ಡಾ. ಜ್ಯೋತ್ಸ್ನಾ ಶ್ರೀಕಾಂತ್ ಗೆ ಬ್ರಿಟನ್ನಿನ ಮೂರನೆಯ ಅತ್ಯುನ್ನತ ನಾಗರಿಕ ಪ್ರಶಸ್ತಿ ಎಂಬಿಇ ಪ್ರದಾನ
ಪ್ರತಿಷ್ಠಿತ ಪ್ರಶಸ್ತಿ ಪಡೆದ ಪ್ರಪ್ರಥಮ ಕರ್ನಾಟಕದ ವಯೋಲಿನ್ ಕಲಾವಿದೆ ಎಂಬ ಹೆಗ್ಗಳಿಕೆ
ಡಾ. ಜ್ಯೋತ್ಸ್ನಾ ಶ್ರೀಕಾಂತ್ | Photo: @violinjyotsna \X
ಲಂಡನ್: ಪ್ರಖ್ಯಾತ ವಯೋಲಿನ್ ಕಲಾವಿದೆ ಡಾ. ಜ್ಯೋತ್ಸ್ನಾ ಶ್ರೀಕಾಂತ್ ಅವರಿಗೆ ದೊರೆ ಚಾರ್ಲ್ಸ್ III ಪ್ರತಿಷ್ಠಿತ ಎಂಬಿಇ (ಮೆಂಬರ್ ಆಫ್ ದ ಆರ್ಡರ್ ಆಫ್ ದ ಬ್ರಿಟಿಷ್ ಎಂಪೈರ್) ಗೌರವವನ್ನು ಪ್ರದಾನ ಮಾಡಲಾಗಿದೆ. ಗ್ರೇಟ್ ಬ್ರಿಟನ್ ನ ಮೂರನೆಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಎಂಬಿಇಯನ್ನು ಅಂತಾರಾಷ್ಟ್ರೀಯ ಸಂಗೀತಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ತಮ್ಮ ಜನ್ಮ ದಿನವಾದ ಡಿಸೆಂಬರ್ 12, 2023ರಂದು ಗ್ರೇಟ್ ಬ್ರಿಟನ್ ನ ವಿಂಡ್ಸರ್ ಕ್ಯಾಸಲ್ ನಲ್ಲಿ ದೊರೆ ಚಾರ್ಲ್ಸ್ III ಪ್ರದಾನ ಮಾಡಿದರು.
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವ ಜ್ಯೋತ್ಸ್ನಾ, ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿರುವ ಪ್ರಪ್ರಥಮ ಕರ್ನಾಟಕ ಸಂಗೀತಗಾರ್ತಿಯಾಗಿದ್ದಾರೆ.
ಇದಕ್ಕೂ ಮುನ್ನ ಪ್ರತಿಷ್ಠಿತ ಎಂಬಿಇ ಪ್ರಶಸ್ತಿಗೆ ಪಾತ್ರರಾಗಿರುವ ಅಂತಾರಾಷ್ಟ್ರೀಯ ತಾರೆಯರ ಪೈಕಿ ಅಡೀಲ್, ಎಡ್ ಶೀರನ್ ಹಾಗೂ ಮಾರ್ಕಸ್ ರ್ಯಾಶ್ ಫೋರ್ಡ್ ಸೇರಿದ್ದಾರೆ.
ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಮಾತನಾಡಿದ ಜ್ಯೋತ್ಸ್ನಾ, “ಈ ಪ್ರತಿಷ್ಠಿತ ಪ್ರಶಸ್ತಿಯಿಂದ ನಾನು ಸಮ್ಮಾನಿತಳಾಗಿದ್ದೇನೆ. ಈ ಪ್ರಶಸ್ತಿಯನ್ನು ನನ್ನ ವೃತ್ತಿ ಜೀವನಕ್ಕೆ ಭಾರಿ ಪ್ರೋತ್ಸಾಹ ನೀಡಿದ ನನ್ನ ಗುರುಗಳಿಗೆ ಹಾಗೂ ಕುಟುಂಬಕ್ಕೆ ಅರ್ಪಿಸುತ್ತೇನೆ. ಸಂಗೀತ ಕ್ಷೇತ್ರಕ್ಕೆ ಮತ್ತಷ್ಟು ಕೊಡುಗೆ ನೀಡಲು ಇನ್ನಷ್ಟು ಪರಿಶ್ರಮ ಪಡುತ್ತೇನೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.