ಕಾಶ್ಮೀರ ‘ಪರಿಹಾರಕ್ಕೆ’ ಮಧ್ಯಸ್ಥಿಕೆಗೆ ಸಿದ್ಧ: ಟ್ರಂಪ್
ಯಾರದೇ ಮಧ್ಯಸ್ಥಿಕೆ ಬೇಕಿಲ್ಲ ಎಂದ ಭಾರತ

ವಾಷಿಂಗ್ಟನ್: ಅಣ್ವಸ್ತ್ರ ಸಜ್ಜಿತ ದೇಶಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮಕ್ಕಾಗಿ ಅಮೆರಿಕದ ಮಧ್ಯಸ್ಥಿಕೆಯ ಬಳಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು,ಕಾಶ್ಮೀರ ಕುರಿತು ದೀರ್ಘಕಾಲದ ವಿವಾದಕ್ಕೆ ‘ಪರಿಹಾರ’ವನ್ನು ಕಂಡುಕೊಳ್ಳಲು ಭಾರತ ಮತ್ತು ಪಾಕಿಸ್ತಾನಗಳ ಜೊತೆ ಕೆಲಸ ಮಾಡಲು ತಾನು ಸಿದ್ಧ ಎಂದು ಹೇಳಿದ್ದಾರೆ.
‘‘ಕಾಶ್ಮೀರ ಕುರಿತು ‘ಸಾವಿರ ವರ್ಷಗಳ’ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾನು ಉಭಯ ದೇಶಗಳೊಂದಿಗೆ ಶ್ರಮಿಸುತ್ತೇನೆ’’ ಎಂದು ಟ್ರಂಪ್ ರವಿವಾರ ತನ್ನ ಟ್ರುಥ್ ಸೋಷಿಯಲ್ ಪ್ಲ್ಯಾಟ್ಫಾರ್ಮ್ನಲ್ಲಿಯ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ‘ಸಾವಿರ ವರ್ಷಗಳು’ ಅಥವಾ ಅದಕ್ಕಿಂತ ಹೆಚ್ಚು ಸಮಯದಿಂದ ಹೋರಾಡುತ್ತಿವೆ ಎಂಬ ಐತಿಹಾಸಿಕವಾಗಿ ತಪ್ಪಾದ ತನ್ನ ಹೇಳಿಕೆಯನ್ನು ಟ್ರಂಪ್ ಪುನರುಚ್ಚರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರಕಾರವು ಕಾಶ್ಮೀರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಅಂತರರಾಷ್ಟ್ರೀಯ ಮಧ್ಯಸ್ಥಿಕೆಯನ್ನು ನಿರಾಕರಿಸಿರುವ ದಶಕಗಳಷ್ಟು ಹಳೆಯ ನೀತಿಗೆ ಈವರೆಗೆ ತನ್ನ ಬದ್ಧತೆಯನ್ನು ಕಾಯ್ದುಕೊಂಡಿದೆ. ಈ ನಡುವೆ ಅದು 2019ರಲ್ಲಿ ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದೆ.
ಟ್ರಂಪ್ ಹೇಳಿಕೆಗೆ ರವಿವಾರ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ದಕ್ಷಿಣ ಏಶ್ಯಾ ಮತ್ತು ಅದರಾಚೆಗೆ ಶಾಂತಿ ಮತ್ತು ಭದ್ರತೆಯ ಮೇಲೆ ಪರಿಣಾಮಗಳನ್ನು ಹೊಂದಿರುವ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಅಮೆರಿಕದ ಅಧ್ಯಕ್ಷರು ಮುಂದೆ ಬಂದಿರುವುದನ್ನು ತಾನು ಶ್ಲಾಘಿಸುತ್ತೇನೆ ಎಂದು ಹೇಳಿದೆ.
ಜಮ್ಮುಕಾಶ್ಮೀರ ವಿವಾದದ ಯಾವುದೇ ನ್ಯಾಯಯುತ ಮತ್ತು ಶಾಶ್ವತ ಇತ್ಯರ್ಥವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಂಬಂಧಿತ ನಿರ್ಣಯಗಳಿಗೆ ಅನುಗುಣವಾಗಿರಬೇಕು ಮತ್ತು ಸ್ವ-ನಿರ್ಣಯದ ಹಕ್ಕು ಸೇರಿದಂತೆ ಕಾಶ್ಮೀರಿ ಜನರ ಮೂಲಭೂತ ಹಕ್ಕುಗಳ ಮರುಸ್ಥಾಪನೆಯಾಗಬೇಕು ಎಂದು ಪಾಕಿಸ್ಥಾನವು ಪುನರುಚ್ಚರಿಸುತ್ತದೆ ಎಂದು ಅದು ತಿಳಿಸಿದೆ.
► ಯಾರದೇ ಮಧ್ಯಸ್ಥಿಕೆ ಬೇಕಿಲ್ಲ: ಭಾರತ
ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಭಾರತ ಮತ್ತು ಪಾಕಿಸ್ತಾನದ ಜೊತೆ ಕೆಲಸ ಮಾಡಲು ತಾನು ಸಿದ್ಧ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂದಿಟ್ಟಿರುವ ಕೊಡುಗೆಗೆ ಪ್ರತಿಕ್ರಿಯಿಸಿರುವ ಭಾರತವು, ಕಾಶ್ಮೀರಕ್ಕೆ ಸಂಬಂಧಿಸಿದಂತೆ ಯಾರದೇ ಮಧ್ಯಸ್ಥಿಕೆಯನ್ನು ತಾನು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಮಧ್ಯಸ್ಥಿಕೆ ಕೊಡುಗೆಯನ್ನು ಸ್ವಾಗತಿಸಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರು ಅದಕ್ಕಾಗಿ ಟ್ರಂಪ್ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಆದರೆ ಭಾರತದ ನಿಲುವು ಸ್ಪಷ್ಟವಾಗಿದೆ. ಅದು ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ವನ್ನು ಮರಳಿ ಪಡೆಯಲು ಬಯಸಿದೆ.
‘ಕಾಶ್ಮೀರ ಕುರಿತು ನಮ್ಮ ನಿಲುವು ಅತ್ಯಂತ ಸ್ಪಷ್ಟವಾಗಿದೆ, ಒಂದೇ ಒಂದು ವಿಷಯವು ಬಾಕಿಯುಳಿದಿದೆ-ಪಿಒಕೆಯ ವಾಪಸಾತಿ. ಇದು ಬಿಟ್ಟು ಮಾತನಾಡಲು ಬೇರೇನೂ ಇಲ್ಲ. ಭಯೋತ್ಪಾದಕರನ್ನು ಹಸ್ತಾಂತರಿಸುವ ಕುರಿತು ಅವರು ಮಾತನಾಡುವುದಾದರೆ ನಾವು ಮಾತುಕತೆಗೆ ಸಿದ್ಧ. ಇತರ ಯಾವುದೇ ವಿಷಯವನ್ನು ನಾವು ಉದ್ದೇಶಿಸಿಲ್ಲ. ಯಾರೇ ಮಧ್ಯಸ್ಥಿಕೆ ಮಾಡುವುದು ನಮಗೆ ಬೇಕಿಲ್ಲ. ಮಧ್ಯಸ್ಥಿಕೆ ಮಾಡಲು ನಮಗೆ ಯಾರದೇ ಅಗತ್ಯವಿಲ್ಲ’ ಎಂದು ಸರಕಾರದ ಮೂಲಗಳು ತಿಳಿಸಿದವು.







