ಮುಸ್ಲಿಮರನ್ನು ಪ್ರಚೋದಿಸಬಹುದು ಎಂದು ಭಾವಿಸಬೇಡಿ: ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್

ಮಲಪ್ಪುರಂ: “ಮುಸ್ಲಿಮರನ್ನು ಪ್ರಚೋದಿಸಬಹುದು ಎಂದು ಬಾವಿಸಬೇಡಿ. ಹಾಗೆಯೇ ನಾವು ಭ್ರಮನಿರಸನಗೊಳ್ಳುತ್ತೇವೆ ಎಂದೂ ಭಾವಿಸಬೇಡಿ. ದೇವರ ವಿಶ್ವಾಸದಲ್ಲಿ ನಂಬಿಕೆಯಿಟ್ಟಿರುವ ಸಮುದಾಯವೊಂದರ ಹೃದಯವನ್ನು ಎಂದಿಗೂ ಒಡೆಯಲು ಸಾಧ್ಯವಿಲ್ಲ. ಇಸ್ಲಾಂನಲ್ಲಿ ಭ್ರಮನಿರಸನಕ್ಕೆ ಅವಕಾಶವಿಲ್ಲ. ಸಹನೆ, ಶಾಂತಿ ಹಾಗೂ ಎಲ್ಲರನ್ನೂ ಸೇರಿಸಿಕೊಂಡು ಹೋಗುವುದು ಇಸ್ಲಾಂನ ಭಾಷೆ. ಅದು ಮುಸ್ಲಿಮರ ದೌರ್ಬಲ್ಯವಲ್ಲ; ಬದಲಿಗೆ ಶಕ್ತಿ” ಎಂದು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಪ್ರಕಟನೆಯೊಂದರಲ್ಲಿ ಹೇಳಿದ್ದಾರೆ.
“ಬಲವಂತವಾಗಿ ವಶಪಡಿಸಿಕೊಂಡ ಜಾಗದಲ್ಲಿ ಯಾವುದೇ ಪ್ರಾರ್ಥನೆ ಸಲ್ಲಿಸುವುದನ್ನು ದೇವರು ಒಪ್ಪುವುದಿಲ್ಲ ಎಂದು ಇಸ್ಲಾಂ ಬೋಧಿಸುತ್ತದೆ. ಹೀಗಾಗಿ, ಮುಸ್ಲಿಮರು ಎಲ್ಲ ಸಮಯದಲ್ಲೂ ಮಸೀದಿಗಳನ್ನು ನಿರ್ಮಿಸುವಾಗ ಅತೀವ ಎಚ್ಚರಿಕೆ ವಹಿಸುತ್ತಾರೆ. ಯಾಕೆಂದರೆ, ದೇವರು ಎಲ್ಲ ಆಕ್ರಮಣ ಹಾಗೂ ಮಿತಿಮೀರಿದ ಜಾಗದಿಂದ ಮುಕ್ತವಾಗಿರುವ ಜಾಗದಲ್ಲಿ ಸಲ್ಲಿಸುವ ಪ್ರಾರ್ಥನೆಯನ್ನು ಮಾತ್ರ ದೇವರು ಸ್ವೀಕರಿಸುತ್ತಾನೆ ಎಂದು ನಾವು ನಂಬಿದ್ದೇವೆ. ಅಂತಹ ಸ್ವಚ್ಛ ಸ್ಥಳದಲ್ಲಿ ಒಮ್ಮೆ ಮಸೀದಿ ನಿರ್ಮಿಸಿದ ಕೂಡಲೇ ವಿಶ್ವವು ಅಸ್ತಿತ್ವದಲ್ಲಿರುವವರೆಗೂ ಅದು ಪ್ರಾರ್ಥನಾ ಸ್ಥಳವಾಗಿಯೇ ಮುಂದುವರಿಯುತ್ತದೆ” ಎಂದು ಅವರು ಹೇಳಿದ್ದಾರೆ.
ಮುಸ್ಲಿಮರಿಗೆ ನ್ಯಾಯ ನಿರಾಕರಿಸಲಾಗುತ್ತಿದೆ ಎಂಬ ಕಾರಣಕ್ಕೆ ಮುಸ್ಲಿಮರು ಇತರರಿಗೆ ನ್ಯಾಯ ನಿರಾಕರಣೆ ಮಾಡುವುದಿಲ್ಲ ಎಂದು ಹೇಳಿರುವ ಎ.ಪಿ.ಉಸ್ತಾದ್, ಮುಸ್ಲಿಮ್ ಸಮುದಾಯದ ದೃಢತೆ ಎಷ್ಟು ದೊಡ್ಡ ಮಟ್ಟದ್ದೆಂದರೆ, ದೇಶದಲ್ಲಿ ನಡೆಯುತ್ತಿರುವ ನಕಾರಾತ್ಮಕ ಬೆಳವಣಿಗೆಗಳಿಂದ ಅವರು ಭ್ರಮನಿರಸನಗೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.
ಮುಸ್ಲಿಮರ ಬೇಡಿಕೆಯ ಪರ ಜಾತ್ಯತೀತ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವವರು ನಿಲ್ಲಬೇಕು ಎಂದು ಮನವಿ ಮಾಡಿರುವ ಅವರು, ಮುಸ್ಲಿಮರ ನ್ಯಾಯಯುತ ಹೋರಾಟವನ್ನು ಬೆಂಬಲಿಸಿದ್ದಕ್ಕಾಗಿ ದಾಳಿಗೊಳಗಾಗಿರುವವರ ಪರ ಮುಸ್ಲಿಮ್ ಸಮುದಾಯವು ಒಗ್ಗಟ್ಟಾಗಿ ನಿಲ್ಲಲಿದೆ ಎಂದೂ ಹೇಳಿದ್ದಾರೆ.







