ಅಮೆರಿಕ ಸುಂಕಕ್ಕೆ ಹೆದರಬೇಡಿ, 10 ಹೊಸ ದೇಶಗಳೊಂದಿಗೆ ವ್ಯಾಪಾರ: ಆದಿತ್ಯನಾಥ್

Photo : indian express
ಭದೋಹಿ (ಉತ್ತರ ಪ್ರದೇಶ): ಅಮೆರಿಕದ ಸುಂಕದಿಂದ ಹೆದರುವ ಅಗತ್ಯವಿಲ್ಲ. ನಾವು 10 ಹೊಸ ದೇಶಗಳೊಂದಿಗೆ ವ್ಯಾಪಾರ ಪ್ರಾರಂಭಿಸಲಿದ್ದೇವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರತ್ನಗಂಬಳಿ ಉದ್ಯಮಿಗಳು ಹಾಗೂ ರಫ್ತುದಾರರಿಗೆ ಅಭಯ ನೀಡಿದ್ದಾರೆ.
ಭದೋಹಿಯಲ್ಲಿ ಆಯೋಜನೆಗೊಂಡಿದ್ದ ದೇಶದ ಬೃಹತ್ ರತ್ನಗಂಬಳಿ ರಫ್ತುದಾರರ ಅಂತಾರಾಷ್ಟ್ರೀಯ ಕಲೀನ್ ಮೇಳ ಮತ್ತು ನಾಲ್ಕನೇ ರತ್ನಗಂಬಳಿ ಪ್ರದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಯೋಗಿ ಆದಿತ್ಯನಾಥ್, ರತ್ನಗಂಬಳಿ ಉದ್ಯಮದ ಮೇಲೆ ಸುಂಕದಿಂದ ಆಗಿರುವ ಪರಿಣಾಮದ ಮೇಲೆ ನಿಗಾ ವಹಿಸಲು ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಉನ್ನತ ಮಟ್ಟದ ಸರಕಾರಿ ಸಮಿತಿಯನ್ನು ರಚಿಸಲಾಗುವುದು ಎಂದು ಪ್ರಕಟಿಸಿದರು. ಒಂದು ವೇಳೆ ಒಂದು ದೇಶ ಸುಂಕವನ್ನು ಹೇರಿದರೆ, ನಮ್ಮ ಸರಕಾರ 10 ಹೊಸ ದೇಶಗಳೊಂದಿಗೆ ವ್ಯಾಪಾರ ಪ್ರಾರಂಭಿಸುವುದು ಎಂದು ಅವರು ಅಭಯ ನೀಡಿದರು.
ಉದ್ಯಮಿಗಳ ಸಲಹೆಗಳನ್ನು ನೀತಿ ನಿರ್ಣಯಗಳಲ್ಲಿ ಸೇರ್ಪಡೆ ಮಾಡಲು ಸಮಿತಿಯೊಂದನ್ನು ರಚಿಸಲು ಸರಕಾರ ಪರಿಗಣಿಸುತ್ತಿದೆ ಎಂದೂ ಅವರು ತಿಳಿಸಿದರು.
“ಅಮೆರಿಕ ಸುಂಕವನ್ನು ಹೇರಿದೆ. ಆದರದು ಕೇವಲ ಒಂದು ದೇಶದ ನಿರ್ಧಾರ ಮಾತ್ರ. ನಾವು ಯುಎಇ, ಬ್ರಿಟನ್ ಹಾಗೂ ಇನ್ನಿತರ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ತ್ವರಿತ ಕ್ರಮ ಕೈಗೊಂಡಿದ್ದು, ಇದರಿಂದ ನಮ್ಮ ಉದ್ಯಮಗಳಿಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಡೊನಾಲ್ಡ್ ಟ್ರಂಪ್ ಸರಕಾರದ ನಿರ್ಧಾರದಿಂದ, ಮತ್ಸ್ಯೋದ್ಯಮ, ಚರ್ಮೋದ್ಯಮ ಮತ್ತಿತರ ಮಧ್ಯಮ ಗಾತ್ರದ ಉದ್ಯಮಿಗಳು ಹಾಗೂ ರಫ್ತುದಾರರಿಗೆ ತೀವ್ರ ಪ್ರತಿಕೂಲ ಪರಿಣಾಮವುಂಟಾಗಿದೆ. ಉತ್ತರ ಪ್ರದೇಶದ ಪ್ರಮುಖ ಉದ್ಯಮ ವಲಯವಾದ ರತ್ನಗಂಬಳಿ ತಯಾರಿಕೆ ಹಾಗೂ ರಫ್ತಿನ ಮೇಲೂ ಇದರ ವ್ಯತಿರಿಕ್ತ ಪರಿಣಾಮವುಂಟಾಗಿದೆ. ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ರಿಂದ ಈ ಭರವಸೆ ಹೊರ ಬಿದ್ದಿದೆ.







