ChatGPT, DeepSeek ಸೇರಿದಂತೆ AI ತಂತ್ರಜ್ಞಾನ ಬಳಸದಂತೆ ಉದ್ಯೋಗಿಗಳಿಗೆ ಸೂಚಿಸಿದ ಹಣಕಾಸು ಸಚಿವಾಲಯ : ವರದಿ

ಹೊಸದಿಲ್ಲಿ : ದಾಖಲೆಗಳು ಮತ್ತು ದತ್ತಾಂಶಕ್ಕೆ ಉಂಟಾಗಬಹುದಾದ ಅಪಾಯಗಳನ್ನು ಉಲ್ಲೇಖಿಸಿ ಸರಕಾರಿ ಕಚೇರಿಯಲ್ಲಿ ChatGPT ಮತ್ತು DeepSeek ಸೇರಿದಂತೆ AI ತಂತ್ರಜ್ಞಾನ ಬಳಸದಂತೆ ಹಣಕಾಸು ಸಚಿವಾಲಯ ತನ್ನ ಉದ್ಯೋಗಿಗಳಿಗೆ ಸೂಚಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ Indiatoday ವರದಿ ಮಾಡಿದೆ.
ದತ್ತಾಂಶಗಳ ಭದ್ರತಾ ಅಪಾಯಗಳನ್ನು ಉಲ್ಲೇಖಿಸಿ ಆಸ್ಟ್ರೇಲಿಯಾ ಮತ್ತು ಇಟಲಿಯಂತಹ ದೇಶಗಳು DeepSeek ಬಳಕೆಯ ಮೇಲೆ ಈಗಾಗಲೇ ನಿರ್ಬಂಧಗಳನ್ನು ವಿಧಿಸಿವೆ. ಓಪನ್ ಎಐ ಮುಖ್ಯಸ್ಥ ಸ್ಯಾಮ್ ಆಲ್ಟ್ಮನ್ ಭಾರತಕ್ಕೆ ಭೇಟಿ ನೀಡಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರನ್ನು ಭೇಟಿ ಮಾಡಲಿದ್ದಾರೆ. ಈ ಮಧ್ಯೆ ಈ ಬೆಳವಣಿಗೆ ನಡೆದಿದೆ.
ಸರಕಾರಿ ಕಚೇರಿಯಲ್ಲಿ ಬಳಕೆ ಮಾಡುವ ಕಂಪ್ಯೂಟರ್ ಗಳಲ್ಲಿನ AI ಪರಿಕರಗಳು ಮತ್ತು AI ಅಪ್ಲಿಕೇಶನ್ ಗಳು(ChatGPT, DeepSeek ಇತ್ಯಾದಿ) ದತ್ತಾಂಶಗಳು ಮತ್ತು ದಾಖಲೆಗಳ ಗೌಪ್ಯತೆಗೆ ಅಪಾಯವನ್ನುಂಟುಮಾಡುತ್ತವೆ ಎಂದು ಜನವರಿ 29ರಂದು ಭಾರತೀಯ ಹಣಕಾಸು ಸಚಿವಾಲಯವು ಹೊರಡಿಸಿದ ಸಲಹೆಯಲ್ಲಿ ತಿಳಿಸಿತ್ತು.
ಹಣಕಾಸು ಸಚಿವಾಲಯದ ಮೂವರು ಅಧಿಕಾರಿಗಳು ಈ ಕುರಿತು ಸೂಚನೆ ಬಂದಿರುವುದು ನಿಜ ಎಂದು ಹೇಳಿದ್ದು, ಈ ಸೂಚನೆಯನ್ನು ಆಂತರಿಕವಾಗಿ ನೀಡಲಾಗಿದೆ ಎಂದು ಹೇಳಿದ್ದಾರೆ. ಭಾರತದ ಇತರ ಸಚಿವಾಲಯಗಳಿಗೂ ಇದೇ ರೀತಿಯ ನಿರ್ದೇಶನಗಳನ್ನು ನೀಡಲಾಗಿದೆಯಾ ಎಂಬುವುದು ತಿಳಿದು ಬಂದಿಲ್ಲ ಎಂದು Reuters ವರದಿಯು ತಿಳಿಸಿದೆ.