಿ. ಜ್ಞಾನವನ್ನು ಪರಿಸ್ಪರ ಹಂಚಿಕೊಳ್ಳಿ. ಸ್ನೇಹಿತರೊಂದಿಗೆ ಸ್ಪರ್ಧೆಯಲ್ಲಿ ತೊಡಗಬೇಡಿ. ಪಾಲಕರು ಕೂಡ ಮಕ್ಕಳಲ್ಲಿ ಸ್ಫರ್ಧೆಯ ಮನೋಭಾವನೆ ಮೂಡಿಸಬಾರದು ಎಂದು ಅವರು ಹೇಳಿದರು.
6. ನಮ್ಮ ದೇಹವನ್ನು ರಿಚಾರ್ಜ್ ಮಾಡುವುದು ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ
ಪ್ರತಿದಿನ ಸೂರ್ಯನ ಬೆಳಕಿನಲ್ಲಿ ಸಮಯ ಕಳೆಯುವ ಅಭ್ಯಾಸ ರೂಢಿಸಿಕೊಳ್ಳಿ ಎಂದು ಪ್ರಧಾನಿ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ದೇಹವನ್ನು ರಿಚಾರ್ಜ್ ಮಾಡುವ ಅದರ ಪಾತ್ರದ ಬಗ್ಗೆ ಅವರು ಒತ್ತಿ ಹೇಳಿದರು.